೪ ತಿಂಗಳಿಂದ ವೇತನವಿಲ್ಲದೇ ದುಡಿಯುತ್ತಿರುವ ಅತಿಥಿ ಶಿಕ್ಷಕರು

KannadaprabhaNewsNetwork |  
Published : Oct 21, 2024, 12:46 AM IST
ಸ | Kannada Prabha

ಸಾರಾಂಶ

ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ೧೧೫, ಪ್ರೌಢಶಾಲೆಯಲ್ಲಿ ೨೪ ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಸುರೇಶ ಯಳಕಪ್ಪನವರ

ಹಗರಿಬೊಮ್ಮನಹಳ್ಳಿ: ತಾಲೂಕಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿಯಾಗದೇ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ.

ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ೧೧೫, ಪ್ರೌಢಶಾಲೆಯಲ್ಲಿ ೨೪ ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ ₹೧೦,೦೦೦ ಹಾಗೂ ಪ್ರೌಢಶಾಲೆಯ ಶಿಕ್ಷಕರಿಗೆ ₹೧೦೫೦೦ ವೇತನ ನಿಗದಿಪಡಿಸಿದೆ.

ಸರ್ಕಾರದ ಹೊಸ ಆದೇಶದಂತೆ ತಾಲೂಕಿನ ಆಯ್ದ ಶಾಲೆಗಳಲ್ಲಿ ಎಲ್‌ಕೆಜಿ ಯುಕೆಜಿ ಆರಂಭಿಸಲಾಗಿದೆ. ೩೨ ಅತಿಥಿ ಶಿಕ್ಷಕರು ಜೊತೆಗೆ ಶಾಲಾ ಆಯಾಗಳು ಕೂಡ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೂ ವೇತನ ನೀಡದೇ ಸರ್ಕಾರ ಕಣ್ಮುಚ್ಚಿ ಕುಳಿತಿದೆ.

ಈ ಸಾಲಿನ ಶೈಕ್ಷಣಿಕ ವರ್ಷ ಜೂನ್ ತಿಂಗಳಲ್ಲಿಯೇ ಕರ್ತವ್ಯಕ್ಕೆ ಹಾಜರಾದ ಶಿಕ್ಷಕರಿಗೆ ಆಕ್ಟೋಬರ್ ತಿಂಗಳು ಮುಕ್ತಾಯವಾಗುತ್ತಾ ಬಂದರೂ ಈವರೆಗೂ ಗೌರವಧನ ಪಾವತಿಯಾಗಿಲ್ಲ. ಹೀಗಾಗಿ ಅತಿಥಿ ಶಿಕ್ಷಕರು ಕುಟುಂಬ ನಿರ್ವಹಣೆಗೆ ಸಾಲ ಮಾಡಿ ಜೀವನ ನಡೆಸುವಂತಾಗಿದೆ.

ಖಾಯಂ ಶಿಕ್ಷಕರಂತೆ ಅತಿಥಿ ಶಿಕ್ಷಕರು ಕೂಡ ಶೈಕ್ಷಣಿಕ ಚಟುವಟಿಕೆಗಳಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಸಮರ್ಥ ಬೋಧನೆ ಕಾರ್ಯದಲ್ಲಿ ತೊಡಗಿದ್ದಾರೆ. ತಾಲೂಕಿನ ಶಿಕ್ಷಕರ ಕೊರತೆ ಇರುವ ಎಷ್ಟೋ ಶಾಲೆಗಳಲ್ಲಿ ಅತಿಥಿ ಶಿಕ್ಷಕರೇ ಎಲ್ಲ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತಿರುವ ಶಿಕ್ಷಕರಿಗೆ ವೇತನ ದೊರೆಯದೆ, ತಮ್ಮ ಜೀವನಕ್ಕೆ ಭದ್ರತೆ ಇಲ್ಲದಂತಾಗಿದೆ.

ಖಾಯಂ ಶಿಕ್ಷಕರ ವೇತನ ₹೬೦ ಸಾವಿರಕ್ಕೂ ಅಧಿಕವಿದೆ. ಸಕಾಲಕ್ಕೆ ಅವರಿಗೆ ವೇತನ ಪಾವತಿಯಾಗುತ್ತದೆ. ಆದರೆ, ಇವರ ಜೊತೆಯಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಕೇವಲ ₹೧೦ ಸಾವಿರ ವೇತನವಿದೆ. ಆದರೆ ಅರ್ಧ ಶೈಕ್ಷಣಿಕ ವರ್ಷ ಮುಗಿದರೂ ಇವರ ವೇತನ ನೀಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ.

ಯಾವುದೇ ಕೌಶಲ್ಯವಿಲ್ಲದೇ ನರೇಗಾ ಕೂಲಿಕಾರ್ಮಿಕ ದಿನಕ್ಕೆ ₹೩೪೯ ಕನಿಷ್ಠ ವೇತನ ಪಡೆಯುತ್ತಾನೆ. ಆದರೆ, ತರಬೇತಿ ಪಡೆದ ಅತಿಥಿ ಶಿಕ್ಷಕರು ಕೇವಲ ಮಾಸಿಕ ₹೧೦ ಸಾವಿರ ಗೌರವಧನ ಪಡೆಯುತ್ತಿರುವುದು ಸರ್ಕಾರದ ಇಬ್ಬಗೆಯ ನೀತಿಯಾಗಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಅತಿಥಿ ಶಿಕ್ಷಕರಿಗೆ ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡದೇ ಆರ್ಥಿಕ ಸಂಕಷ್ಟಕ್ಕೆ ತಳ್ಳಿದ್ದಾರೆ.

ಅತಿಥಿ ಶಿಕ್ಷಕರನ್ನು ದುಡಿಸಿಕೊಂಡು ವೇತನ ಮಾಡುವಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಅನುದಾನ ಬಿಡುಗಡೆ ವಿಳಂಬವಾಗಿದೆ. ಅತಿಥಿ ಶಿಕ್ಷಕರ ಆರ್ಥಿಕ ಸಂಕಷ್ಟಕ್ಕೆ ಸರ್ಕಾರವೇ ನೇರ ಹೊಣೆಯಾಗಿದೆ. ಐದು ತಿಂಗಳಿಂದ ವೇತನ ಪಾವತಿಯಾಗದೇ ನಮ್ಮ ಜೀವನ ನಿರ್ವಹಣೆ ತುಂಬಾ ಕಷ್ಟಕರವಾಗಿದೆ ಎನ್ನುತ್ತಾರೆ ಅತಿಥಿ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹಗರಿಬೊಮ್ಮನಹಳ್ಳಿ ಸತೀಶ್ ಕೊಳ್ಳಿ.

ಈಗಾಗಲೇ ತಾಲೂಕಿನ ಎಲ್ಲ ಬಿಇಒಗಳ ಕಚೇರಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅತಿಥಿ ಶಿಕ್ಷಕರ ಬ್ಯಾಂಕ್ ಖಾತೆಗೆ ವೇತನ ಜಮೆ ಮಾಡಲಾಗುವುದು. ಎಲ್‌ಕೆಜಿ, ಯುಕೆಜಿ ಅತಿಥಿ ಶಿಕ್ಷಕರ ವೇತನ ಇನ್ನೂ ಸರ್ಕಾರದಿಂದ ಬಿಡುಗಡೆಯಾಗಿಲ್ಲ ಎನ್ನುತ್ತಾರೆ ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ