ಬ್ರಾಹ್ಮಣರು ನಾಗರಿಕ ಸೇವೆ ಹುದ್ದೆಗೆ ಆಸಕ್ತಿ ತೋರಿಸಿ ಎಂದ ಗುಂಡೂರಾವ್

KannadaprabhaNewsNetwork | Published : Sep 28, 2024 1:19 AM

ಸಾರಾಂಶ

ಬ್ರಾಹ್ಮಣ ಸಮುದಾಯದವರು ನಾಗರಿಕ ಸೇವೆ ಹುದ್ದೆಗಳನ್ನು ಅಲಂಕರಿಸುವ ಮೂಲಕ ಸಮುದಾಯದ ಬಡ ವರ್ಗದವರಿಗೆ ಸಹಾಯ ಮಾಡಬಹುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬ್ರಾಹ್ಮಣ ಸಮುದಾಯದವರು ನಾಗರಿಕ ಸೇವೆ ಹುದ್ದೆಗಳನ್ನು ಅಲಂಕರಿಸುವ ಮೂಲಕ ಸಮುದಾಯದ ಬಡ ವರ್ಗದವರಿಗೆ ಸಹಾಯ ಮಾಡಬಹುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ನಗರದ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಲ್ಲಿ ಬ್ರಾಹ್ಮಣ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ‘ವಿಶ್ವಾಮಿತ್ರ’ ಪ್ರತಿಭಾ ಪುರಸ್ಕಾರ ವಿತರಿಸಿ ಅವರು ಮಾತನಾಡಿದರು, ಬ್ರಾಹ್ಮಣರು ಮುಂದುವರಿದ ಸಮಾಜಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕೆ ಸಮುದಾಯದಲ್ಲಿರುವ ಬಡವರಿಗೆ ಅನ್ಯಾಯವಾಗಬಾರದು. ಸರ್ಕಾರಿ ಕೆಲಸಗಳು ಸಿಗಲಾರದೆ ಬಹುತೇಕರು ವೈದ್ಯಕೀಯ, ಎಂಜಿನಿಯರ್ ಕ್ಷೇತ್ರಕ್ಕೆ ಆಸಕ್ತಿ ತೋರುತ್ತಿದ್ದಾರೆ. ಅವರು ನಾಗರಿಕ ಸೇವೆ ಹುದ್ದೆಗಳನ್ನು ಅಲಂಕರಿಸಿದರೆ, ಸಮಾಜದ ಬಡವರಿಗೂ ಸಹಾಯ ಮಾಡಬಹುದು ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಬ್ರಾಹ್ಮಣ ಸಮುದಾಯ ಮುಂದುವರೆದಿರಬಹುದು. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಅನೇಕರು ಬಡವರಿದ್ದಾರೆ. ಅವರಿಗೆ ಸರ್ಕಾರಗಳು ಸೌಲಭ್ಯಗಳನ್ನ ಒದಗಿಸಿಕೊಡಬೇಕು ಎಂದರು.

ಈ ವೇಳೆ ವಿಶ್ವಾಮಿತ್ರ ಹೆಸರಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಹೆಚ್ಚು ಅಂಕ ಪಡೆದ ಬ್ರಾಹ್ಮಣ ಸಮುದಾಯದ 127 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೊಡು ಜಯಸಿಂಹ ಉಪಸ್ಥಿತರಿದ್ದರು.

ಮಂಡಳಿಗೆ ಹೆಚ್ಚಿನ ಅನುದಾನ

ಸರ್ಕಾರದಿಂದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ನೀಡುತ್ತಿರುವ ₹10 ಕೋಟಿ ಅನುದಾನ ಸಾಲದು. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಮಂಡಳಿಗೆ ಹೆಚ್ಚಿನ ಅನುದಾನ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ದಿನೇಶ್‌ ಗುಂಡೂರಾವ್‌ ಭರವಸೆ ನೀಡಿದರು.ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರವನ್ನು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ವಿತರಿಸಿದರು. ಮಾಜಿ ಸಚಿವ ಆರ್.ವಿ ದೇಶಪಾಂಡೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ, ಮಂಡಳಿ ಅಧ್ಯಕ್ಷ ಅಸಗೊಡು ಜಯಸಿಂಹ ಇದ್ದರು.

Share this article