ಗುರುಮಠಕಲ್‌ ಜೆಡಿಎಸ್‌ ಶಾಸಕ ಶರಣಗೌಡ ಕಂದಕೂರ ಮನವೊಲಿಕೆ ಯತ್ನ

KannadaprabhaNewsNetwork |  
Published : Apr 09, 2024, 12:45 AM IST
ಗುರುಮಠಕಲ್ ಶಾಸಕ ಕಂದಕೂರು ಅವರ ಯಾದಗಿರಿ ನಿವಾಸಕ್ಕೆ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್‌ ಸೋಮವಾರ ಸಂಜೆ ಭೇಟಿ ನೀಡಿದ್ದರು. | Kannada Prabha

ಸಾರಾಂಶ

ಮೊದಲಿನಿಂದಲೂ ಜೆಡಿಎಸ್‌ ಬಿಜೆಪಿ ಮೈತ್ರಿಗೆ ಮುನಿದಿದ್ದ ಗುರುಮಠಕಲ್‌ ಜೆಡಿಎಸ್‌ ಶಾಸಕ ಶರಣಗೌಡ ಕಂದಕೂರ ಇತ್ತೀಚೆಗೆ ಬಿಜೆಪಿ ಕುರಿತು ಮತ್ತಷ್ಟು ತೀವ್ರ ಅಸಮಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಸ್ಥಳೀಯವಾಗಿ ಮೈತ್ರಿ ಮುರಿಯುವ ಆತಂಕ ಎದುರಾಗಿದ್ದೇ ತಡ ಕಂದಕೂರ ನಿವಾಸಕ್ಕೆ ಬಿಜೆಪಿ ಘೋಷಿತ ಅಭ್ಯರ್ಥಿ ಡಾ. ಉಮೇಶ ಜಾಧವ್‌ ದೌಡಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಮೊದಲಿನಿಂದಲೂ ಜೆಡಿಎಸ್‌ ಬಿಜೆಪಿ ಮೈತ್ರಿಗೆ ಮುನಿದಿದ್ದ ಗುರುಮಠಕಲ್‌ ಜೆಡಿಎಸ್‌ ಶಾಸಕ ಶರಣಗೌಡ ಕಂದಕೂರ ಇತ್ತೀಚೆಗೆ ಬಿಜೆಪಿ ಕುರಿತು ಮತ್ತಷ್ಟು ತೀವ್ರ ಅಸಮಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಸ್ಥಳೀಯವಾಗಿ ಮೈತ್ರಿ ಮುರಿಯುವ ಆತಂಕ ಎದುರಾಗಿದ್ದೇ ತಡ ಕಂದಕೂರ ನಿವಾಸಕ್ಕೆ ಬಿಜೆಪಿ ಘೋಷಿತ ಅಭ್ಯರ್ಥಿ ಡಾ. ಉಮೇಶ ಜಾಧವ್‌ ದೌಡಾಯಿಸಿದ್ದಾರೆ.

ಬಿಜೆಪಿ ಮೈತ್ರಿ ಧರ್ಮದ ಮಾತುಗಳನ್ನಾಡುತ್ತದೆ, ಆದರೆ ಪಾಲನೆಯಲ್ಲಿ ಹಿಂದೆ ಎಂಬ ಅಸಮಧಾನ ಶಾಸಕ ಕಂದಕೂರ ಅವರಲ್ಲಿ ಮೂಡಿತ್ತು. ಬಿಜೆಪಿ ತನ್ನ ಪ್ರಚಾರ ಕಾರ್ಯದಲ್ಲಿ ಜೆಡಿಎಸ್‌ ಶಾಸಕರ, ಮುಖಂಡರು ಅಥವಾ ಕಾರ್ಯಕರ್ತರು ಇರಲಿ ದಳದ ಅಧಿನಾಯಕ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರನ್ನೂ ನಿರ್ಲಕ್ಷಿಸುತ್ತಿದೆ ಎಂದು ಕೆಲ ದಿನಗಳ ಹಿಂದೆ ಆಕ್ರೋಶ ಹೊರ ಹಾಕಿದ್ದೇ ತಡ, ಬಿಜೆಪಿ ಬ್ಯಾನರ್ಗಳಲ್ಲಿ ಗೌಡರ ಚಿತ್ರ ಮೂಡಲಾರಂಭಿಸಿತ್ತು.

ಕಲಬುರಗಿ ಮತಕ್ಷೇತ್ರ ವ್ಯಾಪ್ತಿಗೆ ಬರುವ, ಜೆಡಿಎಸ್ ಶಾಸಕ ಕಂದಕೂರ ಅವರ ಕ್ಷೇತ್ರ ಗುರಮಠಕಲ್‌ನಲ್ಲಿ ಡಾ. ಜಾಧವ್‌ ಅವರ ಸಮದಾಯದ ಬಂಜಾರಾ ಮತದಾರರ ಸಂಖ್ಯೆ ಗಣನೀಯವಾಗಿವೆ. ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದೂ ಸತ್ಯ. ಇಷ್ಟೆಲ್ಲ ಸಮುದಾಯದ ಮತ ಹೊಂದಿದ್ದರೂ ಅವು ವಿಧಾನಸಭಾ ಕ್ಷೇತ್ರ ನಾಯಕ ಕಂದಕೂರ ಮಾತು ದಾಟೋಲ್ಲ ಎಂಬ ವಿಷಯ ಡಾ. ಜಾಧವ್‌ ಅವರ ನಿದ್ದೆಗೆಡಿಸಿತ್ತು. ಬಂಜಾರಾ ಸಮುದಾಯದ ವ್ಯಕ್ತಿಯೊಬ್ಬರನ್ನು ಕಲಬುರಗಿಯಿಂದ ಪಕ್ಷೇತರ ಅಭ್ಯರ್ಥಿಯನ್ನಾಗಿಸಿ, ಪರೋಕ್ಷ ಬೆಂಬಲ ಕೊಡುವ ಬಗ್ಗೆ ಕಂದಕೂರು ಪಾಳೆಯದಲ್ಲಿ ಚಿಂತನೆ ನಡೆದಿತ್ತು. ಈ ಕುರಿತು "ಕನ್ನಡಪ್ರಭ " ಏ.2 ರಂದು ವರದಿ ಮಾಡಿತ್ತು.

ಜೆಡಿಎಸ್‌ ಪ್ರಮುಖರನ್ನು ನಿರ್ಲಕ್ಷಿಸುತ್ತಿರುವ ಬಿಜೆಪಿ ವರ್ತನೆ ಮಿತಿ ಮೀರುತ್ತಿದೆ ಎಂಬಿತ್ಯಾದಿ ಆರೋಪಗಳು ಒಂದಿಲ್ಲೊಂದು ವಿಷಯವಾಗಿ ಸ್ಥಳೀಯವಾಗಿ ಜೆಡಿಎಸ್‌ ಜೊತೆ ಮೈತ್ರಿ ಮುರಿಯುವತ್ತ ಸಾಗುವ ಹಂತಕ್ಕೆ ಬರುತ್ತಿರುವದು ಗಮನಕ್ಕೆ ಬರುತ್ತಲೇ, ಡಾ. ಉಮೇಶ ಜಾಧವ್‌ ಸೋಮವಾರ ಸಂಜೆ ಶಾಸಕ ಕಂದಕೂರ ಅವರ ಯಾದಗಿರಿಯಲ್ಲಿನ ನಿವಾಸಕ್ಕೆ ಧಾವಿಸಿ, ಸುಧೀರ್ಘವಾಗಿ ಚರ್ಚಿಸಿ ಮುನಿಸು ಶಮನಕ್ಕೆ ಯತ್ನಿಸಿದ್ದಾರೆ. ಈ ಮೂಲಕ ಮೈತ್ರಿ ಮುರಿಯದಂತೆ ಕಸರತ್ತು ನಡೆಸಿದ್ದಾರೆ.

ಇದಕ್ಕೂ ಮುನ್ನ, ಕಲಬುರಗಿ ಜಿಲ್ಲಾ ಜೆಡಿಎಸ್‌ ನಾಯಕರ ದಂಡು ಶಾಸಕ ಶರಣಗೌಡ ಪಾಟೀಲ್‌ ಕಂದಕೂರ ಅವರ ಮನೆಗೆ ಸೋಮವಾರ ಭೇಟಿ ನೀಡಿತ್ತು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್‌, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಬಾಲರಾಜ್‌ ಗುತ್ತೇದಾರ, ಯುವ ನಾಯಕರಾದ ಶಿವಕುಮಾರ ನಾಟೀಕಾರ, ಕೃಷ್ಣಾರೆಡ್ಡಿ ಇತರರು ಶಾಸಕ ಕಂದಕೂರ ಜೊತೆ ಮೈತ್ರಿಕೂಟ ಹಾಗೂ ಲೋಕಸಭೆ ಚುನಾವಣೆ ಬಗ್ಗೆ ಸುಧೀರ್ಘ ಮಾತುಕತೆ ನಡೆಸಿದ್ದರು. ಅಚ್ಚರಿ ಎಂದರೆ, ಕಳೆದೆರಡು ದಿನಗಳ ಹಿಂದೆಯಷ್ಟೇ ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು ಶಾಸಕ ಕಂದಕೂರು ಅವರ ನಿವಾಸಕ್ಕೆ ಭೇಟಿ ನೀಡಿ, ಬೆಂಬಲ ಕೋರಿದ್ದರು.

ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭಾ ಮತಕ್ಷೇತ್ರಗಳ ಪೈಕಿ, ಯಾದಗಿರಿ, ಶಹಾಪುರ ಹಾಗೂ ಸುರಪುರ (ಶೋರಾಪುರ) ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿದ್ದರೆ, ಗುರುಮಠಕಲ್‌ ವಿಧಾನಸಭಾ ಕ್ಷೇತ್ರ ಕಲಬುರಗಿ ಲೋಕಸಭೆ ವ್ಯಾಪ್ತಿಗೆ ಬರುತ್ತದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಸಖ್ಯ ಮಾಡಿದ್ದ ಕಾಂಗ್ರೆಸ್‌ನ ಅಭ್ಯರ್ಥಿಯಾಗಿದ್ದ ಇಂದಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಸಹ ಅಂದು ಶಾಸಕರಾಗಿದ್ದ ನಾಗನಗೌಡ ಕಂದಕೂರ ಅವರ ನಿವಾಸಕ್ಕೆ ಬಂದು ಸಹಕಾರ ಯಾಚಿಸಿ ಹೋಗಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ