ಗುರು ಶಿಷ್ಯರ ಸಂಬಂಧ ವೃದ್ಧಿಗೆ ಗುರುವಂದನೆ ಸಹಕಾರಿ

KannadaprabhaNewsNetwork |  
Published : May 18, 2026, 01:15 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ     | Kannada Prabha

ಸಾರಾಂಶ

ಚಳ್ಳಕೆರೆ ನಗರದ ಛೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಭಾನುವಾರ ಹಳೆ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಆಧುನಿಕ ಕಾಲಘಟ್ಟದಲ್ಲಿ ಗುರು-ಶಿಷ್ಯರ ಸಂಬಂಧಗಳನ್ನು ವೃದ್ಧಿಸಲು ಗುರುವಂದನಾ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ನಿವೃತ್ತ ಶಿಕ್ಷಕ ಹಾಗೂ ನಗರಸಭೆಯ ಮಾಜಿ ನಾಮನಿರ್ದೇಶನ ಸದಸ್ಯ ಮಹಮದ್ ಅನ್ವರ್ ಅಭಿಪ್ರಾಯ ಪಟ್ಟರು.

ನಗರದ ಛೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಭಾನುವಾರ ಬಾಪೂಜಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 1989-90ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಓದಿದ ವಿದ್ಯಾರ್ಥಿಗಳು ಇದೀಗ ಉತ್ತಮ ಜೀವನ ನಿರ್ವಹಣೆ ಮಾಡುವುದನ್ನು ಕಣ್ಣಾರೆ ಕಂಡಿದ್ದೇನೆ. ಇಂತಹ ನೂರಾರು ವಿದ್ಯಾರ್ಥಿಗಳು ನಮ್ಮ ಮುಂದೆಯೇ ಉತ್ತಮ ಬದುಕು ಕಟ್ಟಿಕೊಂಡಿರುವುದು ತುಂಬಾ ಸಂತೋಷ ತಂದಿದೆ ಎಂದರು.

ಕಳೆದ ಒಂದೂವರೆ ದಶಕದ ಹಿಂದೆ ಇದ್ದಂತಹ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳು ಶಿಕ್ಷಕರ ಸಂಬಂಧ ಇದೀಗ ನಶಿಸಿ ಹೋಗುತ್ತಿವೆ. ಗುರು ಶಿಷ್ಯರ ಸಂಬಂಧ ಸಮಾಜದಲ್ಲಿ ಗಟ್ಟಿಗೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.

ನಾವು ಶಾಲೆಯಲ್ಲಿ ಕಲಿಸಿದ ಶಿಕ್ಷಣವನ್ನು ಸರಿಯಾದ ಮಾರ್ಗದಲ್ಲಿ ಕಲಿತು ಉತ್ತಮ ಪ್ರಜೆಗಳಾದಾಗ ಶಿಕ್ಷಕರಿಗೆ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ ಎಂದು ಹೇಳಿದರು.

ಗುರು ಮನಸ್ಸು ಮಾಡಿದರೆ ಒಬ್ಬ ವಿದ್ಯಾರ್ಥಿಯನ್ನು ಏನು ಬೇಕಾದರೂ ಮಾಡಬಹುದು. ತಿದ್ದಿ ತೀಡಿ ಶಿಲ್ಪಿಯನ್ನಾಗಿ ಮಾಡಬಹುದು. ಇಲ್ಲವೇ ಈ ದೇಶ ಆಳುವ ಪ್ರಜೆಗಳಾಗಿ ಸಂವಿಧಾನ ಕಾನೂನು ನ್ಯಾಯ ಕೊಡಿಸಬಹುದು ಎಂದು ಹೇಳಿದರು.

ನಗರಸಭೆ ಮಾಜಿ ಸದಸ್ಯ ಸಿ.ಎಂ.ವಿಶುಕುಮಾರ್ ಮಾತನಾಡಿ, ಗುರು-ಶಿಷ್ಯರ ಅನುಬಂಧಕ್ಕೆ ಪುರಾಣ ಪುಣ್ಯಕತೆಗಳೇ ಸಾಕ್ಷಿ ಹೇಳುತ್ತವೆ. ಆದ್ದರಿಂದ ವಿದ್ಯೆ ಕಲಿಸಿದ ಗುರುವನ್ನು ಜೀವನದಲ್ಲಿ ಒಮ್ಮೆಯಾದರೂ ಗೌರವಿಸಿ ವಂದನೆ ಸಲ್ಲಿಸುವುದು ವಿದ್ಯಾರ್ಥಿಗಳ ಕರ್ತವ್ಯ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಳೆಯ ವಿದ್ಯಾರ್ಥಿ ತಿಪ್ಪೇಸ್ವಾಮಿ, 36 ವರ್ಷಗಳ ಹಿಂದೆ ಶಿಕ್ಷಣ ಕೊಟ್ಟ ಗುರುಗಳನ್ನು ನಿವೃತ್ತಿಯಾದಂತಹ ಸಂದರ್ಭದಲ್ಲಿ ಗುರುವಂದನೆ ಮಾಡಿ ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ನುಡಿದರು.

ಹಳೆಯ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದ ಅನೇಕ ಘಟನಾವಳಿಗಳನ್ನು ಮೆಲುಕು ಹಾಕಿದರು. ನಿವೃತ್ತ ಶಿಕ್ಷಕರಾದ ಎನ್.ರವಿಕುಮಾರ್, ಟಿ.ಎಂ.ಮಹೇಶ್ವರಪ್ಪ, ಎಲ್.ರಾಮಲಿಂಗಪ್ಪ, ಇ.ರಾಜಶೇಖರ್, ಚಲುವಪ್ಪ, ಸಹಾಯಕರಾದ ವೀರಭದ್ರಪ್ಪ, ಪಾಪಣ್ಣ, ರುದ್ರಣ್ಣ, ಯಾಕುಬ್ ಅಲಿ ಅವರನ್ನು ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿರುಗಾಳಿ, ಆಲಿಕಲ್ಲು ಮಳೆಗೆ ಸಾವಿರಾರು ಎಕರೆ ಬೆಳೆ ನಾಶ
ಎಲ್ಲ ಸಮುದಾಯಗಳ ಹಿತ ಕಾಯುವ ಹೊಣೆ ನನ್ನ ಮೇಲಿದೆ