ಕುಮಟಾ: ವಿದ್ಯೆ ದಾನ ಮಾಡಿದಷ್ಟೂ ವೃದ್ಧಿ ಹೊಂದುತ್ತದೆ. ವಿದ್ಯೆ ಎನ್ನುವುದು ಒಂದು ಅಧ್ಯಾತ್ಮ, ಇದು ಮೋಕ್ಷಕ್ಕೆ ದಾರಿ. ಇಂತಹ ವಿದ್ಯೆ ಧಾರೆ ಎರೆಯುವ ಗುರುಗಳು ಶ್ರೇಷ್ಠ ಸ್ಥಾನ ಪಡೆಯುತ್ತಾರೆ. ಆದ್ದರಿಂದಲೇ ಗುರುಗಳ ಸ್ಥಾನ ಮಹತ್ವದ್ದಾಗಿದೆ ಎಂದು ಹಿರಿಯ ಸಂಗೀತಗಾರ ವಿನಾಯಕ ತೊರ್ವಿ ಹೇಳಿದರು.
ತಾಲೂಕಿನ ಕೂಜಳ್ಳಿಯ ಕುಳಿಹಕ್ಕಲ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು. ಗುರು ಎನ್ನುವುದು ಒಬ್ಬ ವ್ಯಕ್ತಿಯಲ್ಲ, ಇದು ಒಂದು ಮಹಾನ್ ಶಕ್ತಿಯಾಗಿದೆ. ಇಂತಹ ಶ್ರೇಷ್ಠವಾದ ಗುರುಗಳ ಸೇವೆಯನ್ನು ನಿರಂತರವಾಗಿ ಮಾಡುತ್ತಿರುವ ಈ ಕಾರ್ಯ ಶ್ಲಾಘನೀಯವಾಗಿದೆ. ಈ ಪುಣ್ಯದ ಕೆಲಸದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು. ನನಗೆ ನೀಡಿದ ಈ ಷಡಕ್ಷರಿ ಪ್ರಶಸ್ತಿಯನ್ನು ನನ್ನ ಗುರುಗಳ ಪಾದಕಮಲಗಳಿಗೆ ಸಮರ್ಪಿಸುತ್ತೇನೆ ಎಂದರು.ಉಡುಪಿ ಆಭರಣ ಗ್ರೂಪ್‌ನ ಸಂಧ್ಯಾ ಸುಭಾಷ ಕಾಮತ್ ಮಾತನಾಡಿ, ಸಂಗೀತಕ್ಕೆ ಅಗಾಧ ಶಕ್ತಿಯಿದೆ. ಪಂ. ಷಡಕ್ಷರಿ ಗವಾಯಿ ಇಂತಹ ಸಂಗೀತವನ್ನು ಈ ಭಾಗದ ಜನರಿಗೆ ಧಾರೆ ಎರೆದಿದ್ದಾರೆ. ಇಂತಹ ಶ್ರೇಷ್ಠ ಗುರುಗಳನ್ನು ಸ್ಮರಿಸಿ, ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದರು.
ಹಿರಿಯ ಪತ್ರಕರ್ತ, ಹುಬ್ಬಳ್ಳಿಯ ರಂಗನಾಥ ಕಮತರ, ಸ್ವರ ಸಂಗಮದ ಅಧ್ಯಕ್ಷ ಎಸ್.ಜಿ. ಭಟ್ಟ, ಹಿರಿಯ ತಂತ್ರಜ್ಞ ಗಿರೀಶ ಹೆಗಡೆ, ಲೆಕ್ಕ ಪರಿಶೋಧಕ ಸಚಿನ್ ಬಿ.ಆರ್. ಉಪಸ್ಥಿತರಿದ್ದರು. ಷಡಕ್ಷರಿ ಗವಾಯಿ ಅಕಾಡೆಮಿ ಅಧ್ಯಕ್ಷ ವಸಂತರಾವ್ ಅಧ್ಯಕ್ಷತೆ ವಹಿಸಿದ್ದರು.ಈಶ್ವರ ಶಾಸ್ತ್ರಿ ಸ್ವಾಗತಿಸಿದರು. ರಘುಪತಿ ಯಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟಿ.ಎನ್. ಭಟ್ಟ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬೆಳಗ್ಗೆ ಸಂಗೀತ ಕಾರ್ಯಕ್ರಮಕ್ಕೆ ಖ್ಯಾತ ಶಹನಾಯಿ ವಾದಕ ಬಸವರಾಜ ಭಜಂತ್ರಿ ಹೆಡಿಗ್ಗೊಂಡ, ಸ್ವರ ಸಂಗಮದ ಅಧ್ಯಕ್ಷ ಎಸ್.ಜಿ. ಭಟ್ಟ, ಷಡಕ್ಷರಿ ಗವಾಯಿ ಅಕಾಡೆಮಿ ಖಜಾಂಚಿ ಎಸ್.ಎನ್. ಭಟ್ಟ ಚಾಲನೆ ನೀಡಿದರು.ಸಂಗೀತ ಕಾರ್ಯಕ್ರಮ: ಪಂ. ವಿನಾಯಕ ತೊರ್ವಿ, ಮುಂಬೈನ ಕೃಷ್ಣ ಭಟ್ಟ ಅವರ ಗಾಯನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಪಂ. ವಿನಾಯಕ ತೊರ್ವಿ ಅವರಿಗೆ ಖ್ಯಾತ ಹಾರ್ಮೋನಿಯಂ ವಾದಕ ವಿಶ್ವನಾಥ ಕಾನರೆ ಸಾಥ್ ನೀಡಿದರು. ಮುಂಬೈನ ರಾಜನ್ ಮಾಶೇಲ್ಕರ್ ಅವರ ವಯೋಲಿನ್, ಬಸವರಾಜ ಭಜಂತ್ರಿ ಹೆಡಿಗ್ಗೊಂಡ ಅವರ ಶಹನಾಯಿ ವಾದನ ಮೆಚ್ಚುಗೆಗೆ ಪಾತ್ರವಾಯಿತು. ಬಾರ್ಕೂರಿನ ಇಂದಿರಾ ಎಂ. ಭಟ್ಟ, ವಿನಾಯಕ ಹೆಗಡೆ ಹಿರೇಹದ್ದ ಅವರ ಗಾಯನ, ಭಾರ್ಗವ ಭಟ್ಟ ಮತ್ತು ಅಜಯ ಹೆಗಡೆ ಅವರ ಬಾನ್ಸುರಿ-ಹಾರ್ಮೋನಿಯಂ ಜುಗಲ್‌ಬಂಧಿ ಸಂಗೀತಾಸಕ್ತರ ಮನ ಗೆದ್ದಿತು.
ತಬಲಾದಲ್ಲಿ ಗುಣವಂತೆಯ ಎನ್.ಜಿ. ಅನಂತಮೂರ್ತಿ, ಮುಂಬೈನ ಗುರುಶಾಂತ ಸಿಂಗ್, ಹೊಸಗದ್ದೆ ಮಹೇಶ ಹೆಗಡೆ, ಬೆಂಗಳೂರಿನ ಯೋಗೀಶ ಭಟ್ಟ, ಕಡತೋಕಾದ ವಿನೋದ ಭಂಡಾರಿ, ಹರಿಕೇರಿ ಗಣಪತಿ ಹೆಗಡೆ, ಅಂಸಳ್ಳಿ ಅಕ್ಷಯ ಭಟ್ಟ ಸಹಕರಿಸಿದರು. ಕೂಜಳ್ಳಿ ಗೌರೀಶ ಯಾಜಿ, ವರ್ಗಾಸರದ ಅಜೇಯ ಹೆಗಡೆ ಸಂವಾದಿನಿ ಸಾಥ್ ನೀಡಿದರು. ಗೌರೀಶ ಯಾಜಿ ಹಾಗೂ ಶಿಷ್ಯವೃಂದದವರು ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸಿದರು.