ಗದಗ ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್‌.ಕೆ. ಪಾಟೀಲ

KannadaprabhaNewsNetwork |  
Published : Sep 21, 2026, 02:15 AM IST
ಗದಗ ತಾಲೂಕನ್ನು ಬರಗಾಲ ಎಂದು ಘೋಷಿಸದಿರುದನ್ನು ವಿರೋಧಿಸಿ ರೈತ ಸಂಘಟನೆಯಿಂದ ರಸ್ತೆ ತಡೆ ನಡೆಸಿ, ಬೃಹತ್‌ ಪ್ರತಿಭಟನೆ ನಡೆಯಿತು. | Kannada Prabha

ಸಾರಾಂಶ

ಅ. 10ರೊಳಗೆ ಸರಕಾರ ಗದಗ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸುವ ಮೂಲಕ ಮಾಜಿ ಸಚಿವ ಹಾಗೂ ಗದಗ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಚ್.ಕೆ. ಪಾಟೀಲ ತಮ್ಮದೇ ಸರಕಾರದ ವಿರುದ್ಧ ಗುಡುಗಿದ್ದಾರೆ.

ಕನ್ನಡಪ್ರಭ ವಾರ್ತೆ ಮುಳಗುಂದ

ಅ. 10ರೊಳಗೆ ಸರಕಾರ ಗದಗ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸುವ ಮೂಲಕ ಮಾಜಿ ಸಚಿವ ಹಾಗೂ ಗದಗ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಚ್.ಕೆ. ಪಾಟೀಲ ತಮ್ಮದೇ ಸರಕಾರದ ವಿರುದ್ಧ ಗುಡುಗಿದ್ದಾರೆ.

ಪಟ್ಟಣದ ಬಸಾಪೂರ ಕ್ರಾಸ್‌ನಲ್ಲಿ ಭಾನುವಾರ ರೈತ ಸಂಘ ಹಾಗೂ ಹಲವು ಸಂಘಟನೆಗಳಿಂದ ಗದಗ ತಾಲೂಕನ್ನು ಬರಗಾಲ ಎಂದು ಘೋಷಿಸದಿರುವುದನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಮಾಡಿದ್ದೇವು. ಬರಪೀಡಿದ ಪ್ರದೇಶವೆಂದು ಸ್ಪಷ್ಟವಾದ ಚಿತ್ರಣ ನಮ್ಮದಾಗಿತ್ತು. ಅಧಿಕಾರಿಗಳ ವರದಿ ನಂತರ ಸಿಎಂ ಅತ್ಯಂತ ಬರ ಬಿದ್ದಿರುವ ಜಿಲ್ಲೆಯೆಂದು ಧಾವಿಸಿ ಬಂದಿದ್ದರು. ಸಿಎಂ ಡಿ.ಕೆ. ಶಿವಕುಮಾರ್ ಅವರು ಕದಾಂಪೂರದಿಂದ ಕುರ್ತಕೋಟಿವರೆಗೆ ಬೆಳೆ ವೀಕ್ಷಣೆ ಮಾಡಿದ್ದರು. ಇಷ್ಟಾದರೂ ಬರ ಪೀಡಿತ ತಾಲೂಕೆಂದು ಘೋಷಣೆ ಮಾಡಿಲ್ಲ. ರೈತರು ರೊಚ್ಚಿಗೆದ್ದು ಹೋರಾಟ ಮಾಡುತ್ತಿದ್ದಾರೆ. ಗದಗ ತಾಲೂಕಿನಲ್ಲಿಯೇ ಶೇ.49ರಷ್ಟು ಮಳೆ ಕೊರತೆ ಆಗಿದೆ. ಬರ ಪೀಡಿತ ಪ್ರದೇಶವೆಂದು ಯಾಕೇ ಘೋಷಣೆ ಮಾಡಲಿಲ್ಲ..? ಬರ ಘೋಷಣೆ ಮಾಡಲು ಅಡ್ಡಿ ಆದವರು ಯಾರು..? ಅನ್ಯಾಯ, ಮೋಸ ಸಹಿಸೋದಕ್ಕೆ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಹಾಗೂ ಆಡಳಿತ ವ್ಯವಸ್ಥೆ ನಿರ್ಲಕ್ಷ ವಹಿಸಿರುವುದು ಬೇಸರದ ಸಂಗತಿಯಾಗಿದೆ. ಗದಗ ಜಿಲ್ಲೆಯ ಬರಗಾಲದ ಕುರಿತು ಹಿರಿಯ ರಾಜಕಾರಣಿಯಾಗಿ, ಹಿರಿಯ ಶಾಸಕನಾಗಿ ಮನವಿ ಮಾಡಿಕೊಳುತ್ತೇನೆ. ಮುಖ್ಯಮಂತ್ರಿಗಳು ಸ್ವತಃ ಪರಿಶೀಲಿಸಿದ್ದು, ನಿಮ್ಮ ಕಣ್ಣು ನಿಮಗೆ ಸುಳ್ಳು ಹೇಳುತ್ತವೆಯೇ? ನೀವೇ ಪರಿಶೀಲನೆ ನಡೆಸಿದ ಮೇಲೂ ಬರಗಾಲವೆಂದು ಘೋಷಣೆ ಮಾಡುವ ಪಟ್ಟಿಯಲ್ಲಿ ಹೆಸರಿಲ್ಲದಿರುವುದು ಅನ್ಯಾಯದ ಪರಮಾವಧಿ. ರೈತರಿಗೆ ಮಾಡಿದ ಮೋಸವಾಗಿದ್ದು, ಬ್ರಿಟೀಷ್ ಮನಸ್ಥಿತಿಯ ಅಧಿಕಾರಿಶಾಹಿಗಳ ಸುಳ್ಳು ವರದಿ ನಂಬದೆ ತಕ್ಷಣ ರೈತರ ಸಂಕಷ್ಟಕ್ಕೆ ಸರ್ಕಾರ ಧಾವಿಸಬೇಕು. ಇಲ್ಲದಿದ್ದರೆ ರೈತರ ಜೊತೆಗೂಡಿ ಹೆಗಲಿಗೆ ಬಾರಕೋಲು ಹಾಕಿಕೊಂಡು ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಾನು ರೈತ ಪರ ಇದ್ದವನು. ರೈತ ಕುಟುಂಬದಿಂದ ಬಂದವನು. ರೈತರ ಪರಿಸ್ಥಿತಿ ಬಗ್ಗೆ ನನಗೆ ಅರಿವಿದೆ. ಮೂರು ದಿನದಲ್ಲಿ ಬರಪೀಡಿತ ಎಂದು ಘೋಷಣೆ ಮಾಡಲು ಏನು ಪ್ರಯತ್ನ ಬೇಕು ಮಾಡುತ್ತೇನೆ. ಅದು ಸಾಧ್ಯವಾಗದೆ ಹೋದರೆ ಅ. 10 ಗಡುವನ್ನು ಶಾಸನ ಸಭೆಯ ಮೂಲಕ ಸರ್ಕಾರಕ್ಕೆ ಕೊಡುತ್ತೇನೆ ಎಂದು ಪುನರುಚ್ಛರಿಸಿದರು.

ಉತ್ತರ ಕರ್ನಾಟಕ ಭಾಗದಲ್ಲಿ 73 ತಾಲೂಕುಗಳಿವೆ. 73ರಲ್ಲಿ ಇನ್ನೂ 27 ತಾಲೂಕುಗಳನ್ನ ಬರ ಪಟ್ಟಿಯಿಂದ ಕೈ ಬಿಟ್ಟಿದ್ದಾರೆ. ಉತ್ತರ ಕರ್ನಾಟಕದ ಇನ್ನುಳಿದ 27 ತಾಲೂಕು ಬರಪೀಡಿತ ತಾಲೂಕು ಘೋಷಣೆ ಮಾಡಬೇಕು. ಇದರಲ್ಲಿ ಅನವಶ್ಯಕ ರಾಜಕಾರಣ ಬೇಡ. ಅಕಸ್ಮಾತ್ ರಾಜಕಾರಣ ಕೂಡಿದರೆ ಅದನ್ನು ಭೇದಿಸಿ ಹೋಗುವ ಶಕ್ತಿ ನನ್ನಲ್ಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರು ಸಮಾಜಕ್ಕೆ ದಿಕ್ಸೂಚಿಯಾಗಲಿ
ಮಳೆ ಇಲ್ಲ, ಬೆಳೆ ಇಲ್ಲ ಸರ್ಕಾರಕ್ಕೆ ಆದಾಯ ಕಡಿಮೆ ಇದೆ: ರಾಯರಡ್ಡಿ