ರಟ್ಟೀಹಳ್ಳಿ: 12ನೇ ಶತಮಾನದ ಬಸವಣ್ಣನವರ ಸಮಕಾಲೀನರಾದ ಹಡಪದ ಅಪ್ಪಣ್ಣನವರು ಬಸವಣ್ಣನವರ ನಿಕಟವರ್ತಿಯಾಗಿ ಸಮಾಜದಲ್ಲಿನ ಜಾತಿ ಪದ್ಧತಿ, ಮೇಲು ಕೀಳಿನ ವಿರುದ್ಧ ಹೋರಾಡಿದ ಮಹಾನ್ ಶರಣ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ ತಿಳಿಸಿದರು.ಪಟ್ಟಣ ಪಂಚಾಯಿತಿ ಆವರಣದಲ್ಲಿ ಹಡಪದ ಅಪ್ಪಣ್ಣನವರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮಾತನಾಡಿ, ಅನುಭವ ಮಂಟಪದ ಎಲ್ಲ ಶಿವಶರಣರ ನಿಕಟಪೂರ್ವ ಸಂಪರ್ಕ ಹೊಂದಿದ್ದ ಇವರು ತಮ್ಮ ವಚನಗಳ ಮೂಲಕ ಮಹಾನ್ ಕ್ರಾಂತಿಯನ್ನೆ ಹುಟ್ಟು ಹಾಕಿದ್ದರು. ಅಂತಹ ಮಹಾನ್ ಶರಣರನ್ನು ನೆನೆಯುವ ಮೂಲಕ ಅವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ನಡೆಯೋಣ ಎಂದರು.ಇವರ ವಚನಗಳಲ್ಲಿ ಬೆಡಗಿನ ವಚನಗಳ ಸಂಖ್ಯೆಯೇ ಅಧಿಕವಾಗಿವೆ. ಷಟಸ್ಥಲ ವಿಷಯವನ್ನೇ ಇಲ್ಲಿ ಪ್ರಮುಖವಾಗಿ ವಿವರಿಸಲಾಗಿದೆ. ಚಿಕ್ಕ ಚಿಕ್ಕ ವಾಕ್ಯಗಳಿಂದ ಕೂಡಿದ ಅಪ್ಪಣ್ಣನ ವಚನಗಳು ಸರಳತೆ ಹಾಗೂ ಕಥನ ಶೈಲಿಯನ್ನು ಕಾಣುತ್ತೇವೆ. ಕಾರಣ ವಚನಗಳನ್ನು ಸುಲಭವಾಗಿ ಅರ್ಥೈಸಬಹುದು ಎಂದರು.ಹಡಪದ ಅಪ್ಪಣ್ಣ ಸಮಾಜದವರು ಶ್ರಮಜೀವಿಗಳಾಗಿದ್ದು, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಮಾಜದ ಮುನ್ನೆಲೆಗೆ ಬರಬೇಕಾದರೆ ಪ್ರಮುಖವಾಗಿ ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಆ ಮೂಲಕ ಸಮಾಜದ ಯುವಪೀಳಿಗೆ ದೊಡ್ಡ ಆಸ್ತಿಯಾಗುವರು ಎಂದರು.ಮುಖಂಡರಾದ ನಿಂಗಪ್ಪ ಕಾಯ್ಕದ, ಕುಮಾರ ಕಾಯ್ಕದ, ಗಣೇಶ ಕಾಯ್ಕದ, ಮಂಜು ಕಾಯ್ಕದ, ವೀರೇಶ ಕಾಯ್ಕದ, ನಿಂಗಪ್ಪ, ನಿಂಗರಾಜ ಕಾಯ್ಕದ, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಾದ ರಾಜಕುಮಾರ ಹೇಂದ್ರೆ ಪಿ.ಆರ್. ಮಲ್ಲನಗೌಡ್ರ, ಸಂತೋಶ ಬಿಳಚಿ, ಮಂಜು ಸುಣಗಾರ, ವೀರೇಶ ದ್ಯಾವಕ್ಕಳವರ, ಬಸವರಾಜ ಕವಲೆತ್ತು, ಚಂದ್ರಪ್ಪ ಮುಂತಾದವರು ಇದ್ದರು.ಶಿಷ್ಯನಿಗೆ ಜ್ಞಾನ ಅರಿವು ನೀಡುವವನೇ ಗುರು
ರಾಣಿಬೆನ್ನೂರು: ಮನುಷ್ಯನ ಬೇಕು, ಬೇಡಗಳ ಬಗ್ಗೆ ಚಿಂತಿಸುವ ಗುರು ಆತನಿಗೆ ಜ್ಞಾನದ ಅರಿವನ್ನು ನೀಡುತ್ತಾನೆ ಎಂದು ನಗರದ ಸಿದ್ಧಾರೂಢ ಮಠದ ಪೀಠಾಧಿಪತಿ ಮಲ್ಲಯ್ಯಜ್ಜ ನುಡಿದರು.ಇಲ್ಲಿನ ಸಿದ್ಧಾರೂಢ ನಗರದ ಸಿದ್ಧಾರೂಢ ಮಠದಲ್ಲಿ ಗುರುವಾರ ಗುರುಪೂರ್ಣಿಮೆ ಅಂಗವಾಗಿ ಭಕ್ತರಿಂದ ಪಾದಪೂಜೆ ಸ್ವೀಕರಿಸಿ ಮಾತನಾಡಿದರು.ನಾವಿರುವುದು ದಂಡಾಕಾರಣ್ಯದಲ್ಲಿ. ಇಲ್ಲಿ ಎಲ್ಲ ರೀತಿಯ ಪ್ರಾಣಿ- ಪಕ್ಷಿಗಳು, ವಿಷಜಂತುಗಳಿದ್ದು, ಅವುಗಳನ್ನು ದಾಟಿಕೊಂಡು ಹೋಗಲು ಒದ್ದಾಡುತ್ತೇವೆ. ಗುರುವಿನ ಮಾರ್ಗದರ್ಶನವಿಲ್ಲದೆ ಮನೆಗೆ ಹೋಗದೆ ಮತ್ತೆ ಇಲ್ಲಿಯೇ ಉಳಿಯುತ್ತೇವೆ. ಎಲ್ಲ ಜ್ಞಾನ ಅರಿಯಲು ಇಲ್ಲಿಗೆ ಬಂದಿದ್ದೇವೆ. ಗುರುವಿನ ಮಾರ್ಗದರ್ಶನ ಪಡೆದು ಜ್ಞಾನಿಗಳಾಗಿ ನಮ್ಮ ಮನೆಗೆ ಹೋಗಬೇಕು ಎಂದರು.ಆರ್.ಎಫ್. ಅಯ್ಯನಗೌಡ್ರ, ದೇವೇಂದ್ರಪ್ಪ, ಚಂದ್ರು ಕರೇಗೌಡರ, ದೇವೆಂದ್ರಪ್ಪ, ಪೂರ್ಣಿಮಾ ಅಯ್ಯನಗೌಡ್ರ, ಕುಮಾರ ಹಾಲಮಠ, ಮನೋಹರ ಮಲ್ಲಾಡದ ಮತ್ತಿತರರಿದ್ದರು.