ಹೊನ್ನಾವರ ತಾಲೂಕು ಪ್ರವಾಸೋದ್ಯಮಕ್ಕೆ ಹೆಸರುವಾಸಿ. ನದಿ, ಗುಡ್ಡ ಬೆಟ್ಟ, ಸಮುದ್ರ ಹೀಗೆ ಹಲವಾರು ರಮ್ಯ ಪ್ರದೇಶಗಳಿಂದ ಹೊನ್ನಾವರ ಸುತ್ತುವರೆದಿದೆ. ಇದರಲ್ಲಿ ಹವ್ಯಕರ ಮೂಲ ಎಂದು ಕರೆಯಲ್ಪಡುವ ಹೈಗುಂದ ಸಹ ಒಳ್ಳೆಯ ಪ್ರವಾಸಿ ತಾಣ. ಆದರೆ ಮೂಲಭೂತ ಸೌಕರ್ಯಗಳಿಲ್ಲದೇ ಪ್ರವಾಸಿಗರು ಇತ್ತ ಸುಳಿಯುತ್ತಿಲ್ಲ.
ಪ್ರವಾಸಿಗರಿಂದ ದೂರವಾಗುತ್ತಿರುವ ಪ್ರವಾಸಿ ತಾಣ । ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯ
ಪ್ರಸಾದ್ ನಗರೆ
ಕನ್ನಡಪ್ರಭ ವಾರ್ತೆ ಹೊನ್ನಾವರ
ಹೊನ್ನಾವರ ತಾಲೂಕು ಪ್ರವಾಸೋದ್ಯಮಕ್ಕೆ ಹೆಸರುವಾಸಿ. ನದಿ, ಗುಡ್ಡ ಬೆಟ್ಟ, ಸಮುದ್ರ ಹೀಗೆ ಹಲವಾರು ರಮ್ಯ ಪ್ರದೇಶಗಳಿಂದ ಹೊನ್ನಾವರ ಸುತ್ತುವರೆದಿದೆ. ಇದರಲ್ಲಿ ಹವ್ಯಕರ ಮೂಲ ಎಂದು ಕರೆಯಲ್ಪಡುವ ಹೈಗುಂದ ಸಹ ಒಳ್ಳೆಯ ಪ್ರವಾಸಿ ತಾಣ. ಆದರೆ ಮೂಲಭೂತ ಸೌಕರ್ಯಗಳಿಲ್ಲದೇ ಪ್ರವಾಸಿಗರು ಇತ್ತ ಸುಳಿಯುತ್ತಿಲ್ಲ.
ಹೈಗುಂದದಲ್ಲಿ ಸುತ್ತಲೂ ಹಸಿರು ಮರಗಳು, ತೆಂಗಿನ ತೋಟಗಳು ಮತ್ತು ಪ್ರಶಾಂತ ವಾತಾವರಣ ಇದೆ. ಸಮುದ್ರದ ಅಲೆಗಳು ಮತ್ತು ನದಿಯ ಸಂಗಮ ದೃಶ್ಯ ಅತ್ಯಂತ ಮನಮೋಹಕವಾಗಿದೆ.
ಇಲ್ಲಿ ಶರಾವತಿ ನದಿ ಅರಬ್ಬಿ ಸಮುದ್ರ ಸೇರುವ ದೃಶ್ಯ ವಿಶೇಷ ಆಕರ್ಷಣೆ. ವಿವಿಧ ಬಗೆಯ ಪಕ್ಷಿಗಳು ಇಲ್ಲಿವೆ. ದ್ವೀಪದ ಸುತ್ತಮುತ್ತ ಮೀನುಗಾರರ ಜೀವನ ನೋಡಬಹುದು, ಇದು ಸ್ಥಳೀಯ ಸಂಸ್ಕೃತಿಯ ಪ್ರತಿರೂಪ.
ಫೋಟೋ ಶೂಟ್ ಹಾಗೂ ಪಿಕ್ನಿಕ್ ಗೆ ಈ ಸ್ಥಳ ಸೂಕ್ತವಾಗಿದೆ. ಹೈಗುಂದದಲ್ಲಿ ಮಾತೆ ದುರ್ಗಾಂಬಿಕೆಯ ದೇವಾಲಯವಿದೆ. ದೇವಾಲಯದಿಂದ ಸ್ವಲ್ಪ ತಿರುಗಿ ಮೇಲೆ ಹೋದರೆ ಹೈಗುಂದ ಗುಡ್ಡ ಸಿಗುತ್ತದೆ. ಅಲ್ಲಿ ರಮಣೀಯ ದೃಶ್ಯವಿದೆ. ವೈರಿ ಪಡೆ ನದಿಯಲ್ಲಿ ಬರುವುದನ್ನು ನೋಡಲು ಕಬ್ಬಿಣದಿಂದ ಮಾಡಿದ ವೀಕ್ಷಣಾ ಗೋಪುರವಿದ್ದು, ಅದು ಈಗ ತುಕ್ಕು ಹಿಡಿದು ನದಿಯ ಸೌಂದರ್ಯವನ್ನು ನೋಡಲು ಆಗದ ಪರಿಸ್ಥಿತಿ ಇದೆ. ಪ್ರವಾಸಿ ಮಂದಿರವಿದ್ದು ಅಲ್ಲೂ ಸಹ ಸರಿಯಾದ ವ್ಯವಸ್ಥೆ ಇಲ್ಲ.
ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ದ್ವೀಪದ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಸರಿಯಾದ ರಸ್ತೆ ಇಲ್ಲ. ಕುಳಿತುಕೊಳ್ಳುವ ಸ್ಥಳಗಳು ಇಲ್ಲ. ಪ್ರವಾಸಿಗರು ಬಿಟ್ಟುಹೋಗುವ ಪ್ಲಾಸ್ಟಿಕ್ ಮತ್ತು ಕಸದ ಸಮಸ್ಯೆ ಕಂಡುಬರುತ್ತದೆ. ದ್ವೀಪಕ್ಕೆ ಹೋಗಲು ಸರಿಯಾದ ಬೋಟ್ ವ್ಯವಸ್ಥೆ ಇಲ್ಲ. ಮಾನವ ಹಸ್ತಕ್ಷೇಪದಿಂದ ಪ್ರಕೃತಿ ಹಾನಿ ಆಗುತ್ತಿರುವುದು ತೋರುತ್ತದೆ. ಪ್ರವಾಸಿಗರಿಗೆ ಮುಖ್ಯವಾಗಿ ಇಲ್ಲಿನ ಪ್ರದೇಶದ ಬಗ್ಗೆ ಪ್ರಚಾರದ ಕೊರತೆ, ಮಾಹಿತಿ ಫಲಕಗಳು ಸರಿಯಾಗಿ ಇಲ್ಲದಿರುವುದು. ಸ್ಥಳೀಯ ಆಡಳಿತದ ಜೊತೆ ಸಮನ್ವಯ ಕೊರತೆ ಇರುವುದು ಮೇಲ್ನೋಟಕ್ಕೆ ಎದ್ದು ಕಾಣಿಸುತ್ತಿದೆ. ಹೈಗುಂದದಂತಹ ನೈಸರ್ಗಿಕ ಸೌಂದರ‍್ಯ ಹೊಂದಿರುವ ಸ್ಥಳವನ್ನು ಸರಿಯಾಗಿ ಅಭಿವೃದ್ಧಿಪಡಿಸಿದರೆ ಹೊನ್ನಾವರ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಇನ್ನೂ ದೊಡ್ಡ ಉತ್ತೇಜನ ಸಿಗಬಹುದು. ಆದರೆ ಈಗಿನ ನಿರ್ಲಕ್ಷ್ಯ ಮುಂದುವರಿದರೆ, ಈ ಅಮೂಲ್ಯ ಸ್ಥಳ ತನ್ನ ಸೌಂದರ‍್ಯವನ್ನು ಕಳೆದುಕೊಳ್ಳುವ ಅಪಾಯವಿದೆ.ಹೈಗುಂದ ಉತ್ತಮ ಪ್ರವಾಸಿ ತಾಣವಾಗಿದ್ದರೂ ನಮ್ಮವರ ನಿರ್ಲಕ್ಷ್ಯ ಹಾಗೂ ಸೂಕ್ತವಾದ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗದ ಹಿನ್ನೆಲೆ ಪ್ರವಾಸಿಗರು ಅಷ್ಟಾಗಿ ಬರುತ್ತಿಲ್ಲ. ಕಂಡಕಂಡಲ್ಲಿ ಕಸ ಎಸೆಯುತ್ತಾರೆ. ಅಲ್ಲದೆ ಇಲ್ಲಿ ಸರಿಯಾದ ರಸ್ತೆ ಸೌಲಭ್ಯ ಕಲ್ಪಿಸಿದರೆ ಇನ್ನೂ ಹೆಚ್ಚಿನ ಅನುಕೂಲವಾಗುತ್ತದೆ. ಪ್ರವಾಸೋದ್ಯಮ ಇಲಾಖೆ ಹೈಗುಂದದ ಕಡೆಗೂ ಗಮನ ಹರಿಸಲಿ ಎನ್ನುತ್ತಾರೆ ಪ್ರವಾಸಿಗ ಹರೀಶ್.ಪರಿಹಾರ ಕ್ರಮಗಳುಶೌಚಾಲಯ, ಕುಡಿಯುವ ನೀರು, ಕಸದ ಡಬ್ಬಿ ವ್ಯವಸ್ಥೆ ಮಾಡುವುದು. ನಿಯಮಿತ ಸ್ವಚ್ಛತಾ ಕಾರ್ಯಾಚರಣೆ, ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡುವುದು. ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ. ಸರಿಯಾದ ಪ್ರಚಾರ ಮತ್ತು ಮಾಹಿತಿ ಫಲಕಗಳ ವ್ಯವಸ್ಥೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.