ರಾಮನಗರ: ಜಿಲ್ಲಾ ಕೇಂದ್ರ ರಾಮನಗರ ಸೇರಿದಂತೆ ಹಲವೆಡೆ ಮಂಗಳವಾರ ಸಂಜೆ ಗುಡುಗು ಮಿಂಚುಸಹಿತ ಅಲಿಕಲ್ಲಿ ಮಳೆ ಸುರಿದಿದ್ದು, ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನರಿಗೆ ತಂಪಾದ ವಾತಾವರಣ ತಂದು ಉಲ್ಲಾಸ ಮೂಡಿಸಿದೆ
ರಾಮನಗರ: ಜಿಲ್ಲಾ ಕೇಂದ್ರ ರಾಮನಗರ ಸೇರಿದಂತೆ ಹಲವೆಡೆ ಮಂಗಳವಾರ ಸಂಜೆ ಗುಡುಗು ಮಿಂಚುಸಹಿತ ಅಲಿಕಲ್ಲಿ ಮಳೆ ಸುರಿದಿದ್ದು, ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನರಿಗೆ ತಂಪಾದ ವಾತಾವರಣ ತಂದು ಉಲ್ಲಾಸ ಮೂಡಿಸಿದೆ.
ಸಂಜೆ 6 ಗಂಟೆಯ ವೇಳೆಗೆ ಆರಂಭಗೊಂಡ ವರ್ಷಧಾರೆ ಕ್ರಮೇಣ ಗುಡುಗು ಮಿಂಚಿನಿಂದ ಕೂಡಿತ್ತು. ಒಂದೇ ಸಮನೆ ಸುರಿದ ಮಳೆಯಿಂದ ಜನರಲ್ಲಿ ಸಂತಸ ಮನೆ ಮಾಡಿತು.
ಭಾರಿ ಮಳೆಯಿಂದಾಗಿ ಬಿಡದಿ ಪಟ್ಟಣದ ರಸ್ತೆಗಳು ಜಲಾವೃತವಾದವು, ಚರಂಡಿಗಳು ತುಂಬಿದ ಪರಿಣಾಮ ರಸ್ತೆಯಲ್ಲಿ ಹೊಳೆಯಂತೆ ನೀರು ಹರಿದು ತಗ್ಗು ಪ್ರದೇಶದ ಕಡೆಗೆ ರಭಸವಾಗಿ ನುಗ್ಗಿತು.
ಸಮಾರು ಒಂದು ಗಂಟೆಗೂ ಹೆಚ್ಚು ಕಾಲ ಜೋರು ಮಳೆ ಜತೆಗೆ ಅಲಿಕಲ್ಲು ಸಹ ಸುರಿಯಿತು. ಈ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿತ್ತು. ತುರ್ತು ಕೆಲಸದಲ್ಲಿ ತೊಡಗಿದ್ದ ಕೆಲವು ನಾಗರಿಕರು ಮಳೆಯಲ್ಲೆ ಕಾಲ್ನಡಿಗೆಯಲ್ಲಿ ಕೆಲವರು ದ್ವಿಚಕ್ರ ವಾಹನಗಳಲ್ಲಿ ತೆರಳುತ್ತಿದ್ದುದು ಕಂಡುಬಂದಿತು.
ಮಾವು ಬೆಳೆಗೆ ಹಾನಿ:
ಆಲಿಕಲ್ಲು ಮಳೆ ಹಾಗೂ ಗಾಳಿಯ ರಭಸಕ್ಕೆ ಕೆಲವೆಡೆ ಪಾಲ್ ಹೌಸ್‌ಗಳು ಹಾಗೂ ಮಾವು ಬೆಳೆಗೆ ತೀವ್ರ ಹಾನಿಯಾಗಿದೆ. ಅಲ್ಲದೆ ಕೆಲವು ಕಡೆ ಬೆಳೆದು ನಿಂತಿದ್ದ ಬಾಳೆ ಬೆಳೆ ನೆಲಕ್ಕುರುಳಿದೆ. ಗಾಳಿ ಮಳೆಗೆ ಮಾವು ಬೆಳೆ ಉದುರಿದ್ದು ರೈತರಿಗೆ ಭಾರಿ ನಷ್ಟ ಉಂಟಾಗಿದೆ ಎಂದು ಹೇಲಾಗುತ್ತಿದೆ.
ರಸ್ತೆ ಸಂಚಾರ ಸ್ಥಗಿತ:
ಸಂಜೆ ವೇಳೆಗೆ ಭಾರಿ ಮಳೆ ಸುರಿದ ಪರಿಣಾಮ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಡಕಾಗಿತ್ತು. ಎಕ್ಸ್ ಪ್ರೆಸ್ ವೇನ ಅಂಡರ್‌ಪಾಸ್‌ಗಳ ಕೆಳಭಾಗದಲ್ಲಿ ದ್ವಿಚಕ್ರ ವಾಹನಗಳ ಸವಾರರು ಆಶ್ರಯ ಪಡೆದುಕೊಂಡರು. ಜೋರು ಮಳೆ ಕಡಿಮೆಯಾಗದೆಂದು ಅರಿತ ಕೆಲವರು ಮಳೆಯಲ್ಲೆ ತಮ್ಮ ಪ್ರಯಾಣವನ್ನು ಮುಂದುವರೆಸಿದರು. ಮಳೆ ಸ್ವಲ್ಪ ಕಡಿಮೆಯಾದಂತೆ ಅಲ್ಲಲ್ಲಿ ನಿಲ್ಲಿಸಿದ್ದ ವಾಹನಗಳು ರಸ್ತೆಗಿಳಿಯುತ್ತಿದ್ದುದು ಕಂಡು ಬಂದಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.