ದಲಿತರಿಗೆ ಮೀಸಲಿಟ್ಟ ಹಣ ಗ್ಯಾರಂಟಿಗಳಿಗೆ ಬಳಕೆ: ಖಂಡನೆ

KannadaprabhaNewsNetwork |  
Published : Mar 18, 2026, 01:15 AM IST
ಸಿಕೆಬಿ-1 ಸುದ್ದಿಗೋಷ್ಟಿಯಲ್ಲಿ  ಸಮತಾಸೈನಿಕದಳದ ರಾಜ್ಯಾಧ್ಯಕ್ಷ ಜಿ.ಸಿ.ವೆಂಕಟರಮಣಪ್ಪ ಮಾತನಾಡಿದರು | Kannada Prabha

ಸಾರಾಂಶ

ಹೆಸರಿಗೆ ಅಷ್ಟೇ ಪ್ರತಿ ವರ್ಷ ಸಾವಿರಾರು ಕೋಟಿ ದಲಿತರಿಗೆ ಮೀಸಲಿಟ್ಟು ಅದರಲ್ಲಿ ಗ್ಯಾರಂಟಿ ಯೋಜನೆಗಳಿಗೆ ಬಿಟ್ಟು, ಅಂಕಿ ಅಂಶಗಳ ಪ್ರಕಾರ ಕೇವಲ ಶೇ. 25ರಷ್ಟು ಮಾತ್ರ ಹಣ ಬಿಡುಗಡೆ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಾವು ಬಡವರ ಪರ, ಹಿಂದುಳಿದವರು ಪರ, ಅಲ್ಪಸಂಖ್ಯಾತರ ಪರ, ನಿಮ್ಮ ವರ್ಗಗಳ ಪರ, ಎಂದು ಹೇಳಿಕೆಗಳಿಗಷ್ಟೇ ಸೀಮಿತವಾಗಿದೆ. ಗ್ಯಾರಂಟಿಗಳ ಭರವಸೆಗಳಿಂದ ಆಡಳಿತಕ್ಕೆ ಬಂದ ಸರ್ಕಾರ ಈ ನಾಲ್ಕು ವರ್ಷಗಳ ಬಜೆಟ್‌ನಲ್ಲಿ ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಉಪಯೋಗ ಮಾಡಿ ದಲಿತರ ಬೆನ್ನು ಮೂಳೆ ಮುರಿಯುತ್ತಿದ್ದಾರೆ ಎಂದು ಸಮತಾ ಸೈನಿಕದಳದ ರಾಜ್ಯಾಧ್ಯಕ್ಷ ಜಿ.ಸಿ. ವೆಂಕಟರಮಣಪ್ಪ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, 2023-24ರಲ್ಲಿ 11,144 ಕೋಟಿ 2024-25ರಲ್ಲಿ 14,282.68 ಕೋಟಿ 2025-26 ರಲ್ಲಿ13,433.84 ಕೋಟಿ, ಪ್ರಸಕ್ತ ವರ್ಷದಲ್ಲಿ14,198.93 ಕೋಟಿ ಸೇರಿದಂತೆ ಒಟ್ಟು 53,059.45 ಕೋಟಿ ಗ್ಯಾರಂಟಿಗೆ ಬಳಕೆಯಾಗಿದೆ.

ಹೆಸರಿಗೆ ಅಷ್ಟೇ ಪ್ರತಿ ವರ್ಷ ಸಾವಿರಾರು ಕೋಟಿ ದಲಿತರಿಗೆ ಮೀಸಲಿಟ್ಟು ಅದರಲ್ಲಿ ಗ್ಯಾರಂಟಿ ಯೋಜನೆಗಳಿಗೆ ಬಿಟ್ಟು, ಅಂಕಿ ಅಂಶಗಳ ಪ್ರಕಾರ ಕೇವಲ ಶೇ. 25ರಷ್ಟು ಮಾತ್ರ ಹಣ ಬಿಡುಗಡೆ ಮಾಡುತ್ತಿದ್ದಾರೆ. ಉದಾಹರಣೆ 2025-26ರ ಸಾಲಿನಲ್ಲಿ ಬಜೆಟ್ ನಲ್ಲಿ ಸುಮಾರು 40 ಸಾವಿರ ಕೋಟಿ ಮೀಸಲಿಟ್ಟಿದ್ದು, ಇದರಲ್ಲಿ ಗ್ಯಾರಂಟಿ ಯೋಜನೆಗೆ 13,433.84 ಕೋಟಿ ಬಳಕೆ ಮಾಡಿದ್ದು. ಉಳಿಕೆ ಹಣ 26,566.16 ಕೋಟಿ ಇದರಲ್ಲಿ ಶೇ. 25 ರಷ್ಟು ಹಣ ಬಿಡುಗಡೆ ಮಾಡಿದ್ದಾರೆ. ಅಂದರೆ ದಲಿತರ ಅಭಿವೃದ್ಧಿಗಾಗಿ ಕೇವಲ 6641.54 ಕೋಟಿ ಮಾತ್ರ. ಇದು ಈ ಸರ್ಕಾರ ವ್ಯವಸ್ಥಿತವಾಗಿ ದಲಿತರನ್ನು ತುಳಿಯುವ ಪ್ರಯತ್ನ ಮಾಡುತ್ತಿದೆ.

ಪ್ರಸ್ತುತ ಬಜೆಟ್‌ಗೂ ಮುನ್ನ ಗ್ಯಾರಂಟಿಗಳಿಗೆ ಪರಿಶಿಷ್ಟರ ಹಣ ಉಪಯೋಗ ಮಾಡಬಾರದೆಂದು ಗೃಹ ಸಚಿವರಾದ ಡಾ.ಜಿ ಪರಮೇಶ್ವರ್ ನೇತೃತ್ವದಲ್ಲಿ ಸುಮಾರು 20ಕ್ಕೂ ಹೆಚ್ಚುಶಾಸಕರು ಸಚಿವರು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿದ್ದರು, ಆದರೂ ಸಹಾ ಇವರ ಮನವಿಗೆ ಕಿಮ್ಮತು ನೀಡದ ಮುಖ್ಯಮಂತ್ರಿಗಳು ಮತ್ತೊಮ್ಮೆ ಗ್ಯಾರಂಟಿಗಳಿಗೆ ಉಪಯೋಗ ಮಾಡಿದ್ದಾರೆ ಎಂದರು.

ರಾಜ್ಯದಲ್ಲಿ ಎಲ್ಲಾ ಜಾತಿ ವರ್ಗದವರಿಗೂ ನಿಗಮ ಮಂಡಳಿಗಳು ಇದ್ದಾವೆ. ಆದರೆ ಯಾವ ನಿಗಮಗಳಲ್ಲೂ ಹಣ ಗ್ಯಾರಂಟಿಗೆ ಉಪಯೋಗ ಮಾಡದೆ, ಕೇವಲ ಪರಿಶಿಷ್ಟರ ಹಣ ಮಾತ್ರ ಉಪಯೋಗ ಮಾಡುತ್ತಿರುವುದು ಸರಿಯೇ? ಮುಖ್ಯಮಂತ್ರಿಗಳಿಗೆ ಎಲ್ಲಾ ಸಂಘಟನೆಗಳು ಕಲಂ 7ಡಿ ತೆಗೆಯಬೇಕೆಂದು ಒತ್ತಾಯ ಮಾಡಿದಾಗ ಒತ್ತಾಯಕ್ಕೆ ಮಣಿದ ಮುಖ್ಯಮಂತ್ರಿಗಳು 7ಡಿ ತೆಗೆದು ಕಲಂ 7ಸಿ ತಂದು ಇದರಿಂದ ದಲಿತರ ಹಣ ಉಪಯೋಗ ಮಾಡುತ್ತಿರುವುದು ಖಂಡನೀಯ. ಇದರ ಬಗ್ಗೆ ಎಲ್ಲಾ ಸಂಘಟನೆಯವರು ನಾಲ್ಕು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ ಬೆಲೆ ಕೊಡದ ಸರ್ಕಾರದ ನಡೆಯನ್ನು ತೀರ್ವವಾಗಿ ಖಂಡಿಸಿ ಈ ಬಜೆಟ್ ಅಧಿವೇಶನದಲ್ಲಿ ಎಲ್ಲಾ ಸಚಿವರು, ಶಾಸಕರು, ಇದರ ಬಗ್ಗೆ ಮಾತನಾಡಬೇಕು,

ಗ್ಯಾರಂಟಿಗಳಿಗೆ ಪರಿಶಿಷ್ಟರ ಹಣವನ್ನು ಉಪಯೋಗ ಮಾಡಿರುವುದನ್ನು ದಲಿತರಿಗೆ ವಾಪಸ್ಸು ನೀಡಬೇಕು, ಇಲ್ಲವಾದಲ್ಲಿ ಈ ಬಜೆಟ್ ಅಧಿವೇಶನ ಮುಗಿಯುವ ಒಳಗೆ ಎಲ್ಲಾ ಸಂಘಟನೆಗಳೊಂದಿಗೆ ಶಾಸಕ, ಸಚಿವರಿಗೆ, ಕಂಡಲ್ಲಿ ಫೇರಾವ್ ಮಾಡಲಾಗುವುದು ಮತ್ತು ಮುಖ್ಯಮಂತ್ರಿಗಳ ಮನೆ ಮುತ್ತಿಗೆ ಹಾಕಲಾಗುವುದೆಂದು ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.

ಈ ಬಜೆಟ್ ಅಧಿವೇಶನದಲ್ಲಿ ಪರಿಶಿಷ್ಟರ ಹಣ ಗ್ಯಾರಂಟಿಗಳಿಗೆ ಉಪಯೋಗ ಮಾಡುವುದಿಲ್ಲ ಎಂದು ಘೋಷಿಸಬೇಕು. ಸಂವಿಧಾನ ರಕ್ಷಣೆ ಅಭಿಯಾನಕ್ಕೆ ಖಜಾನೆ ಇಂದ ಹಣ ಕೊಡಬೇಕು. ಪರಿಶಿಷ್ಟರ ಹಣ ಬಳಸಿದರೆ ತಪ್ಪು ಸಂದೇಶ ಹೋಗುತ್ತದೆ. ಬಾಬಾ ಸಾಹೇಬರ ಸಂವಿಧಾನ ಎಲ್ಲಾ ಭಾರತೀಯರದ್ದು. ಕಳೆದ ನಾಲ್ಕು ವರ್ಷಗಳಿಂದ 53,059.45 ಕೋಟಿ ಹಣವನ್ನು ದಲಿತರಿಗೆ ವಾಪಸ್ ಕೊಡಬೇಕು. 53,059.45 ಕೋಟಿ ಹಣದಲ್ಲಿ ಎಲ್ಲಾ ಜಿಲ್ಲೆಗಳ ದಲಿತರ ಅಭಿವೃದ್ಧಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ತಲಾ 1500 ಕೋಟಿ ಕೊಡಬೇಕು. ಎಲ್ಲಾ ಎಸ್.ಸಿ.ಎಸ್.ಟಿ ನಿಗಮಗಳಿಗೆ ತಲ 1500 ಕೋಟಿ ಕನಿಷ್ಠ ಅನುದಾನ ಘೋಷಿಸಬೇಕು. ದುರ್ಬಳಕೆಗೆ ದಾರಿ ಮಾಡಿಕೊಡುತ್ತಿರುವ 7ಸಿ ಕಾಯ್ದೆಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ರಾಜ್ಯ ಸಮಿತಿ ಸದಸ್ಯ ಬಿ.ಎಚ್. ನರಸಿಂಹಯ್ಯ, ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ಹರಿಪ್ರಸಾದ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಪ್ರಕಾಶ್, ಜಿಲ್ಲಾ ಖಜಾಂಜಿ ರಮೇಶ್, ಜಿಲ್ಲಾ ಮುಖಂಡ ನರಸಿಂಹಮೂರ್ತಿ ಇದ್ದರು.

ಸಿಕೆಬಿ-1 ಸುದ್ದಿಗೋಷ್ಟಿಯಲ್ಲಿ ಸಮತಾ ಸೈನಿಕದಳದ ರಾಜ್ಯಾಧ್ಯಕ್ಷ ಜಿ.ಸಿ.ವೆಂಕಟರಮಣಪ್ಪ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

1,000 ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ
ಬೀದರ್ ಟೂ ಬೆಂಗಳೂರುವರೆಗೆ ಪಾದಯಾತ್ರೆ: ಕೆ.ಪಿ.ನಂಜುಂಡಿ