ಧಾರವಾಡ: ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿರುವ ಹಲಗಿ ಹಬ್ಬದ ಅಂಗವಾಗಿ ಹೊಸಯಲ್ಲಾಪುರದ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಭವ್ಯ ಮೆರವಣಿಗೆಯೊಂದಿಗೆ ಚಾಲನೆ ದೊರೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಸಂಸ್ಕೃತಿ ಉಳಿದರೆ ಸಮಾಜ ಉಳಿಯುತ್ತದೆ. ಯುವಜನತೆ ಇಂತಹ ಹಬ್ಬಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಹು–ಧಾ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಮಾತನಾಡಿ, ಹಲಗಿ ಹಬ್ಬವು ಧಾರವಾಡದ ಗುರುತು. ಇಂತಹ ಉತ್ಸವಗಳು ಸಹೋದರತ್ವ ಮತ್ತು ಏಕತೆ ಬಲಪಡಿಸುತ್ತವೆ ಎಂದರು.ಮಾಜಿ ಶಾಸಕರಾದ ಅಮೃತ ದೇಸಾಯಿ ಉತ್ಸವ ಸಮಿತಿಯ ಕಾರ್ಯಚಟುವಟಿಕೆಯನ್ನು ಪ್ರಶಂಸಿಸಿ, 14 ವರ್ಷಗಳ ನಿರಂತರ ಆಚರಣೆ ಶ್ಲಾಘನೀಯ ಎಂದರು. ಮಾಜಿ ಮೇಯರ್ ಈರೇಶ ಅಂಚಟಗೇರಿ ಹಾಗೂ ಸೀಮಾ ಮಸೂತಿ ಮಾತನಾಡಿದರು.ಹಲಗಿ ಕಲಾವಿದರು ತಮ್ಮ ಸಂಪ್ರದಾಯಬದ್ಧ ವೇಷಭೂಷಣಗಳಲ್ಲಿ ಮನಮೋಹಕ ಪ್ರದರ್ಶನ ನೀಡಿ ಜನರನ್ನು ರಂಜಿಸಿದರು. ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗುತ್ತ ಸಂಭ್ರಮದ ವಾತಾವರಣ ಸೃಷ್ಟಿಸಿತು. ಮಹಿಳೆಯರು, ಯುವಕರು ಹಾಗೂ ಮಕ್ಕಳೂ ಉತ್ಸಾಹದಿಂದ ಭಾಗವಹಿಸಿ ಹಬ್ಬಕ್ಕೆ ಇನ್ನಷ್ಟು ಕಳೆ ತಂದರು.