ಹಲಗೂರು ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಖಾತೆಯಾಗಿದ್ದ ೧೧ ನಿವೇಶನಗಳು ರದ್ದು...!

KannadaprabhaNewsNetwork |  
Published : Jan 08, 2024, 01:45 AM IST
೭ಕೆಎಂಎನ್‌ಡಿ-೩೧೧ ನಿವೇಶನಗಳನ್ನು ರದ್ದುಗೊಳಿಸಿರುವ ಆದೇಶ ಪ್ರತಿ. | Kannada Prabha

ಸಾರಾಂಶ

ಸರ್ವೆ ನಂ.೬೩ರಲ್ಲಿ ೩.೨೯ ಎಕರೆ ಜಮೀನಿನಲ್ಲಿ ೫ ಗುಂಟೆ ಬಿ-ಖರಾಬು ಜಮೀನನ್ನು ಸೇರಿಸಿ ಅಕ್ರಮ ಖಾತೆ ಮಾಡಿರುವುದಲ್ಲದೇ, ಸರ್ವೆ ನಂ.೬೪ರಲ್ಲಿ ೨ ಗುಂಟೆ ಖರಾಬು ಸೇರಿಸಿ ೭೪ ಗುಂಟೆ ಜಮೀನಿಗೆ ಸರ್ವೆ ನಂ.೬೩ರಲ್ಲಿ ಮಂಜೂರಾಗಿದ್ದ ಅನ್ಯಕ್ರಾಂತ ಆದೇಶವನ್ನು ತಿದ್ದಿ ಅಕ್ರಮ ಖಾತೆ ಮಾಡಿಸಿಕೊಂಡು ಸಾರ್ವಜನಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಈ ಬಗ್ಗೆ ಸೆ.4 ರಂದು ‘ಕನ್ನಡಪ್ರಭ’ ವರದಿ ಮಾಡಿತ್ತು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಳವಳ್ಳಿ ತಾಲೂಕು ಹಲಗೂರು ಗ್ರಾಪಂ ವ್ಯಾಪ್ತಿಗೆ ಬರುವ ಸರ್ವೆ ನಂ.೬೩ ಮತ್ತು ೬೪ಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ ಖಾತೆ ಮಾಡಲಾಗಿದ್ದ ೧೧ ನಿವೇಶನಗಳನ್ನು ರದ್ದುಗೊಳಿಸಿ ಮಳವಳ್ಳಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಮಮತಾ ಆದೇಶ ಹೊರಡಿಸಿದ್ದಾರೆ.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದಂತೆ ತಾಪಂ ಸಾಮಾನ್ಯಸಭೆಯ ನಿರ್ಣಯದಂತೆ ಕಾನೂನು ಸಲಹೆಗಾರರ ಸಲಹೆಯನ್ನು ಪರಿಶೀಲಿಸಿ ಹಲಗೂರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಿಂದ ಇ-ಸ್ವತ್ತು ತಂತ್ರಾಂಶದ ಮೂಲಕ ಸಲ್ಲಿಕೆಯಾಗಿರುವ ಸ.ನಂ.೬೩ ಮತ್ತು ೬೪ಕ್ಕೆ ಸಂಬಂಧಿಸಿದಂತೆ ಬ್ಲಾಕ್-ಬಿ ಮತ್ತು ಸಿ ರಲ್ಲಿ ನಿಯಮಬಾಹೀರವಾಗಿ ಮಾಡಿರುವ ೮ ಖಾತೆಗಳನ್ನು ರದ್ದುಪಡಿಸಲಾಗಿದೆ. ಜೊತೆಗೆ ಸ.ನಂ.೬೪ರ ಬ್ಲಾಕ್ ಎ-ನಿವೇಶನವನ್ನು ವಿಭಾಗಿಸಿ ಮಾಡಿರುವ ೩ ನಿವೇಶನಗಳು ನೋಂದಾಯಿತ ಕ್ರಯಪತ್ರವಾಗಿರುವುದು ಕಂಡುಬಂದಿರುವುದರಿಂದ ಕೂಡಲೇ ಈ ಖಾತೆಗಳನ್ನು ತುರ್ತಾಗಿ ರದ್ದುಪಡಿಸುವಂತೆ ಹಲಗೂರು ಗ್ರಾಪಂ ಪಿಡಿಒ ಅವರಿಗೆ ಸೂಚಿಸಿದ್ದಾರೆ.

ಸರ್ವೆ ನಂ.೬೩ರಲ್ಲಿ ೩.೨೯ ಎಕರೆ ಜಮೀನಿನಲ್ಲಿ ೫ ಗುಂಟೆ ಬಿ-ಖರಾಬು ಜಮೀನನ್ನು ಸೇರಿಸಿ ಅಕ್ರಮ ಖಾತೆ ಮಾಡಿರುವುದಲ್ಲದೇ, ಸರ್ವೆ ನಂ.೬೪ರಲ್ಲಿ ೨ ಗುಂಟೆ ಖರಾಬು ಸೇರಿಸಿ ೭೪ ಗುಂಟೆ ಜಮೀನಿಗೆ ಸರ್ವೆ ನಂ.೬೩ರಲ್ಲಿ ಮಂಜೂರಾಗಿದ್ದ ಅನ್ಯಕ್ರಾಂತ ಆದೇಶವನ್ನು ತಿದ್ದಿ ಅಕ್ರಮ ಖಾತೆ ಮಾಡಿಸಿಕೊಂಡು ಸಾರ್ವಜನಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು.

ಹಲಗೂರು ಗ್ರಾಮ ಪಂಚಾಯ್ತಿ ಸದಸ್ಯ ಕೆ.ಸುರೇಂದ್ರ ನೀಡಿರುವ ದೂರಿನನ್ವಯ ಜಿಪಂ ಉಪ ಕಾರ್ಯದರ್ಶಿ (ಆಡಳಿತ) ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿ ಜಂಟಿ ತನಿಖೆ ನಡೆಸಿ ಜಿಪಂ ಸಿಇಒ ಅವರಿಗೆ ವರದಿ ಸಲ್ಲಿಸಿದ್ದರು. ಈ ವರದಿಯನ್ವಯ ಕ್ರಮ ಕೈಗೊಳ್ಳುವಂತೆ ಸಿಇಓ ಅವರು ಮಳವಳ್ಳಿ ತಾಪಂ ಇಒ ಅವರಿಗೆ ಸೂಚಿಸಿದ್ದರು. ಅದರಂತೆ ೧೧ ಖಾತೆಗಳನ್ನು ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ.

ರಾಜಾಕಾಲುವೆಯನ್ನೂ ಸೇರಿಸಿ ಖಾತೆ:

ಸರ್ವೆ ನಂ.೬೩ರಲ್ಲಿ ೩ ಎಕರೆ ೨೯ ಗುಂಟೆ ಜಮೀನಿದ್ದು ೫ ಗುಂಟೆ ಬಿ-ಖರಾಬು ಸರ್ಕಾರಿ ಜಾಗ ಸೇರಿರುತ್ತದೆ. ಈ ೫ ಗುಂಟೆ ಜಮೀನು ರಾಜಾಕಾಲುವೆಯಾಗಿದ್ದು, ಕಾಲುವೆಯಿಂದ ಹರಿಯುವ ನೀರು ಭೀಮಾ ನದಿಗೆ ಸೇರುತ್ತದೆ. ಈ ಜಮೀನನ್ನು ಗ್ರಾಮ ಪಂಚಾಯ್ತಿಯಲ್ಲಿ ಗ್ರಾಮಠಾಣೆಗೆ ಎಂದು ಸೇರಿಸಿಕೊಂಡು ಖಾತೆ ಮಾಡಿಕೊಡಲಾಗಿದೆ ಎಂದು ಕಂದಾಯಾಧಿಕಾರಿ ವರದಿಯಲ್ಲಿ ನಮೂದಿಸಿರುವುದು ಕಂಡುಬಂದಿದೆ. ಆಕಾರ್‌ ಬಂದ್‌ನಲ್ಲೂ ೫ ಗುಂಟೆ ಬಿ-ಖರಾಬು ಎಂದು ದಾಖಲಾಗಿದ್ದು, ಈ ಖರಾಬು ಜಮೀನನ್ನು ಸೇರಿಸಿ ಎಚ್.ಟಿ.ಶ್ರೀನಿವಾಸ ಎಂಬುವರ ಹೆಸರಿಗೆ ಹಾಗೂ ಟಿ.ಗೋಪಾಲ್ ಹೆಸರಿಗೆ ಅಕ್ರಮವಾಗಿ ಖಾತೆ ನೋಂದಣಿ ಮಾಡಲಾಗಿತ್ತು.

ಸಲ್ಲಿಕೆಯಾಗದ ವರದಿ:

ಸರ್ಕಾರಿ ದಾಖಲೆಗಳನ್ನು ತಿದ್ದಿ ನಕಲಿ ಅನ್ಯಕ್ರಾಂತ ಮಂಜೂರಾತಿ ಆದೇಶ ಸೃಷ್ಟಿಸಿ ಖರಾಬು ಜಾಗ (ರಾಜಾ ಕಾಲುವೆ)ವನ್ನು ಅಕ್ರಮವಾಗಿ ಖಾತೆ ಮಾಡಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ದೂರುದಾರ ಕೆ.ಸುರೇಂದ್ರ ನೀಡಿರುವ ದೂರಿಗೆ ಸಂಬಂಧಿಸಿದಂತೆ ಜಿಪಂ ಉಪ ಕಾರ್ಯದರ್ಶಿ (ಆಡಳಿತ) ಬಾಬು ಅವರು ತಾಪಂ ಕಾರ್ಯನಿರ್ವಹಣಾಧಿಕಾರಿ ಮಮತಾ ಅವರಿಗೆ ಪತ್ರ ಮುಖೇನ ಸೂಚಿಸಿ ೨೮ ಡಿಸೆಂಬರ್ ೨೦೨೩ರೊಳಗೆ ವರದಿ ನೀಡುವಂತೆ ತಿಳಿಸಿದ್ದರೂ ಇದುವರೆಗೂ ತಾಪಂ ಇಒ ಅವರು ವರದಿ ಸಲ್ಲಿಸಿಲ್ಲದಿರುವುದು ಅನುಮಾನಗಳಿಗೆ ಕಾರಣವಾಗಿದೆ.ವರ್ಗಾವಣೆಯಾಗಿದ್ದರೂ ಎರಡು ತಿಂಗಳಿಂದ ಹಲಗೂರಲ್ಲೇ ಠಿಕಾಣಿ

ಸರ್ಕಾರಿ ಬಿ-ಖರಾಬು ಜಮೀನನ್ನು ಸೇರಿಸಿ ಅಕ್ರಮ ಖಾತೆ ಮಾಡಿರುವ ಆರೋಪದಲ್ಲಿ ಸಿಲುಕಿರುವ ಹಲಗೂರು ಗ್ರಾಪಂ ಪಿಡಿಒ ಸಿ.ರುದ್ರಯ್ಯ ಅವರನ್ನು ಮಂಡ್ಯ ತಾಲೂಕು ಬೇಲೂರು ಗ್ರಾಪಂ ಪಿಡಿಒ ಹುದ್ದೆಗೆ ವರ್ಗಾವಣೆ ಮಾಡಿ ಕಳೆದ ನ.೧೧ರಂದು ಸರ್ಕಾರ ಆದೇಶ ಹೊರಡಿಸಿದೆ. ಆದೇಶ ಜಾರಿಯಾಗಿ ೨ ತಿಂಗಳಾದರೂ ಸಿ.ರುದ್ರಯ್ಯ ವರ್ಗಾವಣೆಯಾಗಿರುವ ಜಾಗಕ್ಕೆ ವರದಿ ಮಾಡಿಕೊಂಡಿಲ್ಲದಿರುವುದು ಸಾರ್ವಜನಿಕವಾಗಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ