ಕನ್ನಡಪ್ರಭ ವಾರ್ತೆ ತುಮಕೂರು ವಚನ ಸಾಹಿತ್ಯವನ್ನು ಸಂಗ್ರಹಿಸಿ, ಅದನ್ನು ಮುಂದಿನ ಪೀಳಿಗೆಗೆ ಉಳಿಸಿಕೊಟ್ಟು ಶ್ರೀಮಂತಗೊಳಿಸಿದ ಡಾ.ಫ.ಗು.ಹಳಕಟ್ಟಿಯವರು, ಬದುಕಿನಲ್ಲಿ ಅತ್ಯಂತ ಕಡು ಬಡವರಾದರು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅಭಿಪ್ರಾಯಪಟ್ಟಿದ್ದಾರೆ. ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕಸಾಪ ವತಿಯಿಂದ ಆಯೋಜಿಸಿದ್ದ ಡಾ.ಫ.ಗು.ಹಳಕಟ್ಟಿ ಅವರ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು,ವಕೀಲರಾಗಿ, ಪತ್ರಕರ್ತರಾಗಿ, ಮುದ್ರಕರಾಗಿ, ತಮ್ಮ ತನು, ಮನ, ದನವನ್ನು ವಿನಿಯೋಗಿಸಿ, ವಚನ ಸಾಹಿತ್ಯವನ್ನು ಸಂಗ್ರಹಿಸಿ, ಅದನ್ನು ಪ್ರಕಟಿಸುವ ಮೂಲಕ ಅದನ್ನು ವಿಶ್ವದಲ್ಲಿಯೇ ಶ್ರೀಮಂತಗೊಳ್ಳಲು ಕಾರಣರಾದ ಡಾ.ಫ.ಗು.ಹಳಕಟ್ಟಿ, ಜೀವನದುದ್ದಕ್ಕೂ ಹರಿದ ಹಂಗಿ, ಹೊರೆ ಹೊಟ್ಟೆಯಲ್ಲಿಯೇ ಜೀವನ ನಡೆಸಿದರು.ಮೃತನಾದ ಮಗನ ಶವವನ್ನು ತರಲು ಹಣವಿಲ್ಲದ ಸ್ಥಿತಿಗೆ ತಲುಪಿದ್ದು ಮಾತ್ರ ದುರಂತ ಎಂದರು.ಇಂದು ಜನರು ಅವಕಾಶ ಸಿಕ್ಕಾಗ ತಮಗೆ, ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಮರಿ ಮಕ್ಕಳಿಗೆ ಆಗುವಷ್ಟು ಕೂಡಿಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಆದರೆ 20ನೇ ಶತಮಾನದಲ್ಲಿ ಯಾವ ಪ್ರತಿಫಲಾಫೇಕ್ಷೆ ಇಲ್ಲದೆ, ಸೈಕಲ್ ಹತ್ತಿ, ಊರೂರು ತಿರುಗಿ, ತಾಳೆಗರಿ, ತಾಡಪತ್ರ, ಒಲೆಗರಿಗಳನ್ನು ಸಂಗ್ರಹಿಸಿ ಅವುಗಳಲ್ಲಿ ಇರುವುದನ್ನು ಬರಹ ರೂಪಕ್ಕೆ ತಂದು, ಮುದ್ರಿಸಿ, ಸಮಾಜಕ್ಕೆ ಉಡುಗೊರೆಯಾಗಿ ನೀಡಿದವರು ಡಾ.ಫ.ಗು.ಹಳಕಟ್ಟಿರುವರು, ಹಾಗಾಗಿಯೇ ಅವರನ್ನು ವಚನ ಗುಮ್ಮಟ್ಟ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ವಚನ ಸಾಹಿತ್ಯ ಉಳಿದಿದ್ದರೆ, ಅದರ ಹಿಂದೆ ಡಾ.ಫ.ಗು.ಹಳಕಟ್ಟಿ ಅವರ ಶ್ರಮವಿದೆ. ಇಂತಹ ವ್ಯಕ್ತಿತ್ವ ನಮ್ಮಂತಹ ಎಲ್ಲರಿಗೂ ಮಾದರಿ ಎಂದು ಕೆ.ಎಸ್.ಸಿದ್ದಲಿಂಗಪ್ಪ ತಿಳಿಸಿದರು.ವಿದ್ವಾನ್ ಡಾ.ಎಂ.ಜಿ.ಸಿದ್ದರಾಮಯ್ಯ ಮಾತನಾಡಿ, ಡಾ.ಫ.ಗು.ಹಳಕಟ್ಟಿ ಶರಣರು ಹೇಳುವಂತೆ ಸ್ಥಾವರವಲ್ಲ, ಜಂಗಮ, ಅವರು ಸಂಗ್ರಹಿಸಿದ ವಚನ ಸಾಹಿತ್ಯವೂ ಸ್ಥಾವರವಾಗದೆ, ಜಂಗಮವಾಗಿ ಎಲ್ಲರ ಮನ, ಮನೆಗಳನ್ನು ಬೆಳಗುವಂತೆ ಮಾಡಬೇಕಾಗಿದೆ ಎಂದರು. ವಚನ ಪಿತಾಮಹಾ ಡಾ.ಫ.ಗು.ಹಳಕಟ್ಟಿ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಗಂಗಾಧರ ಕೊಡ್ಲಿ, ವಕೀಲರಾದ ಡಾ.ಫಕೀರಪ್ಪ, ಗುರುಬಸಪ್ಪ ಹಳಕಟ್ಟಿ ಅವರು ವಕೀಲರಾಗಿ ವೃತ್ತಿ ಆರಂಭಿಸಿದ್ದರೂ, ಹಗಲಿರುಳು ದುಡಿದಿದ್ದು, ವಚನ ಸಾಹಿತ್ಯ ಸಂಗ್ರಹ ಮತ್ತು ಪ್ರಚಾರಕಕ್ಕೆ,ತಮ್ಮ ಮನೆಯನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಪ್ರಿಟಿಂಗ್ ಪ್ರೆಸ್ ಆರಂಭಿಸಿದರು. ವಚನ ಸಾಹಿತ್ಯದ ಜೊತೆಗೆ, ಶಿವಾನುಭವ ಪತ್ರಿಕೆಯ ಮೂಲಕ ಜನರಿಗೆ ಶರಣ ಸಾಹಿತ್ಯವನ್ನು ತಲುಪಿಸುವ ಕೆಲಸ ಮಾಡಿದರು.ಅ ರಿವೇ ಗುರು ಎಂಬ ನಾಣ್ನುಡಿ ಇವರಿಗೆ ಅನ್ವರ್ಥ,ತಮ್ಮ ಪತ್ರಿಕೆಗಳ ಮೂಲಕ ವಚನ ಸಾಹಿತ್ಯದ ಜ್ಞಾನ ಲೋಕಕ್ಕೆ ಪರಿಚಯಿಸಿದರು. ಅನುಭವ, ಅನುಭಾವ ಮತ್ತು ಅನುಸಂಧಾನದ ಭಾಗವೇ ಆಗಿರುವ ವಚನ ಸಾಹಿತ್ಯಕ್ಕಾಗಿ ಎಲ್ಲವನ್ನು ಆರ್ಪಿಸಿಕೊಂಡವರು. ಬಿಎಲ್‌ಡಿಯಂತಹ ಸಂಸ್ಥೆಯ ಜೊತೆಗೆ, ಶ್ರೀಸಿದ್ದೇಶ್ವರಸ್ವಾಮಿ ಪ್ರಾಥಮಿಕ ಶಾಲೆ, ಸಹಕಾರಿ ಬ್ಯಾಂಕ್ ಸ್ಥಾಪಿಸಿ, ಸಮುದಾಯದ ಏಳಿಗೆಗೆ ತಮ್ಮನ್ನು ಮುಡಿಪಾಗಿಟ್ಟವರು ಎಂದರು.ಇದೇ ವೇಳೆ ವಚನ ಸಾಹಿತ್ಯ ಸಮೂಹ ಗಾಯನ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕು.ಮಿರ್ಜಿ,ಇತಿಹಾಸ ತಜ್ಞ ಡಾ.ಡಿ.ಎನ್.ಯೋಗೀಶ್ವರಪ್ಪ,ಪ ತ್ರಕರ್ತ ಹಾಗೂ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್,ವಿದ್ವಾನ್ ಎಂ.ಜಿ.ಸಿದ್ದರಾಮಯ್ಯ, ಬಸವ ಕೇಂದ್ರದ ಅಧ್ಯಕ್ಷರಾದ ಸಿದ್ದಗಂಗಮ್ಮ, ಜಾಗತಿಕ ಲಿಂಗಾಯಿತ ಮಹಾಸಭಾದ ಅಧ್ಯಕ್ಷರಾದ ಜಿ.ಬಿ.ನಾಗಭೂಷಣ್, ಕಲ್ಪನಾ ಉಮೇಶ್, ಚಿಕ್ಕಬೆಳ್ಳಾವಿ ಶಿವಕುಮಾರ್, ಡಿ.ರಾಜಶೇಖರಯ್ಯ, ಕಲ್ಪನಾ ಉಮೇಶ್ ಉಪಸ್ಥಿತರಿದ್ದರು.