ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ವತಿಯಿಂದ ಡಾ.ಫ.ಗು.ಹಳಕಟ್ಟಿಯವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಜನಸಾಮಾನ್ಯರ ಆಡುಭಾಷೆಯಲ್ಲಿ ಬರೆದ ವಚನಗಳನ್ನು ಒಟ್ಟುಗೂಡಿಸುವ ಕೆಲಸವಾಗದಿದ್ದರೆ ಆ ಶ್ರೇಷ್ಠ ಸಾಹಿತ್ಯವು ಕಾಲಗರ್ಭದಲ್ಲಿ ಕಣ್ಮರೆಯಾಗುತ್ತಿತ್ತು ಎಂದರು.
12ನೇ ಶತಮಾನದಲ್ಲಿ ವಚನಕಾರರು ತಮ್ಮ ಸ್ವ-ಅನುಭವದ ಮೂಲಕ ಮೂಢನಂಬಿಕೆಗಳನ್ನು ವಿರೋಧಿಸಿ, ಮಹಿಳಾ ಸಮಾನತೆ ಮತ್ತು ಸಾಮಾಜಿಕ ಬದಲಾವಣೆಗಾಗಿ ವಚನಗಳನ್ನು ರಚಿಸಿದರು. ತಾಳೆಪತ್ರಗಳಲ್ಲಿದ್ದ ಸುಮಾರು 250ಕ್ಕೂ ಹೆಚ್ಚು ವಚನಕಾರರ ವಚನಗಳನ್ನು ಮನೆಮನೆಗೆ ಅಲೆದು ಸಂಗ್ರಹಿಸಿ, ಸಂರಕ್ಷಿಸಿ, ಗ್ರಂಥ ರೂಪದಲ್ಲಿ ಹೊರತಂದ ಕೀರ್ತಿ ಹಳಕಟ್ಟಿಯವರಿಗೆ ಸಲ್ಲುತ್ತದೆ. ಆದ್ದರಿಂದಲೇ ಅವರನ್ನು ವಚನ ಸಾಹಿತ್ಯದ ಪಿತಾಮಹ ಎಂದು ಕರೆಯಲಾಗುತ್ತದೆ ಎಂದರು.ಇಂದಿನ ಇಂಗ್ಲಿಷ್ ಮಾಧ್ಯಮದ ಹಾವಳಿಯ ನಡುವೆ ಕನ್ನಡ ಭಾಷೆ ಕಡೆಗಣಿಸಬಾರದು. ಬೇರೆ ಭಾಷೆಗಳನ್ನು ಕಲಿಯಿರಿ, ಗೌರವಿಸಿ ಆದರೆ ನಮ್ಮ ಮಾತೃಭಾಷೆಯಾದ ಕನ್ನಡಕ್ಕೆ ಮೊದಲ ಆದ್ಯತೆ ನೀಡಿ. ಕನ್ನಡದ ಅಸ್ಮಿತೆ ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಯುವಜನತೆ ಸಂಕಲ್ಪ ಮಾಡಬೇಕು ಎಂದರು.
ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಅಂಗವಾಗಿ ಡಾ.ಫ.ಗು.ಹಳಕಟ್ಟಿಯವರು ಬದುಕು, ಬರಹ ಹಾಗೂ ವಚನ ಸಾಹಿತ್ಯ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಕವಿಗೋಷ್ಠಿ ಗಮನ ಸೆಳೆಯಿತು. ಸುಮಾರು 14ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು. ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ ಕವಿಗಳಿಗೆ ಪುಸ್ತಕ ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಿ ಗೌರವಿಸಲಾಯಿತು.