ಹುಬ್ಬಳ್ಳಿ:
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರ ಕಾರ್ಮಿಕರ ಮತ್ತು ನೌಕರರ ಸಂಘದ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿರುವ ಪೌರ ಕಾರ್ಮಿಕರು 4ನೇ ದಿನವಾದ ಶನಿವಾರ ನಗರದಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿದರು.ನಗರದ ಅಂಬೇಡ್ಕರ್ ವೃತ್ತದಿಂದ ಆರಂಭವಾದ ಅರೆಬೆತ್ತಲೆ ಮೆರವಣಿಗೆಯಲ್ಲಿ ಭಾಗವಹಿಸಿದ್ದ ನೂರಾರು ಪೌರ ಕಾರ್ಮಿಕರು ಸರ್ಕಾರ ಹಾಗೂ ಮಹಾನಗರ
ಪಾಲಿಕೆ ಆಯುಕ್ತರ ವಿರುದ್ಧ ವಿವಿಧ ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಂತರ ಚೆನ್ನಮ್ಮ ವೃತ್ತದ ಮೂಲಕ ಪಾಲಿಕೆ ಕಚೇರಿ ಆವರಣಕ್ಕೆ ಆಗಮಿಸಿದ ಪ್ರತಿಭಟನಾಕಾರರು, ಸಮಾವೇಶ ನಡೆಸಿದರು.ಸರ್ಕಾರ ಹೊರಡಿಸಿರುವ 4 ನೇಮಕಾತಿ ಅಧಿಸೂಚನೆ ಅನ್ವಯ ಪಾಲಿಕೆಯ 870 ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು. ತಕ್ಷಣ 134 ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಿಸಬೇಕು. ಅಲ್ಲದೇ ಪಾಲಿಕೆಯ ಸಾಮಾನ್ಯ ಸಭೆಯ ಠರಾವು ಅನ್ವಯ 799 ಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪಾವತಿಸುವ ನಿರ್ಧಾರವನ್ನು ಸರ್ಕಾರ ಹಾಗೂ ಪಾಲಿಕೆ ಕೈಗೊಳ್ಳಬೇಕು. ಪೌರಕಾರ್ಮಿಕರ ಸಂಘಕ್ಕೆ ಕೊಠಡಿ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ ನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ನಮ್ಮ ಬೇಡಿಕೆ ಈಡೇರಿಸದೇ ಅನ್ಯಾಯ ಮಾಡುತ್ತಿದ್ದಾರೆ. ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ಅವರಿಗೂ ನಮ್ಮ ಹಕ್ಕೊತ್ತಾಯ ಮಂಡಿಸಲಾಗುವುದು. ಜತೆಗೆ ಡಿ. 18ರಂದು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.ಈ ವೇಳೆ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರ ಕಾರ್ಮಿಕರ ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ, ರಾಜು ನಾಗರಾಳ, ಮಹಾದೇವಿ ಮಾದರ, ಶಾಂತವ್ವ ದೊಡ್ಡಮನಿ, ಸುಮಿತ್ರಾ ಹೊಸಳ್ಳಿ, ಗೋಪಿ ಬಿಂದಗಿ, ಆನಂದ ಗೊಲ್ಲರ, ಕಸ್ತೂರಿ ಕೊಣ್ಣೂರ, ರಾಕೇಶ್ ಚುರಮುರಿ, ಪರಶುರಾಮ್ ಶಿಕ್ಕಲಗಾರ, ಯಲಮ್ಮ ಗೊಲ್ಲರ, ಸುನೀಲ ದೊಡ್ಡಮನಿ, ಲಕ್ಷ್ಮೀ ಗೊಲ್ಲರ ಸೇರಿದಂತೆ ಹಲವರಿದ್ದರು.