ಬಿ.ಎಚ್.ಎಂ. ಅಮರನಾಥಶಾಸ್ತ್ರಿ
ಹಂಪಿ: ವಿಶ್ವ ವಿಖ್ಯಾತ ಹಂಪಿ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಬೈ ಸ್ಕೈ ಮೂಲಕ ಪ್ರವಾಸಿಗರು ಹಂಪಿ ಸ್ಮಾರಕಗಳ ಸೌಂದರ್ಯ ಸವಿದು ಪುಳಕಿತರಾದರು.
ಕಮಲಾಪುರದ ಹೋಟೆಲ್ ಮಯೂರ ಭುವನೇಶ್ವರಿ ಆವರಣದಲ್ಲಿ ನಿರ್ಮಿಸಲಾದ ಎರಡು ತಾತ್ಕಾಲಿಕ ಹೆಲಿಪ್ಯಾಡ್‌ಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಹಮ್ಮಿಕೊಂಡ, ಚಿಪ್ಸನ್ ಏವಿಯೇಷನ್ ಪ್ರೈ.ಲಿ. ಮತ್ತು ತುಂಬೆ ಏವಿಯೇಷನ್ ಪ್ರೈ.ಲಿ. ಕಂಪನಿಗಳು ಒದಗಿಸಿರುವ ಬೈ ಸ್ಕೈನಲ್ಲಿ ಶುಕ್ರವಾರ ಸ್ಥಳೀಯ ಹಾಗೂ ಹೊರರಾಜ್ಯಗಳಿಂದ ಬಂದ ಪ್ರವಾಸಿಗರು ಪಾಲ್ಗೊಂಡಿದ್ದರು. ಆಗಸದಿಂದ ಹಂಪಿ ಮತ್ತು ಅದರ ಸುತ್ತಮುತ್ತಲಿನ ಪ್ರಾಚೀನ ಸ್ಮಾರಕಗಳ ಸೊಬಗು ವೀಕ್ಷಿಸಿ ಹರ್ಷ ವ್ಯಕ್ತ ಪಡಿಸಿದರು.
ತಡವಾಗಿ ಆರಂಭಗೊಂಡ ಬೈಸ್ಕೈ : ಫೆ. 28ರಂದು ಬೆಳಗ್ಗೆ 10 ಗಂಟೆಗೆ ಬೈ ಸ್ಕೈ ಆರಂಭವಾಗಬೇಕಿತ್ತು. ಆದರೆ ಹ್ಯಾಲಿಕ್ಯಾಪ್ಟರ್ ತಡವಾಗಿ ಬಂದ ಹಿನ್ನೆಲೆ ಮಧ್ಯಾಹ್ನ 2ರಿಂದ ಆರಂಭಗೊಂಡಿತು. ಅಲ್ಲದೇ ಒಂದೇ ಹೆಲಿಕ್ಯಾಪ್ಟರ್‌ನಲ್ಲಿ ಬೈ ಸ್ಕೈ ಸೇವೆ ಆರಂಭವಾಯಿತು. ಈ ಕಾರ್ಯಕ್ರಮಕ್ಕೆ ಮಾ. 1ರ ಬೆಳಗ್ಗೆ ವಿಧ್ಯುಕ್ತ ಚಾಲನೆ ದೊರೆಯಲಿದೆ. ಎರಡು ಹೆಲಿಕ್ಯಾಪ್ಟರ್‌ಗಳು ಸೇವೆ ನೀಡಲಿವೆ. ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ಸಮಯ ಸೇರಿ 7 ನಿಮಿಷಗಳ ಹಾರಾಟಕ್ಕೆ ಪ್ರತಿ ವ್ಯಕ್ತಿಗೆ ₹3999 ನಿಗದಿ ಮಾಡಲಾಗಿದೆ.
ಸೆಲ್ಸಿ ಪಡೆಯುವವರೆ ಹೆಚ್ಚು : ಬೈ ಸ್ಕೈನಲ್ಲಿ ತೆರಳುವವರಿಗಿಂತ ಹೆಲಿಕಾಪ್ಟರ್ ಹಾರಾಟ ಹಾಗೂ ಅದರ ಬಳಿ ನಿಂತು ಸೆಲ್ಪಿ ಕ್ಲಿಕ್ಕಿಸಿಕೊಳ್ಳುವವರೆ ಹೆಚ್ಚಾಗಿದ್ದರು.
ಮೊದಲ ಬಾರಿಗೆ ಹಂಪಿ ಉತ್ಸವದ ವೀಕ್ಷಣೆಗೆ ಆಗಮಿಸಿದ್ದೆವು. ಜೀವನದಲ್ಲಿ ಒಮ್ಮೆಯಾದರು ಹೆಲಿಕಾಪ್ಟರ್‌ನಲ್ಲಿ ತೆರಳಬೇಕೆಂಬುದು ಆಸೆಯಾಗಿತ್ತು. ಹಂಪಿ ಉತ್ಸವಕ್ಕೆ ಆಯೋಜಿಸಿರುವ ಬೈ ಸ್ಕೈನಿಂದ ಆಗಸದಿಂದ ಹಂಪಿಯನ್ನು ವೀಕ್ಷಿಸುವ ಜತೆಗೆ ನಮ್ಮ ಬಹುದಿನಗಳ ಆಸೆ ಈಡೇರಿದ್ದು ಪುಳಕಿತಗೊಂಡಿದ್ದೇವೆ. ಅಲ್ಲದೇ ಇದು ನಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣವಾಗಿದೆ ಎಂದು ಹೊರ ರಾಜ್ಯದಿಂದ ಆಗಮಿಸಿದ್ದ ಪ್ರವಾಸಿಗರಾದ ಸುಶಾಂತ್ ತಮ್ಮ ಅನುಭವ ಹಂಚಿಕೊಂಡರು.