ಕನ್ನಡಪ್ರಭ ವಾರ್ತೆ ಹೊಸಪೇಟೆ
ಹಂಪಿ ಉತ್ಸವದಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಜನರು ಬರುವ ನಿರೀಕ್ಷೆ ಇರುವ ಹಿನ್ನೆಲೆ ಉತ್ಸವದಲ್ಲಿ ಗಮನ ಸೆಳೆಯಲು ಶ್ವಾನ, ಟಗರು, ಎತ್ತುಗಳ ಪ್ರದರ್ಶನ ಆಯೋಜಿಸಲಾಗಿದೆ. ಇದಕ್ಕಾಗಿ ಬೆಂಗಳೂರಿನ ಉಡುಪಾಸ್ ಸಂಸ್ಥೆಯಿಂದ ಟೆಂಟ್ ನಿರ್ಮಾಣ ಮಾಡಲಾಗಿದೆ.
ಹೊಸಪೇಟೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಂದ ವಿವಿಧ ಜಾತಿಯ ಶ್ವಾನಗಳನ್ನು ತಂದು ಪ್ರದರ್ಶನ ಮಾಡಲಾಗುತ್ತದೆ. ಜೊತೆಗೆ ಎತ್ತುಗಳ ಪ್ರದರ್ಶನ ಮತ್ತು ಟಗರು ಪ್ರದರ್ಶನ ಕೂಡ ನಡೆಯಲಿದೆ. ಇದಕ್ಕೆ ಆಕರ್ಷಕ ಬಹುಮಾನ ಕೂಡ ಇರಲಿದೆ. ಫೆ.28, ಮಾರ್ಚ್ 1 ಮತ್ತು 2ರಂದು ಉತ್ಸವ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಕಾರ್ಯ ಭರದಿಂದ ಸಾಗಿದೆ.ಸುಗಮ ಸಂಚಾರಕ್ಕೆ ಪರಿಶೀಲನೆ:
ಹೊಸಪೇಟೆಯ ಅನಂತಶಯನಗುಡಿ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆದಿರುವ ಹಿನ್ನೆಲೆ ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮವಹಿಸಲು ಪೊಲೀಸರು ಪರಿಶೀಲನೆ ನಡೆಸಿದ್ದು, ಉತ್ಸವಕ್ಕೆ ಜನರು ಬರಲು ಹಾಗೂ ತೆರಳಲು ವ್ಯವಸ್ಥೆ ಮಾಡಲು ಪರಿಶೀಲನೆ ನಡೆಸಿದ್ದಾರೆ.
ಹಂಪಿಯಲ್ಲಿ ಪೊಲೀಸರು ಮೂರು ದಿನಗಳು ಕೆಲಸ ನಿರ್ವಹಿಸಲು ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆ ಸೇರಿದಂತೆ ಹೊರ, ಜಿಲ್ಲೆಗಳಿಂದ ಪೊಲೀಸರು ಬರುವ ಹಿನ್ನೆಲೆಯಲ್ಲಿ ಈಗ ತಾತ್ಕಾಲಿಕ ವ್ಯವಸ್ಥೆ ಮಾಡಲು ಟೆಂಟ್‌ಗಳನ್ನು ನಿರ್ಮಿಸಲಾಗುತ್ತಿದೆ.
ಹಂಪಿ ಉತ್ಸವದಲ್ಲಿ ಸ್ಥಳೀಯ, ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ನಾಲ್ಕು ವೇದಿಕೆಗಳಲ್ಲಿ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದೆ. ಕಲಾ ಪ್ರದರ್ಶನ ವೀಕ್ಷಣೆ ಮಾಡಲು ಲಕ್ಷಾಂತರ ಜನರು ಹಂಪಿಗೆ ಹರಿದು ಬರಲಿದ್ದಾರೆ. ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.
ಹಂಪಿ ಉತ್ಸವದ ಸಿದ್ಧತಾ ಕಾರ್ಯವನ್ನು ಜಿಲ್ಲಾಧಿಕಾರಿ, ಎಸ್ಪಿ ಹಾಗೂ ಜಿಪಂ ಸಿಇಒ ಪರಿಶೀಲನೆ ನಡೆಸುತ್ತಿರುವ ಹಿನ್ನೆಲೆ ಆಯಾ ಅಧಿಕಾರಿಗಳು ತಮಗೆ ನೀಡಿರುವ ಹೊಣೆಗಾರಿಕೆ ನಿಭಾಯಿಸುತ್ತಿದ್ದಾರೆ.ಹಂಪಿ ಉತ್ಸವಕ್ಕಾಗಿ ಈಗಾಗಲೇ ಸಿದ್ಧತೆ ಕಾರ್ಯ ನಡೆಸಲಾಗುತ್ತಿದೆ. ಈಗಾಗಲೇ ವಿವಿಧ ಸಮಿತಿಗಳನ್ನು ರಚನೆ ಮಾಡಿ ಹೊಣೆಗಾರಿಕೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದ್ದಾರೆ.