ಹಂಪಿ ಉತ್ಸವದ ಕವಿಗೋಷ್ಠಿಯಲ್ಲಿ ಮೇಳೈಸಿದ ಪರಿಸರ ಗೀತೆ । ವಿಶ್ವವಿಖ್ಯಾತ ತಾಣದ ಸುತ್ತಮುತ್ತ ಕಾರ್ಖಾನೆ ಆರಂಭವಾಗಬಾರದು
ಭೀಮಣ್ಣ ಗಜಾಪುರಕನ್ನಡಪ್ರಭ ವಾರ್ತೆ ಹಂಪಿ (ವಿರುಪಾಕ್ಷೇಶ್ವರ ವೇದಿಕೆ)
ಕೊಪ್ಪಳದಲ್ಲಿ ತಲೆ ಎತ್ತಿರುವ ಕಾರ್ಖಾನೆಗಳಿಂದ ಇಡೀ ಮನುಕುಲವೇ ವಿನಾಶದಂಚಿಗೆ ಸಾಗುತ್ತಿದ್ದು, ಹಂಪಿಯಂತಹ ವಿಶ್ವವಿಖ್ಯಾತ ತಾಣದ ಸುತ್ತಮುತ್ತ ಕಾರ್ಖಾನೆಗಳು ಆಗದಂತೆ ನೋಡಿಕೊಳ್ಳಬೇಕು. ಹಂಪಿ ಮತ್ತೊಂದು ಕೊಪ್ಪಳ ಆಗದಿದ್ದರೆ ಅಷ್ಟೇ ಸಾಕು ಎಂದು ಸಾಹಿತಿ ಡಾ. ಅಲ್ಲಮಪ್ರಭು ಬೆಟ್ಟದೂರು ಕಾಳಜಿ ವ್ಯಕ್ತಪಡಿಸಿದರು.ಹಂಪಿ ಉತ್ಸವದ ವಿರುಪಾಕ್ಷೇಶ್ವರ ವೇದಿಕೆಯಲ್ಲಿ ಶನಿವಾರ ಆಯೋಜಿಸಿದ್ದ ಕವಿಗೋಷ್ಠಿಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಪಂಪನ ಪರಿಸರ ಹಂಪಿಯಲ್ಲಿ ಸ್ವಚ್ಛಂಧದ ವಾತಾವರಣ ಇರಬೇಕು, ಕೊಪ್ಪಳದಲ್ಲಿ ಎಲ್ಲಿ ನೋಡಿದರೂ ಧೂಳು ತಾಂಡವಾಡುತ್ತಿದೆ. ಗಿಣಿಗೇರಾ ಈಗ ವಿಷಯುಕ್ತ ಕಾರ್ಖಾನೆಗಳ ಕೂಪವಾಗಿದೆ, ಬಗನಾಳ್ ಗ್ರಾಮದ ಜನತೆ ರೋಗಗಳಿಂದ ನರಳಾಡುವಂತಾಗಿದೆ ಎಂದು ಹಂಪಿಯ ಪಕ್ಕದಲ್ಲಿರುವ ಕೊಪ್ಪಳದಲ್ಲಿಯ ಭೀಕರತೆಯನ್ನು ತೆರೆದಿಟ್ಟರು. ಈಗ ವಿರೋಧ ಪಕ್ಷವೇ ಇಲ್ಲ, ಪಕ್ಷಗಳಲ್ಲಿಯೇ ವಿರೋಧ ಇರುವುದು ನಮ್ಮ ರಾಜಕೀಯ ಹಾದಿ ಎತ್ತ ಸಾಗುತ್ತಿದೆ ಎಂಬುದು ತಿಳಿಯುತ್ತದೆ ಎಂದರು.
10ನೇ ಶತಮಾನದ ಪಂಪ, ರನ್ನ, ಪುರಂದರದಾಸರ ಹಾಗೂ ಕನಕದಾಸರು ಇಂದಿಗೂ ನಮಗೆ ಪ್ರಸ್ತುತವಾಗುವುದು ಅವರ ಕಾವ್ಯದಲ್ಲಿರುವ ಅಂತಸತ್ವದಿಂದ. ಕವಿಗೋಷ್ಠಿಗಳಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವಂತಾಗಬೇಕು. ಕವಿಯಾದವರಿಗೆ ಆಳವಾದ ಅಧ್ಯಯನದ ಅವಶ್ಯಕತೆಯಿದೆ. ಮೈಸೂರು ದಸರಾದಲ್ಲಿ ನಡೆಯುವ ಕವಿಗೋಷ್ಠಿಯ ಕವಿತೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತದೆ. ಇದೇ ಮಾದರಿಯಲ್ಲಿ ಹಂಪಿ ಉತ್ಸವದಲ್ಲಿಯೂ ಕವಿಗೋಷ್ಠಿಗಳ ಪುಸ್ತಕ ಬಿಡುಗಡೆ ಮಾಡಬೇಕು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಭಿಪ್ರಾಯಪಟ್ಟರು.ಪ್ರಾಸ್ತವಿಕವಾಗಿ ರಮೇಶ ಗಬ್ಬೂರ್ ಮಾತನಾಡಿ, ಕವಿಗಳು ಶಾಶ್ವತವಾದ ವಿರೋಧ ಪಕ್ಷದ ಶಾಸಕರಿದ್ದಂತೆ. ಕವಿತೆ ಸಮಾಜ ಅಸಮಾನತೆ, ಮೂಢನಂಬಿಕೆಗಳ ವಿರುದ್ಧ ಪ್ರಶ್ನೆ ಹುಟ್ಟು ಹಾಕಬೇಕು. ಬಣ್ಣ ಮತ್ತು ಬಣಗಳು ಇಂದಿನ ಕಾಲದ ಕವಿಗಳಿಗೆ ಅಡ್ಡಿಯಾಗಿವೆ. ಕಾವ್ಯ ಎಲ್ಲರನ್ನೂ ಕೂಡಿಸಿಕೊಂಡು ಹೋಗುವ ಕೂಡಲ ಸಂಗಮವಾಗಬೇಕು ಎಂದರು. ಕವಿಗಳೆಂದರೆ ಸಂತೆಯಲ್ಲಿ ನಿಂತ ಸಂತರಿದ್ದಂತೆ. ಮಾತಿಗೆ ಮಾತು ಬೆಳೆದರೆ ಜಗಳವಾಗುತ್ತದೆ, ಮಾತಿಗೆ ಮೌನ ಬೆರೆತರೆ ಪ್ರೀತಿಯಾಗುತ್ತದೆ, ಕಾವ್ಯವಾಗುತ್ತದೆ ಎಂದರು.ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ , ಜಿಪಂ ಸಿಇಒ ಅಕ್ರಮ್ ಷಾ ಮಾತನಾಡಿದರು. ಕಲಾವಿದರಾದ ಮ. ಬ. ಸೋಮಣ್ಣ ಅವ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಅಖಂಡ ಬಳ್ಳಾರಿ ಕಸಾಪ ನಿಕಟಪೂರ್ವ ಅಧ್ಯಕ್ಷ ಸಿದ್ದರಾಮ ಕಲ್ಮಠ. ಸಾಹಿತಿಗಳಾದ ಸೋ. ದಾ. ವಿರೂಪಾಕ್ಷಗೌಡ. ಡಾ. ವೀರೇಶ ಉತ್ತಂಗಿ, ಪ್ರಾಚಾರ್ಯರಾದ ನಾಗರಾಜ್ ಹವಾಲ್ದಾರ್, ಗುಪ್ಪಾಲ್ ಕೊಟ್ರೇಶ ಸೇರಿದಂತೆ ಇತರರು ಭಾಗವಹಿಸಿದ್ದರು.