ಮಂಜುನಾಥ ಕೆ.ಎಂ.
ಉತ್ಸವದ ಭರಾಟೆ ಮುಗಿಯುತ್ತಿದ್ದಂತೆಯೇ ಬೇರೆ ಊರುಗಳಿಂದ ಆಗಮಿಸಿದ್ದ ವ್ಯಾಪಾರಿಗಳು, ಸಾವಿರಾರು ಸಂಖ್ಯೆಯಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು, ಸಾಂಸ್ಕೃತಿಕ ಲೋಕ ಸೃಷ್ಟಿಸಲು ರಾಜ್ಯದ ನಾನಾ ಕಡೆಗಳಿಂದ ಬಂದಿದ್ದ ಕಲಾವಿದರು ಭಾನುವಾರ ತಡರಾತ್ರಿಯಿಂದಲೇ ಊರುಗಳಿಗೆ ಮರಳಿದರೆ, ಉತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಬಂದ ಜನರು ಬಿಸಾಡಿದ ಪ್ಲಾಸ್ಟಿಕ್ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಶೇಖರಣೆಗೊಂಡಿದ್ದ ತ್ಯಾಜ್ಯವನ್ನು ಸಂಗ್ರಹಿಸಿ, ಸ್ವಚ್ಛಗೊಳಿಸುವ ಕೆಲಸದಲ್ಲಿ ಪೌರ ಕಾರ್ಮಿಕ ಸಿಬ್ಬಂದಿ ಸೋಮವಾರ ಬೆಳಗ್ಗೆಯಿಂದಲೇ ನಿರತರಾಗಿದ್ದರು.
ಫೆ. 13ರಿಂದ ಮೂರು ದಿನಗಳ ಕಾಲ ಜರುಗಿದ ಹಂಪಿ ಉತ್ಸವದ ಆರು ವೇದಿಕೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸ್ಥಳೀಯರಿಗೆಂದೇ ಸಾಹಸ ಕ್ರೀಡೆಗಳು, ಬೈಕ್ ರ್ಯಾಲಿ, ಬೋಟಿಂಗ್, ಆಹಾರಮೇಳ, ಗಾಳಿಪಟ ಪ್ರದರ್ಶನ ಮತ್ತಿತರ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಶಿಲ್ಪಕಲಾ ಶಿಬಿರ, ಚಿತ್ರಕಲಾ ಶಿಬಿರಗಳಲ್ಲಿ ರಾಜ್ಯದ ವಿವಿಧ ಕಲಾವಿದರು ಭಾಗವಹಿಸಿ ಮೆರಗು ನೀಡಿದರು. ರೈತರ ಹಾಗೂ ಕೃಷಿ ಪ್ರಿಯರಿಗಾಗಿ ಎತ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ವಿಚಾರಸಂಕಿರಣ, ಯುವಗೋಷ್ಠಿಗಳು ಹಾಗೂ ಕವಿಗೋಷ್ಠಿಗಳಲ್ಲಿ ಕವಿಗಳು ಭಾಗವಹಿಸಿದ್ದರು. ಹಂಪಿಯ ಆನೆಲಾಯ ಮತ್ತು ಕುದುರೆಲಾಯ ಆವರಣದಲ್ಲಿ ಹಮ್ಮಿಕೊಂಡಿದ್ಧ ವಿಜಯನಗರ ವೈಭವದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಿತ್ಯ ಸಾವಿರಾರು ಜನರು ವೀಕ್ಷಿಸಿದರು. ನೃತ್ಯ, ಸಂಗೀತ, ನಾಟಕಗಳ ಮೂಲಕ ವಿಜಯನಗರದ ಸಾಂಸ್ಕೃತಿಕ ವೈಭವವನ್ನು ಕಲಾವಿದರು ಪುನರುಜ್ಜೀವನಗೊಳಿಸಿದ್ದರು.ವಿರೂಪಾಕ್ಷ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶ ದೀಪಾಲಂಕಾರಗಳಿಂದ ಕಂಗೊಳಿಸಿದವು. ವಿಜಯ ವಿಠ್ಠಲ ದೇವಸ್ಥಾನ ಎದುರು ಸಂಗೀತದ ಸ್ವರಗಳು ಪ್ರತಿಧ್ವನಿಸಿದವು. ಇಡೀ ಹಂಪಿ ಒಂದು ಜೀವಂತ ರಂಗಮಂದಿರದಂತೆ ನಿರ್ಮಾಣಗೊಂಡಂತೆ ಕಂಡು ಬಂದಿತ್ತು. ಉತ್ಸವ ಅಂಗವಾಗಿ ಹೊಸಪೇಟೆಯಿಂದ ಹಂಪಿವರೆಗೆ ರಸ್ತೆ ಇಕ್ಕೆಲಗಳಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಹಂಪಿಯ ಬೀದಿಗಳು, ಸ್ಮಾರಕಗಳು, ಗುಡ್ಡಗಳು ಬಣ್ಣದ ಬೆಳಕಿನಲ್ಲಿ ತೇಲಿದಂತೆ ಗೋಚರಿಸಿದವು.
ಹಂಪಿ ಉತ್ಸವಕ್ಕೆ ಬಂದಿದ್ದ ಪ್ರೇಕ್ಷಕರು ತಮಗಿಷ್ಟದ ಕಲಾವಿದರು ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಖುರ್ಚಿಗಳ ಮೇಲೆ ಕುಣಿದು ಕುಪ್ಪಳಿಸಿದರು. ಕೆಲವು ಯುವಕರು ಕುಡಿದ ಅಮಲಿನಲ್ಲಿ ವಿನಾಕಾರಣ ಖುರ್ಚಿಗಳನ್ನು ಮುರಿದು ಹಾಕಿದರು. ಹೀಗಾಗಿ, ವೇದಿಕೆ ಬಳಿ ಹಾಕಲಾಗಿದ್ದ ನೂರಾರು ಖುರ್ಚಿಗಳು ಮುರಿದು ಹೋಗಿದ್ದ ದೃಶ್ಯಗಳು ಕಂಡು ಬಂದವು.