ಹಾವೇರಿ: ಸರಕು ಸಾಗಾಣಿಕೆ ವಾಹನದಲ್ಲಿ ಕುರಿ ಹಿಂಡು ತುಂಬಿಕೊಂಡು ಹೋದಂತೆ ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಪಿಕ್‌ನಿಕ್‌ಗೆ ಕರೆದುಕೊಂಡು ಹೋಗಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಒಂದು ದಿನದ ಪಿಕ್‌ನಿಕ್‌ಗೆ ಎಂದು ಹೇಳಿ ಶಾಲೆಯ ಸುಮಾರು ೩೫ ರಿಂದ ೪೦ ವಿದ್ಯಾರ್ಥಿಗಳನ್ನು ಸರಕು ಸಾಗಾಣಿಕೆ ವಾಹನದಲ್ಲಿ ಕರೆದುಕೊಂಡು ಹೋಗುತ್ತಿರುವುದು ವರೂರು ಹಾಗೂ ರಾಮನಕೊಪ್ಪ ಕ್ರಾಸ್ ಬಳಿ ಸಾರ್ವಜನಿಕರ ಗಮನಕ್ಕೆ ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಪರವಾನಗಿ ಕೂಡ ಪಡೆಯದಿರುವುದು ತಿಳಿದು ಬಂದಿದೆ. ಏನಾದರೂ ಅಪಘಾತ ಸಂಭವಿಸಿದರೆ ಯಾರು ಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದು, ಕೂಡಲೇ ಸಂಬಂಧಪಟ್ಟ ಶಾಲೆ ಮುಖ್ಯೋಪಾಧ್ಯಾಯರು, ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.