ಗಜೇಂದ್ರಗಡ: ದೇಶದ ಅಮೂಲ್ಯ ಸಂಪತ್ತಾಗಿರುವ ವಿದ್ಯಾರ್ಥಿ ಸಮೂಹಕ್ಕೆ ದೇಶದ ಪಥವನ್ನು ಬದಲಾಯಿಸುವ ಶಕ್ತಿಯಿದ್ದು, ವಿದ್ಯಾರ್ಥಿಗಳ ಪ್ರಮುಖ ಶೈಕ್ಷಣಿಕ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಯಶಸ್ಸಿನ ದಾರಿಯನ್ನು ಸುಗಮವಾಗಿಸಿಕೊಳ್ಳಿ ಎಂದು ತಾಪಂ ಮಾಜಿ ಉಪಾಧ್ಯಕ್ಷ ಶಶಿಧರ ಹೂಗಾರ ತಿಳಿಸಿದರು.
ವಿದ್ಯಾರ್ಥಿಗಳು ಅಧ್ಯಯನದ ಜತೆಗೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಂದೆ- ತಾಯಿ ಮತ್ತು ಹಿರಿಯರು, ಶಿಕ್ಷಕರಿಗೆ ಗೌರವ ಕೊಡುವುದು ಹಾಗೂ ಸಂವಿಧಾನದ ಆಶಯಗಳಿಗೆ ಪೂರಕವಾಗಿ ಬದುಕು ಕಟ್ಟಿಕೊಳ್ಳುವುದು, ಸಂಸ್ಕೃತಿಗೆ ಆದ್ಯತೆ ನೀಡುವ ಶಿಕ್ಷಣ ಮುಖ್ಯವಾಗಿದೆ ಎಂದರು.ಡಾ. ಬಿ.ಆರ್. ಅಂಬೇಡ್ಕರ ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಬಂಕದ ಮಾತನಾಡಿ, ಯುವ ಸಮೂಹ ಮೊಬೈಲ್ ಹಾಗೂ ಟಿವಿ ವೀಕ್ಷಣೆಗೆ ಹೆಚ್ಚಿನ ಸಮಯ ಮೀಸಲಿಡುತ್ತಿದ್ದಾರೆ. ಪರಿಣಾಮ ನಿರೀಕ್ಷಿತ ಫಲಿತಾಂಶ ಸಿಗುತ್ತಿಲ್ಲ. ಹೀಗಾಗಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕ್ರೀಡೆ, ವಿಜ್ಞಾನ ಹಾಗೂ ಸಾಮಾನ್ಯ ಜ್ಞಾನದ ಜತೆಗೆ ಎಸ್ಎಸ್ಎಲ್‌ಸಿ ಪಠ್ಯದ ಮಾಹಿತಿಯನ್ನು ಒಳಗೊಂಡಿರುವ ಯುವ ಆವೃತ್ತಿ ವಿದ್ಯಾರ್ಥಿ ಜೀವನ ಸುಧಾರಣೆಗೆ ಸಂಗ್ರಹ ಯೋಗ್ಯವಾಗಿದೆ ಎಂದರು.ಶಾಲೆಯ ಪ್ರಧಾನಗುರು ಜಿ.ಎಸ್. ನೀಲಗಾರ ಮಾತನಾಡಿ, ನಮ್ಮ ಅಕ್ಕಪಕ್ಕದವರಿಗೆ ಸಹಾಯ ಮಾಡಲು ಮೀನಮೇಷ ಮಾಡುವ ದಿನಮಾನಗಳಲ್ಲಿ ಜೀವನ ಮಾಡುತ್ತಿದ್ದೇವೆ. ಆದರೆ ಯಾವುದೇ ಫಲಾಪೇಕ್ಷೆ ಇಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಸುಧಾರಣೆಗಾಗಿ ಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ ಪೂರೈಸುತ್ತಿರುವುದು ಅಭಿನಂದನಾರ್ಹವಾಗಿದೆ ಎಂದರು.ಶಿಕ್ಷಕ ಎಂ.ಎಚ್. ಬೋಸಲೆ ಹಾಗೂ ಎಸ್.ಎಂ. ಸೈಯದ್ ಮಾತನಾಡಿದರು. ಈ ವೇಳೆ ಶರಣಬಸವೇಶ್ವರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಯುವ ಆವೃತ್ತಿಯ ನೆರವು ನೀಡಿದ ಡಾ. ಬಿ.ಆರ್. ಅಂಬೇಡ್ಕರ ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಬಳಗಾನೂರ ಹಾಗೂ ತಾಪಂ ಮಾಜಿ ಉಪಾಧ್ಯಕ್ಷ ಶಶಿಧರ ಹೂಗಾರ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಕೆ.ಬಿ. ಡಾಣಕನವರ, ಎನ್.ಎಸ್. ಸಜ್ಜನರ, ಬಿ.ಎಸ್. ಮ್ಯಾಗಳಮನಿ ಇತರರು ಇದ್ದರು.