ಹಾನಗಲ್ಲ: ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಹಾನಗಲ್ಲ ಗ್ರಾಮದೇವಿ ಜಾತ್ರೆಗೆ ಬುಧವಾರ ಅಧಿಕೃತ ತೆರೆ ಬಿದ್ದಿದ್ದು, ಲಕ್ಷಾಂತರ ಭಕ್ತರ ಪಾಲ್ಗೊಳ್ಳುವಿಕೆ, ಹಲವು ಆಟ, ವ್ಯಾಪಾರ ವಹಿವಾಟಿನೊಂದಿಗೆ ಜಾತ್ರೆಯಲ್ಲಿ ಭಕ್ತರು ಸಂಭ್ರಮಿಸಿ ನಮ್ಮೂರ ಹಬ್ಬವನ್ನು ಯಶಸ್ವಿಗೊಳಿಸಿದರು ಎಂಬ ಹೆಮ್ಮೆಯ ಭಾವ ಎಲ್ಲೆಡೆ ಕೇಳಿ ಬಂದಿದೆ. ಕಳೆದ ಮಾ. 18ರಂದು ವಾದ್ಯ ವೈಭವಗಳೊಂದಿಗೆ ಗ್ರಾಮದೇವಿಯ ಮೆರವಣಿಗೆ ನಡೆದು, 19ರಂದು ಬೆಳಗ್ಗೆ ಪಾದಗಟ್ಟಿಯಲ್ಲಿ ವಿರಾಜಮಾನಳಾದ ಗ್ರಾಮದೇವಿಯ ದರ್ಶನವನ್ನು ಲಕ್ಷಾಂತರ ಜನರು ಪಡೆದರು. ಉಡಿ ತುಂಬುವುದು, ದೀಡ ನಮಸ್ಕಾರ ಹಾಕುವುದು, ಹರಕೆ ಸಲ್ಲಿಸುವುದು ವಿಶೇಷವಾಗಿ ಕಂಡುಬಂದವು.
ಇದರೊಂದಿಗೆ ಪ್ರಭಾಕರ ಹೆಗಡೆ ತಂಡದಿಂದ ಮಹಿಷಾಸುರ ಮರ್ದಿನಿ ಯಕ್ಷಗಾನ, 150 ಭಕ್ತರಿಂದ ರಕ್ತದಾನ, ಅದರಲ್ಲೂ ವಿಶೇಷವಾಗಿ ಎರಡು ದಿನಗಳ ಕಾಲ ರಾಜ್ಯ ಮಟ್ಟದ ಕುಸ್ತಿ ಪಂದ್ಯಗಳು, ವಿಶೇಷವಾದ ದೀಪಾಲಂಕಾರಗಳು ಮನಮೋಹಕವಾಗಿದ್ದವು. ಇಡೀ ಜಾತ್ರೆಯ ಸುವ್ಯವಸ್ಥೆಗೆ ಕಂಕಟಬದ್ಧರಾಗಿದ್ದ ಹೊಸ ಜಾತ್ರಾ ಸಮಿತಿ ಗ್ರಾಮದೇವಿ ಜಾತ್ರೆಗಾಗಿ ಯಾವುದೇ ವಿಧಿವಿಧಾನಗಳಿಗೆ ಕೊರತೆ ಇಲ್ಲದಂತೆ ಸುವ್ಯವಸ್ಥೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಇಡೀ ಪಟ್ಟಣದ ಸ್ವಚ್ಛತೆಗಾಗಿ ಪುರಸಭೆ ಅತ್ಯಂತ ಕಾಳಜಿಯಿಂದ ಕೆಲಸ ಮಾಡಿ ಸೈ ಎನಿಸಿಕೊಂಡಿತು. ಕುಡಿಯುವ ನೀರಿಗಾಗಿ ಸ್ವಲ್ಪಮಟ್ಟಿನ ಅಡತಡೆಯಾಗಿರುವುದು ಕೇಳಿಬಂದಿತು. ವಿದ್ಯುತ್ ವ್ಯತ್ಯಯದಿಂದಾಗಿಯೇ ಕುಡಿಯುವ ನೀರಿಗೆ ತೊಂದರೆಯಾಯಿತು ಎನ್ನಲಾಗಿದೆ. ತಾಲೂಕು ಆಡಳಿತ ಜಾತ್ರೆಗೂ ಮೊದಲೆ ಸಭೆಗಳನ್ನು ನಡೆಸಿ ಸುವ್ಯಸ್ಥಿತ ಜಾತ್ರೆಗಾಗಿ ಆಡಳಿತಾತ್ಮಕವಾಗಿ ಸೂಚನೆಗಳನ್ನು ನೀಡಲಾಗಿತ್ತು. ಇಡೀ ಜಾತ್ರೆಯ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದರಿಂದ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗಲಿಲ್ಲ. ಪೊಲೀಸ್ ಕಣ್ಗಾವಲು ಕೂಡ ಅತ್ಯುತ್ತಮವಾಗಿತ್ತು.
ಬುಧವಾರ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಗೆ ಶ್ರೀದೇವಿ ಗಡಿಗೆ ಹೋಗುವ ಕಾರ್ಯಕ್ರಮದ ಮೂಲಕ 9 ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತು.ಜಾತ್ರಾ ಸಮಿತಿ ಅಧ್ಯಕ್ಷ ನಾಗಜ್ಜನವರ, ಉಪಾಧ್ಯಕ್ಷ ಸುರೇಶ ಪೂಜಾರ, ಕಾರ್ಯದರ್ಶಿ ಗಣೇಶ ಮೂಡ್ಲಿಯವರ, ಕೋಶಾಧ್ಯಕ್ಷ ರಾಜು ಗೌಳಿ, ಸದಸ್ಯರಾದ ಭೋಜರಾಜ ಕರೂದಿ, ನಾಗೇಂದ್ರ ಬಂಕಾಪೂರ, ಯಲ್ಲಪ್ಪ ಶೇರಖಾನೆ, ಬಾಳಾರಾಮ ಗುರ್ಲಹೊಸೂರ, ವಿರುಪಾಕ್ಷಪ್ಪ ಕಡಬಗೇರಿ, ಗುರುರಾಜ ನಿಂಗೋಜಿ, ರವಿಚಂದ್ರ ಪುರೋಹಿತ, ರಾಮು ಯಳ್ಳೂರ, ನಾರಾಯಣ ಅಥಣಿ, ಸಂಜಯ ಬೇದ್ರೆ, ಆದರ್ಶ ಶೆಟ್ಟಿ, ಕೃಷ್ಣ ಬಾಗಲೆ, ಮನೋಜ ಕಲಾಲ, ಈಶ್ವರ ವಾಲ್ಮೀಕಿ, ಸುನಿಲಕುಮಾರ ಅರ್ಕಸಾಲಿ, ಕೀರ್ತಿಕುಮಾರ ಚಿನ್ನಮುಳಗುಂದ, ಮಾಲತೇಶ ಕೊಲ್ಲಾಪುರ ಅವರ ಶ್ರಮ ಸಾರ್ಥಕವಾಗಿದೆ. ಗೌರವಾಧ್ಯಕ್ಷರಾಗಿ ಶಾಸಕ ಶ್ರೀನಿವಾಸ್ ಮಾನೆ, ತಹಸೀಲ್ದಾರ್ ಎಸ್. ರೇಣುಕಾ, ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಸಿಪಿಐ ಆಂಜನೇಯ, ಪಿಎಸ್‌ಐ ಸಂಪತ್ತ ಆನಿಕಿವಿ ಸೇರಿದಂತೆ ಅಧಿಕಾರಿಗಳು ಕೂಡ ಜಾತ್ರೆಯ ಯಶಸ್ಸಿಗೆ ಶ್ರಮಿಸಿದ್ದಾರೆ.