ಈಕೆ ಕೈಲಿ ಎಲ್ಲಿ ಆಗುತ್ತೆ ಡಿಸಿ ಟೈಂ ತಗೊಳ್ಳೋದು ?

KannadaprabhaNewsNetwork |  
Published : Mar 27, 2025, 01:04 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಬುಧವಾರ ನಡೆದ ಚಿತ್ರದುರ್ಗ ನಗರಸಭೆ ಅಧಿವೇಶನದಲ್ಲಿ ಅಧ್ಯಕ್ಷೆ ಸುಮಿತ ಮಾತನಾಡಿದರು.

ಪೌರಾಯಕ್ತೆ ಮೇಲೆ ಅಧ್ಯಕ್ಷ, ಉಪಾಧ್ಯಕ್ಷೆ ಏಕವಚನದಲ್ಲಿ ವಾಗ್ದಾಳಿ । ನಗರಸಭೆ ಅಧಿವೇಶನ ಆಪೋಷನ ತೆಗೆದುಕೊಂಡ ಅಧ್ಯಕ್ಷೆ, ಉಪಾಧ್ಯಕ್ಷೆ ಅರಚಾಟ, ಕಿರಿಚಾಟ ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬುಧವಾರ ನಡೆದ ಚಿತ್ರದುರ್ಗ ನಗರಸಭೆ ಅಧಿವೇಶನ ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿ ಆಧಾರಿತ ಸಿನಿಮಾವೊಂದನ್ನು ನೆನಪಿಸಿತು. ಅರ್ಧ ತಾಸಿಗೂ ಹೆಚ್ಚುಕಾಲ ಈರ್ವ ಮಹಿಳೆಯರ ಅರಚಾಟ, ಕಿರುಚಾಟ ನಡೆದೇ ಇತ್ತು. ನಲ್ಲಿ ನೀರಿಗಾಗಿ ಮಹಿಳೆಯರು ಕೊಡಗಳ ಹಿಡಿದು ಏಕ ವಚನದಲ್ಲಿ ಸಂಬೋಧಿಸುತ್ತ ಜಗಳವಾಡುವ ಓಬಿರಾಯನ ಕಾಲದ ಹಳೇ ದೃಶ್ಯಾವಳಿಗಳು ನೆನಪಿಗೆ ಬಂದವು.

ಅಧ್ಯಕ್ಷೆ ಸುಮಿತ, ಉಪಾಧ್ಯಕ್ಷೆ ಶ್ರೀದೇವಿಯವರ ಆವೇಶ ಇದಾಗಿದ್ದು, ಪೌರಾಯುಕ್ತೆ ರೇಣುಕಾ ಅವರ ಮೇಲೆ ವಾಗ್ದಾಳಿ ನಡೆಸಿದ ಪರಿ ಇದಾಗಿತ್ತು. ಅವಳು, ಇವಳು ಎಂದೆಲ್ಲಾ ನಿಂದಿಸಿದರು. ಮಳಿಗೆಗಳ ಹರಾಜು ದಿನಾಂಕ ನಿಗಧಿಗೆ ಡಿಸಿ ಭೇಟಿ ಮಾಡಲು ಈಕೆ ಕೈಲಿ ಎಲ್ಲಿ ಆಗುತ್ತೆ ಎಂದು ಏಕ ವಚನದಲ್ಲಿ ಸಂಬೋದಿಸಿದರು. ಒಂದು ಹಂತದಲ್ಲಿ ಪೌರಾಯುಕ್ತೆ ರೇಣುಕಾ ಗದ್ಗದಿತರಾದರು. ನಾನು 18 ವರ್ಷ ಸರ್ಕಾರಿ ಸೇವೆ ಮಾಡಿದ್ದೇನೆ, ಬೇಕಾ ಬಿಟ್ಟಿ ಮಾತನಾಡಬೇಡಿ ಎಂದು ಜನಪ್ರತಿನಿಧಿಗಳ ನಡವಳಿಕೆಗಳ ಹೇಗಿರಬೇಕೆಂಬುದು ನೆನಪು ಮಾಡಿಕೊಟ್ಟರು.

ಕೋರಂ ಇಲ್ಲದ ಕಾರಣ 40 ನಿಮಿಷ ತಡವಾಗಿ ಆರಂಭವಾದ ಸಭೆ ಒಂದು ತಾಸು ಕಳೆದರೂ ಅಜೆಂಟಾ ಕಡೆ ಹೋಗಲೇ ಇಲ್ಲ. ಎಂದಿನಂತೆ ಪ್ರತಿಭಟನಾ ಮನೋ ಧರ್ಮವ ಪ್ರಕಟಿಸಿದ ಉಪಾಧ್ಯಕ್ಷೆ ಶ್ರೀದೇವಿ ನಮ್ಮ ವಾರ್ಡ್‌ಗೆ 20 ದಿನಗಳಿಂದ ನೀರು ಬಂದಿಲ್ಲವೆಂಬ ಸಂಗತಿ ಬಿಂಬಿಸಿ 8 ಖಾಲಿ ಕೊಡಗಳ ಮುಂದಿಟ್ಟುಕೊಂಡು ಕುಳಿತಿದ್ದರು. ದುಡ್ಡುಕೊಟ್ಟವರಿಗೆ ಕಮಿಷನರ್ ನೀರು ಕೊಡ್ತಾರೆ ಎಂದು ನೇರವಾಗಿ ಆರೋಪಿಸಿದರು. ಮಧ್ಯ ಪ್ರವೇಶಿಸಿ ಮಾತನಾಡಿದ ಸದಸ್ಯ ವೆಂಕಟೇಶ್, ಉಪಾಧ್ಯಕ್ಷರ ಮನೆಗೆ ನೀರಿಲ್ಲವೆಂದರೆ ಏನರ್ಥವೆಂದು ಪ್ರಶ್ನಿಸಿದರೆ, ಮತ್ತೋರ್ವ ಸದಸ್ಯ ಶ್ರೀನಿವಾಸ್ ನೀರಿಲ್ಲವೆಂದೆರೆ ನಾಚಿಕೆ ಆಗಬೇಕೆಂದು ಪರೋಕ್ಷರವಾಗಿ ಅಧ್ಯಕ್ಷರ ಕುಟುಕಿದರು.

ಈ ವೇಳೆ ಮಾತನಾಡಿದ ಅಧ್ಯಕ್ಷೆ ಸುಮಿತ, 22 ದಿನಗಳಿಂದ ನನ್ನ ವಾರ್ಡ್‌ಗೂ ನೀರು ಬಂದಿಲ್ಲ, ಕಮಿಷನರ್ ಗೆ ಹೇಳಿದ್ದೇನೆ, ಅವರಿಂದ ಕೆಲಸ ತೆಗೆದುಕೊಳ್ಳುವುದು ಕಷ್ಟವೆಂದರು. ಈ ಮಾತಿಗೆ ಮತ್ತೆ ಮಧ್ಯ ಪ್ರವೇಶಿಸಿ ಮಾತನಾಡಿದ ಸದಸ್ಯ ಶ್ರೀನಿವಾಸ್, ನಗರಸಭೆಗೆ ಅಧ್ಯಕ್ಷರೇ ಸುಪ್ರೀಂ, ಅವರ ಕೈಲಿ ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳಲು ಆಗುವುದಿಲ್ಲವೆಂದರೆ ರಾಜಿನಾಮೆ ನೀಡಿ ಹೋಗಲಿ ಎಂದರು.

ಟಿಸಿ ಸುಟ್ಟಿದ್ದರಿಂದ ನೀರು ಪೂರೈಕೆಯಲ್ಲಿವ್ಯತ್ಯಯವಾಗಿದೆ. ಸ್ಟ್ಯಾಂಡ್ ಬೈ ಇದ್ದ ಮತ್ತೊಂದು ಟಿಸಿಯೂಸುಟ್ಟಿದೆ. ಎರಡೂ ಟಿಸಿಗಳು ಬಳ್ಳಾರಿಯಲ್ಲಿದುರಸ್ತಿಯಾಗುತ್ತಿವೆ. ಇನ್ನೊಂದು ದಿನದಲ್ಲಿ ಅವುಗಳು ದುರಸ್ತಿಯಾಗಿ ಬರಲಿದ್ದು ಶುಕ್ರವಾರ ಕುಡಿವ ನೀರು ಪೂರೈಕೆ ಸಹಜ ಸ್ಥಿತಿಗೆ ಬರಲಿದೆ. ಅಗತ್ಯವಿರುವ ಕಡೆ ಈಗಾಗಲೇ ಟ್ಯಾಂಕರ್ ನಲ್ಲಿ ನೀರು ಪೂರೈಕೆ ಮಾಡುತ್ತಿದ್ದೇವೆ ಎಂದು ಪೌರಾಯುಕ್ತೆ ರೇಣುಕಾ ಸಮಜಾಯಿಷಿ ನೀಡಿದರು.

ಇದೇ ವೇಳೆ ಸದಸ್ಯ ಜೈನುಲುದ್ದೀನ್ ಸರಿಯಾಗಿ ಉಸ್ತುವಾರಿ ಮಾಡುತ್ತಿಲ್ಲವೆಂದು ಎಂಜಿನಿಯರ್ ತರಾಟೆಗೆ ತೆಗೆದುಕೊಂಡರು. ಟ್ಯಾಂಕರ್ ನಲ್ಲಿ ನೀರು ಪೂರೈಕೆ ಮಾಡಿದರೆ ಎಷ್ಟು ದಿನ ಡ್ರಂ, ಕೊಡಪಾನದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು. ಅಧ್ಯಕ್ಷರು ಮೌನವಾಗಿರುವುದ ಕಂಡು ಮಾತಾಡ್ರಿ, ನಿಮಗೆ ಏನಾಗಿದೆ, ಬಾಯಿಗೆ ಲಕ್ವ ಹೊಡೆದಿದೆಯಾ ಎಂಬ ಅಸಂವಿದಾನಿಕ ಶಬ್ದ ಬಳಕೆ ಮಾಡಿದರು.

ಸಭೆ ದಿಕ್ಕು ತಪ್ಪುತ್ತಿರುವುದ ಗಮನಿಸಿದ ಮಾಜಿ ಅಧ್ಯಕ್ಷ ಅಹಮದ್ ಪಾಷಾ, ನಗರಸಭೆ ಅಂದರೆ ಸಂಸಾರ ಇದ್ದಂತೆ. ಅದನ್ನು ಸರಿಯಾಗಿ ನಿರ್ವಹಣೆ ಮಾಡಿಕೊಂಡು ಹೋಗುವ ಜವಾಬ್ದಾರಿ ಅಧ್ಯಕ್ಷರು. ಈ ರೀತಿ ಕಮಿಷನರ್ ನೀವು ಜಗಳ ಆಡಿಕೊಂಡ್ರೆ ನಾಗರಿಕರ ಪರಿಸ್ಥಿತಿ ಏನಾಗುತ್ತೆ. ನೌಕರರಿಂದ ಸರಿಯಾಗಿ ಕೆಲಸೆ ತೆಗೆದುಕೊಳ್ಳಬೇಕೆಂದು ಸಲಹೆ ಮಾಡಿದರು.

ನಗರದ ಗಾಂಧಿ ವೃತ್ತದಲ್ಲಿನನ ಕಟ್ಟಡ ತೆರವಿನ ಮತ್ತೊಂದು ವಿಷಯ ಕೈಗೆತ್ತಿಕೊಂಡ ಅಧ್ಯಕ್ಷೆ ಸುಮಿತ ಮತ್ತೆ ಪೌರಾಯುಕ್ತರ ಮೇಲೆ ವಾಗ್ದಾಳಿ ಮಾಡಿದರು. ಈ ಕಡೆಯಿಂದ ಮೂರು ಕಟ್ಟಡ ತೆರವುಗೊಳಿಸಿ, ಗಾಂಧಿ ವೃತ್ತದ್ದು ಮಾತ್ರ ನಮ್ ಮೇಲೆ ಹಾಕಿದಿರಿ ಎಂದು ಪ್ರಶ್ನಿಸಿದರು. ಶೌಚಾಲಯದ ಪಕ್ಕದಲ್ಲಿನ ಖಾಸಗಿ ಜಾಗಕ್ಕೆ ಇ ಸ್ವತ್ತು ನೀಡಲಾಗಿದೆಎಂದರು. ಇದೇ ವೇಳೆ ಸದಸ್ಯ ಶ್ರೀನಿವಾಸ್ ಮತ್ತು ದೀಪು ನಗರಸಭೆಯ ಇತರೆ ಖಾಸಗಿ ಆಸ್ತಿಗಳ ವಿಷಯ ಪ್ರಸ್ತಾಪಿಸಿ ಖಾತೆ ಮಾಡಿಕೊಡಲಾಗಿದೆ ಎಂದು ದೂರಿದರು.

ಸದಸ್ಯರ ಆರೋಪಗಳಿಗೆ ತುಸು ವಿಚಲಿತರಾದ ಪೌರಾಯುಕ್ತೆ ರೇಣುಕಾ, 67 ರಿಂದಲೇ ಖಾತೆಗಳು ಬಂದಿವೆ. ನಾನು ಎಲ್ಲ ಪರಿಶೀಲಿಸಿದ್ದೇನೆ. ನಾನು 84ರಲ್ಲಿ ಹುಟ್ಟಿದ್ದೇನೆ, ನಾನು ಹುಟ್ಟುವುದಕ್ಕಿಂತ ಮೊದಲೇ ಆದ ಖಾತೆಗಳಿಗೆ ನಾನು ಜವಾಬ್ದಾರಳೇ, ಊರಲ್ಲಿ ಹಿಂದೆ ಏನೇ ಆಗಿದ್ದರೂ ನಾನು ಹೊಣೆಯೇ ಎಂದು ತಿರುಗೇಟು ನೀಡಿದರು.

ಈ ವೇಳೆ ಕಮಿಷನರ್ ಗೆ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರು ಅವಳು, ಇವಳು ಎಂದು ಸಂಬೋಧಿಸಿದ ಬಗೆ ಸದಸ್ಯೆ ರೋಹಿಣಿ ಅವರನ್ನು ಕೆರಳಿಸಿತು. ಅಧಿಕಾರಿಯನ್ನು ಹೀಗೆ ಕರೆದರೆ ಹೇಗೆ, ನಮ್ ಬಗ್ಗೆ ಜನ ಏನಂದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು. ಆಯಮ್ಮ, ಅವಳು, ಇವಳು ಎನ್ನುವುದು ಆಡು ಭಾಷೆ. ನಾವು ಹಾಗೆಯೇ ಕರೆಯುತ್ತೇವೆ ಎಂದು ಉಪಾಧ್ಯಕ್ಷೆ ಶ್ರೀದೇವಿ ಸಮರ್ಥಿಸಿಕೊಂಡರು. ನಂತರ ನನ್ ಬಾಯಿಂದ ಅವಳು ಎಂಬ ಶಬ್ದ ಬಂದಿದ್ದರೆ ಕ್ಷಮೆಯಾಚಿಸುವುದಾಗಿ ಹೇಳಿ ಅರಚಾಟ, ಕಿರುಚಾಟಕ್ಕೆ ತೆರೆ ಎಳೆದರು.

ಸ್ಥಾಯಿ ಸಮಿತಿ ಅಧ್ಯಕ್ಷ ನಸ್ರು ಮಾತನಾಡಿ, ಅಜೆಂಡಾ ಮಾಡುವಾಗಲೇ ಸದಸ್ಯರ ಅಭಿಪ್ರಾಯ, ಪ್ರಶ್ನೆಗಳ ಸೇರ್ಪಡೆ ಮಾಡಲಾಗಿರುತ್ತದೆ. ಹಾಗಾಗಿ ಅಜೆಂಡಾ ಬಿಟ್ಟು ಇತರೆ ಚರ್ಚೆ ಮಾಡಿದರೆ ಹೇಗೆ. ಕುಡಿವ ನೀರಿನ ವಿಷಯವಾಗಿ ಪ್ರತ್ಯೇಕವಾಗಿ ಚರ್ಚಿಸುವಾ. ಮಳಿಗೆಗಳ ಹರಾಜು ವಿಷಯಕ್ಕೆ ಸಂಬಂಧಿಸಿದಂತೆ ಡಿಸಿ ಪೌರಾಯುಕ್ತರಿಗೆ ಶೋಕಾಸ್ ನೋಟೀಸು ಕೊಟ್ಟಿದ್ದಾರೆ ಎಂದು ಹೇಳಿ ವಾತಾವರಣ ತಿಳಿಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''