ಮುಂಡರಗಿ: ಅಜ್ಞಾನದ ಅಂಧಕಾರದಲ್ಲಿ ಮುಳುಗಿರುವ ಈ ಸಮಾಜಕ್ಕೆ ವೀರಶೈವ ಮಹಾಸಭಾ ಹಾಗೂ ಶಿವಯೋಗ ಮಂದಿರ ಎನ್ನುವ ಎರಡು ಕಣ್ಣುಗಳನ್ನು ಕೊಟ್ಟವರು ಲಿಂ. ಶ್ರೀಹಾನಗಲ್ಲ ಕುಮಾರ ಮಹಾಸ್ವಾಮಿಗಳು ಎಂದು ಡಂಬಳ-ಗದಗ ತೋಂಟದಾರ್ಯ ಮಠದ ಪೀಠಾಧಿಪತಿ ಜ.ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಜಿ ಹೇಳಿದರು.
ಹಾನಗಲ್ಲ ಕುಮಾರ ಸ್ವಾಮೀಜಿ ನಮಗೆಲ್ಲರಿಗೂ ಮಾದರಿಯಾದವರು. ಸ್ವಾಮಿಗಳಾದವರು ಹೇಗಿರಬೇಕು, ಯಾವ ರೀತಿ ತಮ್ಮ ಬದುಕನ್ನು ಸಾಗಿಸಬೇಕು ಎನ್ನುವುದನ್ನು ತಮ್ಮ ಬದುಕಿನ ಮೂಲಕ ತೋರಿಸಿ ಕೊಟ್ಟವರು. ಈ ಸಮಾಜಕ್ಕಾಗಿ ತಮ್ಮ ಇಡೀ ಬದುಕನ್ನು ಸಮರ್ಪಿಸಿಕೊಂಡಿದ್ದರು. ನಾವಿಂದು ಅವರನ್ನು ಸ್ಮರಿಸಿಕೊಳ್ಳುವ ಅಗತ್ಯವಿದೆ ಎಂದರು.
20ನೇ ಶತಮಾನದ ಪ್ರಾರಂಭದಲ್ಲಿ ಸಮಾಜದಲ್ಲಿ ಅಜ್ಞಾನ, ದಾರಿದ್ರೆ, ಬಡತನ, ಮೂಢನಂಬಿಕೆ, ಅಂಧಶ್ರದ್ಧೆಯಿಂದ ತುಂಬಿರುವಂತದ್ದಾಗಿತ್ತು. ಈ ಸಂದರ್ಭದಲ್ಲಿ ಹಾನಗಲ್ಲ ಕುಮಾರಸ್ವಾಮೀಜಿ ಆ ಕಾಲದ ಎಲ್ಲ ಸಮಾಜದ ಪ್ರಮುಖರನ್ನು ಸಂಪರ್ಕಿಸಿ ಅವರ ಮೂಲಕ ಮೊಟ್ಟ ಮೊದಲ ಬಾರಿಗೆ ಅಖಿಲ ಭಾರತ ವೀರಶೈವ ಮಹಾಸಭೆ ಹುಟ್ಟು ಹಾಕಿ ಅದರ ಮೂಲಕ ಸಮಾಜದ ಜನರನ್ನು ಸಂಘಟಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಪ್ರಾರಂಭಿಸಿದರು. ಜತೆಗೆ ಅಲ್ಲಲ್ಲಿ ಮಹಾ ಅಧಿವೇಶನ ನಡೆಸಿದರು. ನಂತರ ಆ ಮಹಾಸಭೆಯ ಅಧಿವೇಶನ ನಡೆಸಿದಂತಹ ಎಲ್ಲ ಸ್ಥಳಗಳಲ್ಲಿ ಅದರಿಂದ ಉಳಿದಿರುವ ಹಣ ಅದೇ ಭಾಗದಲ್ಲಿ ಕೊಟ್ಟು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಲು ಪ್ರೇರಣೆ ನೀಡಿದರು. ಅಂತಹ ಪೂಜ್ಯರ ಜಯಂತ್ಯುತ್ಸವ ಮುಂಡರಗಿ ಪೂಜ್ಯರು ನೆರವೇರಿಸುತ್ತಿರುವುದು ಅತ್ಯಂತ ಶ್ಲಾಘನೀಯವಾದುದು ಎಂದರು.ಹುಬ್ಬಳ್ಳಿ ಮೂರು ಸಾವಿರ ಮಠದ ಜ.ಡಾ.ಗುರುಸಿದ್ಧ ರಾಜ ಯೋಗೀಂದ್ರ ಮಹಾಸ್ವಾಮೀಜಿ ಮಾತನಾಡಿ, ಹಾನಗಲ್ಲ ಕುಮಾರ ಶಿವಯೋಗಿಗಳು ಕಾರಣೀಕ ಯುಗ ಪುರುಷರಾಗಿದ್ದರು. 200-300 ವರ್ಷಕ್ಕೆ ಒಬ್ಬರು ಇಂತಹ ಶರಣರ ಜನನವಾಗುತ್ತದೆ. ಅಂತವರು ಶತಶತಮಾನಕ್ಕೂ ಆದರ್ಶಪ್ರಾಯರಾಗಿರುತ್ತಾರೆ. ಇವರು ಶಿವಯೋಗದಲ್ಲಿ ಅಪಾರವಾದ ಸೇವೆ ಸಲ್ಲಿಸಿದ್ದರು. ಮುಂಡರಗಿ ಅನ್ನದಾನೀಶ್ವರ ಸ್ವಾಮೀಜಿ ಹಾನಗಲ್ಲ ಶ್ರೀಗಳವರ ಈ ಬಾರಿಯ 157ನೇ ಜಯಂತ್ಯುತ್ಸವವನ್ನು ಅದ್ಧೂರಿಯಿಂದ ಮಾಡಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹಾನಗಲ್ಲ ಕುಮಾರೇಶ್ವರ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಡಾ. ವಾಗೀಶ ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿದರು. ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಸಂಗನಗೌಡ ಪಾಟೀಲ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀಮಠದ ಉತ್ತರಾಧಿಕಾರಿ ಜ.ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ಅಡ್ನೂರಿನ ಚನ್ನವೀರ ಸ್ವಾಮೀಜಿ, ಕಲಕೇರಿ-ವಿರುಪಾಪೂರದ ಮುಧುಕೇಶ್ವರ ಸ್ವಾಮೀಜಿ, ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ, ಕಪ್ಪತ್ತಗುಡ್ಡದ ನಂದಿವೇರಿ ಮಠದ ಶಿವಕುಮಾರ ಸ್ವಾಮೀಜಿ, ವೀರೇಶ್ವರ ಶಿವಾಚಾರ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.