ಬರದಲ್ಲಿ ಕೈ ಹಿಡಿದ ಜವಾರಿ ಕೋಳಿ!

KannadaprabhaNewsNetwork |  
Published : May 13, 2024, 12:08 AM IST
ಜವಾರಿ ಕೋಳಿಗಳ ವ್ಯಾಪಾರ ಬಲು ಜೋರು | Kannada Prabha

ಸಾರಾಂಶ

ಬರಗಾಲದ ಮಧ್ಯೆ ಗ್ರಾಮೀಣ ಜನರು ಒಂದೆಡೆ ಗುಳೆ ಹೋಗುತ್ತಿದ್ದಾರೆ. ಆದರೆ, ಇನ್ನು ಕೆಲವು ಜನರು ಬೇರೆ ಬೇರೆ ಉದ್ಯೋಗ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅಂತಹವರಲ್ಲಿ ಕೆಲವರು ಕೃಷಿಯ ಉಪ ಕಸುಬಾದ ಜವಾರಿ ಕೋಳಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಶಶಿಕಾಂತ ಮೆಂಡೆಗಾರ

ಕನ್ನಡಪ್ರಭ ವಾರ್ತೆ ವಿಜಯಪುರಬರಗಾಲದ ಮಧ್ಯೆ ಗ್ರಾಮೀಣ ಜನರು ಒಂದೆಡೆ ಗುಳೆ ಹೋಗುತ್ತಿದ್ದಾರೆ. ಆದರೆ, ಇನ್ನು ಕೆಲವು ಜನರು ಬೇರೆ ಬೇರೆ ಉದ್ಯೋಗ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅಂತಹವರಲ್ಲಿ ಕೆಲವರು ಕೃಷಿಯ ಉಪ ಕಸುಬಾದ ಜವಾರಿ ಕೋಳಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಪ್ರತಿ ಭಾನುವಾರ ನಗರದ ಟಿಪ್ಪು ಸುಲ್ತಾನ್ ಚೌಕ್ ಬಳಿ ನಡೆಯುವ ಜವಾರಿ ಕೋಳಿ ಸಂತೆ ಬಲು ಜೋರಾಗಿದೆ. ಭಾನುವಾರಕ್ಕೊಮ್ಮೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯುವ ಈ ಸಂತೆಯಲ್ಲಿ ವಿಜಯಪುರದ ಸುತ್ತಮುತ್ತಲಿನ ಹಳ್ಳಿಗಳಿಂದ ಬರುವ ಗ್ರಾಮೀಣ ಭಾಗದ ರೈತರು ಜವಾರಿ ಕೋಳಿ, ತತ್ತಿ ಹಾಗೂ ಹುಂಜಗಳನ್ನು ತಂದು ಮಾರಾಟ ಮಾಡುತ್ತಾರೆ. ಇದೇ ಇವರಿಗೆ ಆದಾಯವಾಗಿದೆ.

ಭರ್ಜರಿ ವ್ಯಾಪಾರ:

ತೀವ್ರ ಬರಗಾಲದಲ್ಲಿ ಯಾವುದೇ ಉದ್ಯಮ ಕೈ ಹಿಡಿಯದಿದ್ದರೂ ಈ ಜವಾರಿ ಕುಕ್ಕುಟೋದ್ಯಮ ಬಡವರಿಗೆ ಆಧಾರವಾಗಿದೆ. ವಾರಕ್ಕೊಮ್ಮೆ ಸಾವಿರಾರು ಕೋಳಿಗಳ ವ್ಯಾಪಾರ ನಡೆಯುತ್ತಿದ್ದು, ಹಳ್ಳಿಗರು ಬಂದು ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಒಂದೊಂದು ಕೋಳಿಗೆ ₹300ರಿಂದ 400 ಹಾಗೂ ಒಂದೊಂದು ಹುಂಜಗಳಿಗೆ ₹400ರಿಂದ 500ಗೆ ಮಾರಾಟ ಮಾಡಲಾಗುತ್ತದೆ. ಇನ್ನು ಒಂದು ಜವಾರಿ ಮೊಟ್ಟೆಗೆ ಇಲ್ಲಿ ₹10 ಬೆಲೆ ಇದೆ.

ಜವಾರಿ ಖರೀದಿಯೇ ಹೆಚ್ಚು:

ವಾರಪೂರ್ತಿ ಫಾರಂ ಕೋಳಿಗಳ ವ್ಯಾಪಾರ ವಹಿವಾಟು ನಡೆದರೂ ಭಾನುವಾರಕ್ಕಾಗಿ ಕಾಯುವ ಕೆಲ ವರ್ಗದ ಜನತೆ ಇಲ್ಲಿಗೆ ಬಂದೇ ಜವಾರಿ ಕೋಳಿಗಳನ್ನೇ ಖರೀದಿಸುತ್ತಾರೆ. ಬೆಳಗ್ಗೆ ಬೇಗನೆ ಬಂದವರಿಗೆ ಇಲ್ಲಿ ಕೊಬ್ಬಿದ ಜವಾರಿ ಕೋಳಿ ಹಾಗೂ ಹುಂಜಗಳು ಖರೀದಿಸಲು ಸಿಗುತ್ತವೆ. ಹೀಗಾಗಿ ಖರೀದಿದಾರರು ಬೆಳಗ್ಗೆ 7 ಗಂಟೆಗೆ ಬಂದು ತಮಗೆ ಬೇಕಾದಷ್ಟು ಜವಾರಿ ಕೋಳಿಗಳನ್ನು ಖರೀದಿಸುತ್ತಾರೆ.

ರೈತರಿಗೆ ಅನುಕೂಲ:

ನೀರಿಲ್ಲದೇ ಬೆಳೆಗಳೆಲ್ಲ ಒಣಗಿದ ಸಂದರ್ಭದಲ್ಲಿ ಜವಾರಿ ಕೋಳಿ ಸಾಕಾಣಿಕೆಯ ಉಪ ಕಸುಬು ಇದೀಗ ಅವರಿಗೆ ಅನುಕೂಲವಾಗಿದೆ. ಅರಕೇರಿ, ಇಟ್ಟಂಗಿಹಾಳ, ಅಲಿಯಾಬಾದ್, ಮದಭಾವಿ ಸೇರಿದಂತೆ ನಗರದ ಸುತ್ತಮುತ್ತಲಿನ ಊರಿಗಳಿಂದ ಜವಾರಿ ಕೊಳಿ ತರುವ ರೈತರು ಹಾಗೂ ತಾಂಡಾ ನಿವಾಸಿಗಳು ಒಂದೆರಡು ಗಂಟೆಯಲ್ಲಿ ವ್ಯಾಪಾರ ಮಾಡಿಕೊಂಡುಬಿಡುತ್ತಾರೆ.

ಬೇಕಿದೆ ಮಾರುಕಟ್ಟೆ ವ್ಯವಸ್ಥೆ:

ನೂರಾರು ಬಡ ರೈತರಿಗೆ, ಹಳ್ಳಿಯ ಜನರಿಗೆ ಆಧಾರವಾಗಿರುವ ಜವಾರಿ ಕೋಳಿಗಳ ಸಂತೆಗೆ ಒಂದು ಒಳ್ಳೆಯ ಮಾರುಕಟ್ಟೆಯ ವೇದಿಕೆ ಸಿಗಬೇಕಿದೆ. ಇವರಿಗಾಗಿ ಒಂದುಕಡೆ ಅನುಕೂಲ ಕಲ್ಪಿಸಿದರೆ ಅಲ್ಲಿಯೇ ವಾರದ ಸಂತೆ ಮಾಡಬಹುದುದಾಗಿದೆ. ರಸ್ತೆಯಲ್ಲೇ ನಿಂತು ಮಾರುವುದು, ಕೊಳ್ಳುವುದು ಮಾಡುವುದರಿಂದ ಟ್ರಾಫಿಕ್ ಸಮಸ್ಯೆ ಕೂಡ ಆಗುತ್ತದೆ.

---

ಜವಾರಿ ಕೋಳಿಗೆ ಭಾರೀ ಬೇಡಿಕೆ

ಫಾರಂ ಕೋಳಿಗಳನ್ನು ಚುಚ್ಚು ಮದ್ದು ಕೊಟ್ಟು ಬೆಳೆಸಿರುತ್ತಾರೆ ಎಂಬ ಆರೋಪ ಇದೆ. ಹೀಗಾಗಿ ಇವುಗಳ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಜನರು ಫಾರಂ ಕೋಳಿಗಳನ್ನು ಹೆಚ್ಚು ಸೇವಿಸಲು ಇಷ್ಟ ಪಡುವುದಿಲ್ಲ. ಅಷ್ಟೇ ಅಲ್ಲದೇ ಫಾರಂ ಕೋಳಿಯ ಮಾಂಸ ಅಷ್ಟೊಂದು ರುಚಿಯಾಗಿ ಕೂಡಾ ಇರುವುದಿಲ್ಲ. ಹೀಗಾಗಿ ಹಳ್ಳಿಗಳಿಂದ ಜನರು ಸಾಕಿದ ಜವಾರಿ ಕೋಳಿಗಳಿಗೆ ಇದೀಗ ಭಾರಿ ಬೇಡಿಕೆ ಇದೆ. ಇವುಗಳು ನೈಸರ್ಗಿಕವಾಗಿ ಬೆಳೆದಿರುವುದರ ಜೊತೆಗೆ ಹೆಚ್ಚು ರುಚಿ ಕೂಡಾ ಇರುತ್ತವೆ. ಇದಕ್ಕೆ ಕಾರಣಕ್ಕೆ ಮಾರುಕಟ್ಟೆಗೆ ಜವಾರಿ ಕೋಳಿಗಳು ಬಂದರೆ ಜನರು ಅಧಿಕ ಹಣ ಕೊಟ್ಟಾದರೂ ಜವಾರಿ ಕೋಳಿಗಳನ್ನೇ ಕೊಂಡುಕೊಳ್ಳುತ್ತಿದ್ದಾರೆ.

---

ಕೋಟ್:

ಮನೆಯ ಮುಂದಿನ ಅಂಗಳದಲ್ಲಿ ಹಾಗೂ ತೋಟಗಳಲ್ಲಿ ಸಾಕುವ ಜವಾರಿ ಕೋಳಿಗಳ ವ್ಯಾಪಾರ ಚೆನ್ನಾಗಿ ನಡೆದಿದೆ. ಈ ಕೋಳಿ ಸಾಕಾಣಿಕೆಯೇ ನಮ್ಮ ಕುಟುಂಬಗಳಿಗೆ ಆಧಾರವಾಗಿದೆ. ಒಂದೊಂದು ಕೋಳಿ, ಹುಂಜಗಳು ಒಳ್ಳೆಯ ಬೆಲೆಗೆ ಮಾರಾಟವಾಗುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೋಳಿ ಸಾಕಾಣಿಕೆ ಶುರು ಮಾಡಿದ್ದೇವೆ.

-ಸುರೇಶ, ಮಾರಾಟಕ್ಕೆ ಬಂದವರು.

--

ಫಾರಂ ಕೋಳಿಗಳಿಗಿಂತ ಜವಾರಿ ಕೊಳಿ ರುಚಿಕಟ್ಟು ಹಾಗೂ ಆರೋಗ್ಯಕರವಾಗಿರುವುದರಿಂದ ನಾವು ಪ್ರತಿ ಭಾನುವಾರ ಇಲ್ಲಿಗೆ ಬಂದು ಜವಾರಿ ಕೋಳಿಗಳನ್ನೇ ಖರೀದಿಸುತ್ತೇವೆ. ಬೇಗ ಬಂದು ನಮಗೆ ಬೇಕಾದ ಕೋಳಿ ಅಥವಾ ಹುಂಜಗಳನ್ನು ಆಯ್ಕೆ ಮಾಡಿಕೊಂಡು ಮನೆಗೆ ಒಯ್ದು ಅಡುಗೆ ಮಾಡಿ ಮನೆಯವರೆಲ್ಲ ಊಟ ಮಾಡುತ್ತೇವೆ.

-ಹುಸೇನ್, ಕೋಳಿ ಖರೀದಿಸಿದವರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ