ಹಾನಗಲ್ಲ: ಧರ್ಮ ಸ್ಥಾಪನೆಗಾಗಿಯೇ ಜನಿಸಿ ಜೀವನ ಸಾರ್ಥಕದೊಂದಿಗೆ ಸಮಾಜದ ಒಳಿತಿಗೆ ಬದುಕೆಲ್ಲ ಮುಡಿಪಿಟ್ಟ ಆದಿಗುರು ಶಂಕರಾಚಾರ್ಯರು ಜಾತಿ ಮತ ಭೇದವಿಲ್ಲದೆ ಎಲ್ಲರನ್ನೂ ಗೌರವಿಸಿದ ಗುರು ಶ್ರೇಷ್ಠರು ಎಂದು ವೇದಮೂರ್ತಿ ಶಂಕರಭಟ್ರು ಜೋಶಿ ತಿಳಿಸಿದರು.
ಭಾನುವಾರ ಹಾನಗಲ್ಲಿನ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ ಆದಿಗುರು ಶಂಕರಾಚಾರ್ಯ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಆದಿಗುರು ಶಂಕರಾಚಾರ್ಯರು ಬಡ ಬ್ರಾಹ್ಮಣ ಕುಟುಂದಲ್ಲಿ ಜನಿಸಿದ್ದು ಭಗವಂತನ ಸೃಷ್ಟಿ ಎಂದೇ ಭಾವಿಸಲಾಗಿದೆ. ಸಮಾಜಮುಖಿ ಆಚಾರ್ಯರು, ಭಕ್ತರಿಗೆ ಬೇಡಿದ್ದೆನ್ನೆಲ್ಲ ಕೊಡುವ ಶಕ್ತಿ ಹೊಂದಿದ್ದರು. ಧರ್ಮದ ರಕ್ಷಣೆಗಾಗಿಯೇ ಇಡೀ ಬದುಕನ್ನು ಮುಡಿಪಾಗಿಟ್ಟು ಮಾರ್ಗದರ್ಶಿಯಾಗಿ ಬಾಳಿ ಬದುಕಿದರು. ಮನು ಕುಲಕ್ಕೆ ಸ್ಫೂರ್ತಿಯಾಗಿ ನಿಂತವರು. ಈಗ ಅವರ ಮಾರ್ಗದಲ್ಲಿಯೇ ಧರ್ಮೋತ್ಥಾನದ ಅಗತ್ಯವಿದೆ ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಉದಯ ನಾಸಿಕ, ಲೋಕ ಕಲ್ಯಾಣವನ್ನೇ ಉಸಿರಾಡಿದ ಆದಿಗುರು ಶಂಕರಾಚಾರ್ಯರು ಸನಾತನ ಧರ್ಮದ ಉಳಿವಿಗೆ ಕಂಕಣಬದ್ಧರಾಗಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ವೇದಗಳ ಜ್ಞಾನ ಬಲ್ಲವರಾಗಿದ್ದರು. ಸನ್ಯಾಸವನ್ನು ಕೇವಲ ಧರ್ಮಾಚರಣೆಗೆ ಮೀಸಲಾಗಿಡದೆ ಧರ್ಮ ಪ್ರಚಾರ ಜಾಗೃತಿಗಾಗಿ ಮೀಸಲಿರಿಸಿದರು. ಕೇರಳದಿಂದ ಕಾಶ್ಮೀರದವರೆಗೆ ಬರಿಗಾಲಲ್ಲಿ ೬ ಸಾವಿರ ಕಿಮೀ ಸಂಚಾರ ಮಾಡಿ ಧರ್ಮ ಸಂಸ್ಥಾಪನೆ ಮಾಡಿದ ಮಹಾಪುರುಷರು. ಇವರನ್ನು ಶಿವನ ಅವತಾರ ಎಂದೇ ಭಾವಿಸಲಾಗಿದೆ. ಕೇವಲ ೩೨ ವರ್ಷಗಳ ಕಾಲ ಬದುಕಿ ಹಿಂದೂ ಧರ್ಮಕ್ಕೆ ಆಗಾಧ ಕೊಡುಗೆ ನೀಡಿದ ಧರ್ಮ ಶ್ರೇಷ್ಠರು ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಕೆ.ಎಲ್. ದೇಶಪಾಂಡೆ, ಅಮ್ಮನ ದಿನದಂದು ಹಿಂದೂ ಧರ್ಮಕ್ಕೆ ತಾಯಿಯಂತೆ ಪಾಲನೆ ಪೋಷಣೆಯ ಜವಾಬ್ದಾರಿ ವಹಿಸಿದ ಆದಿ ಗುರು ಶಂಕರಾಚಾರ್ಯರ ಜಯಂತ್ಯುತ್ಸವ ಆಚರಿಸುತ್ತಿರುವುದು ಅರ್ಥಪೂರ್ಣವಾದುದು. ಹಿಂದು ಧರ್ಮದ ಪ್ರಚಾರಕ್ಕಾಗಿ ದೇಶದ ನಾಲ್ಕು ದಿಕ್ಕಿನಲ್ಲಿ ಮಠಗಳನ್ನು ಸ್ಥಾಪಿಸಿದರು. ಉತ್ತರದಲ್ಲಿ ಬದರಿಕಾಶ್ರಮದ ಜ್ಯೋತಿರ್ಮಠ, ಪಶ್ಚಿಮದ ದ್ವಾರಕಾದಲ್ಲಿ ಶಾರದಾಂಬಾ ಮಠ, ಪೂರ್ವದ ಜಗನ್ನಾಥಪುರಿಯಲ್ಲಿ ಗೋವರ್ಧನ ಮಠ, ದಕ್ಷಿಣದ ಶೃಂಗೇರಿಯಲ್ಲಿ ಶಾರದಾಂಬ ಮಠ ಸ್ಥಾಪಿಸಿ ಧರ್ಮ ಪ್ರಚಾರಕ್ಕೆ ಬಹು ದೊಡ್ಡ ಮಹತ್ವ ಬರುವಂತೆ ಮಾಡಿದವರು ಆದಿಗುರು ಶಂಕರಾಚಾರ್ಯರಾಗಿದ್ದಾರೆ ಎಂದರು.ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ಗಣ್ಯರಾದ ಸುಧಾಬಾಯಿ ದೇಶಪಾಂಡೆ, ವಿನಯ ಬಂಕನಾಳ, ರಾಜಾರಾಮ ಕುಲಕುರ್ಣಿ, ದತ್ತಾತ್ರೇಯ ದೇಸಾಯಿ, ಪ್ರಶಾಂತ ನಾಡಿಗೇರ, ಫಕ್ಕೀರೇಶ ಕನವಳ್ಳಿ, ಗಿರೀಶ ದೇಶಪಾಂಡೆ, ಕೃಷ್ಣಾ ಪೂಜಾರ, ಪ್ರಮೋದ ಕುಲಕರ್ಣಿ, ಅರುಣ ನಾಡಿಗೇರ, ಫಕ್ಕೀರೇಶ ಕನವಳ್ಳಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.