ಬಸವಣ್ಣನಿಗೆ ವಿಶೇಷ ಪೂಜೆ, ಹೂವಿನ ಅಲಂಕಾರ । ರಾಜಬೀದಿಗಳಲ್ಲಿ ಉತ್ಸವ । ಹಸು, ಕರುಗಳಿಗೆ ರೈತರಿಂದ ವಿಶೇಷ ಆತಿಥ್ಯ
ಹೋಬಳಿ ವೀರಶೈವ ಸೇವಾ ಸಮಿತಿ ಹಾಗೂ ಗ್ರಾಮದ ವೀರಶೈವ ಸಮಾಜದ ವತಿಯಿಂದ ಬಸವ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಗ್ರಾಮದ ಪೇಟೆ ಬೀದಿ ಸಂಕೋಲೆ ಬಸವಣ್ಣ ದೇವಾಲಯದಲ್ಲಿ ಬಸವ ಜಯಂತಿ ಅಂಗವಾಗಿ ಬೆಳಿಗ್ಗೆಯಿಂದಲೇ ದೇವರಿಗೆ ವಿಶೇಷ ಪೂಜೆ ಅಭಿಷೇಕ ಹೂವಿನ ಅಲಂಕಾರ ಸೇರಿದಂತೆ ವಿವಿಧ ಪೂಜೆಗಳು ನಡೆದವು. ನಂತರ ದೇವಾಲಯದ ಮುಂಭಾಗ ಶ್ರೀ ಬಸವೇಶ್ವರ ಸ್ವಾಮಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಂಗಳವಾದ್ಯದೊಂದಿಗೆ ಗ್ರಾಮದ ರಾಜಬೀದಿಗಳಲ್ಲಿ ಉತ್ಸವ ನಡೆಸಲಾಯಿತು.ಹಿರೀಸಾವೆ ರಸ್ತೆಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಕಾಡುಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಗ್ರಾಮದ ಅರೇಕಲ್ಲಮ್ಮ ದೇವಾಲಯದ ಬಸವಣ್ಣನಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಲಾಯಿತು. ಬಸವ ಜಯಂತಿ ಅಂಗವಾಗಿ ರೈತರು ತಾವು ಸಾಕಿರುವ ಹೊಸ ಕರುಗಳನ್ನು ತೊಳೆದು ಹರಿಶಿಣ ಕುಂಕುಮ ಹಚ್ಚಿ ಹೂವು ಹಾಗೂ ನೈವೇದ್ಯವನ್ನು ಸಮರ್ಪಿಸಿ ಭಕ್ತಿಯಿಂದ ಪೂಜೆ ಸಲ್ಲಿಸಿದರು. ವೀರಶೈವ ಸೇವಾ ಸಮಿತಿ ವತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಿದ್ದರು.