ಕನ್ನಡಪ್ರಭ ವಾರ್ತೆ, ದಾವಣಗೆರೆ ವಕ್ಫ್ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ರಚನೆಯಾದ ಜಂಟಿ ಸಂಸದೀಯ ಸಮಿತಿಯಲ್ಲಿ ಕೋಮುವಾದಿ ಮನಸ್ಥಿತಿಯ ವ್ಯಕ್ತಿಗಳನ್ನು ತೆಗೆದು ಹಾಕುವಂತೆ ಹಿರಿಯ ವಕೀಲ ಅನೀಸ್ ಪಾಷಾ ಒತ್ತಾಯಿಸಿದ್ದಾರೆ.
ಜಂಟಿ ಸಂಸದೀಯ ಸಮಿತಿಯಲ್ಲಿ ಕೆಲ ಸಂಸದರು, ರಾಜ್ಯಸಭಾ ಸದಸ್ಯರನ್ನು ನೇಮಿಸಲಾಗಿದೆ. ಈಗ ರಚಿಸಿದ ಜಂಟಿ ಸಂಸದೀಯ ಸಮಿತಿಯ ಕೆಲವರು ಅತ್ಯಂತ ಕೋಮುದ್ವೇಷ ಮತ್ತು ವಿಷ ತುಂಬಿಕೊಂಡಿದ್ದು, ಇಂತಹ ವ್ಯಕ್ತಿಗಳಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ನ್ಯಾಯ ಸಿಗಲು ಸಾಧ್ಯವಿಲ್ಲ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮುಸ್ಲಿಂರನ್ನು ಪಂಕ್ಚರ್ ಹಾಕುವವರು, ಎದೆಯಲ್ಲಿ ನಾಲ್ಕಕ್ಷರ ಇಲ್ಲದವರು ಅಂತೆಲ್ಲಾ ಪದೇಪದೇ ಹೀಯಾಳಿಸಿದ್ದಾರೆ. ಅವರು ಅಲ್ಪಸಂಖ್ಯಾತರನ್ನು ಕೀಳಾಗಿ ನೋಡುವ ವ್ಯಕ್ತಿ ಎಂದು ದೂರಿದ್ದಾರೆ.
ಕೊರೋನಾ ಸಂದರ್ಭ ಮುಸ್ಲಿಮರ ವಿರುದ್ಧ ದ್ವೇಷಭರಿತ ಹೇಳಿಕೆ ನೀಡಿದ್ದ ತೇಜಸ್ವಿ ಸೂರ್ಯ ಅವರಂಥವರಿಂದ ನ್ಯಾಯ ಸಮ್ಮತ ವರದಿ ಹೊರಗೆ ಬರಲು ಸಾಧ್ಯವಿಲ್ಲ. ವಾಸ್ತವದಲ್ಲಿ ರಚನೆಯಾದ ಜಂಟಿ ಸಂಸದೀಯ ಸಮಿತಿಗಳಲ್ಲಿ ಪಾರದರ್ಶಕ, ಸಮಾಜವಾದಿ, ಚಿಂತನೆಯುಳ್ಳ, ಪ್ರಾಮಾಣಿಕ, ಕೋಮು ದ್ವೇಷ ಹೊಂದದ ವ್ಯಕ್ತಿಗಳಿದ್ದರೆ ಮಾತ್ರ ಜನರಿಗೆ ಒಳಿತಾಗುವ ನೈಜ ವರದಿ ತಯಾರಾಗಲು ಸಾಧ್ಯ. ಸಮಿತಿಯಲ್ಲಿ ಕೋಮುವಾದಿ ಮನಸ್ಥಿತಿ ವ್ಯಕ್ತಿಗಳನ್ನು ತೆಗೆದು ಹಾಕಬೇಕು. ಪ್ರಾಮಾಣಿಕ, ಸಮಾನ ಮನಸ್ಸಿನ, ಮಾನವೀಯ ಮೌಲ್ಯ ಎತ್ತಿಹಿಡಿಯುವ, ಜಾತ್ಯತೀತ ಮನೋಭಾವದ ವ್ಯಕ್ತಿಗಳನ್ನು ನೇಮಿಸುವಂತೆ ಲೋಕಸಭೆ ಸ್ಪೀಕರ್ ಒ. ಬಿರ್ಲಾ ಅವರಿಗೆ ಅನೀಸ್ ಪಾಷಾ ಒತ್ತಾಯಿಸಿದ್ದಾರೆ.- - - (ಸಾಂದರ್ಭಿಕ ಚಿತ್ರ)