ಕನ್ನಡಪ್ರಭ ವಾರ್ತೆ ಮಡಿಕೇರಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಸೋಮವಾರ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಮಹಾಭಾರತದಲ್ಲಿ ಶ್ರೀಕೃಷ್ಣನ ಬಗ್ಗೆ ಒಳ್ಳೆಯ ಸಂದೇಶ ತಿಳಿಯುತ್ತೇವೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿ ಬದುಕನ್ನು ಉತ್ತಮ ಪಡಿಸಿಕೊಳ್ಳಬೇಕು ಎಂಬ ಸಂದೇಶವನ್ನು ಶ್ರೀಕೃಷ್ಣ ಸಾರಿದ್ದಾನೆ. ಶ್ರೀಕೃಷ್ಣ ಒಂದು ರೀತಿ ವಿಶಿಷ್ಟ ಚೇತನ. ಅರಾಜಕತೆ, ಅಧರ್ಮ ಸಹಿಸುತ್ತಿರಲಿಲ್ಲ. ಭರತ ಖಂಡದಲ್ಲಿ ಇಡೀ ವೇದಾಂತವನ್ನು ಸುಲಲಿತವಾಗಿ ತಲುಪಿಸಿದವರು ಶ್ರೀಕೃಷ್ಣ ಎಂದರೆ ತಪ್ಪಾಗಲಾರದು. ತತ್ವಶಾಸ್ತ್ರ ಸೇರಿದಂತೆ ಹಲವು ಜ್ಞಾನವನ್ನು ಹೊಂದಿದ್ದ ಶ್ರೀಕೃಷ್ಣರು ಇಡೀ ಭರತಖಂಡದಲ್ಲಿ ತಮ್ಮದೇ ಆದ ಇತಿಹಾಸ ಹೊಂದಿದ್ದಾರೆ ಎಂದರು.ಕವಿಗಳು, ಸಾಹಿತಿಗಳು ಶ್ರೀಕೃಷ್ಣನನ್ನು ವಿವಿಧ ರೀತಿಯಲ್ಲಿ ವರ್ಣಿಸಿದ್ದಾರೆ. ದಾಸ ಪರಂಪರೆ ಸೃಷ್ಟಿಯಾಗಿದ್ದೇ ಶ್ರೀಕೃಷ್ಣರಿಂದ ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬರೂ ಭಗವದ್ಗೀತೆಯನ್ನು ಅಧ್ಯಯನ ಮಾಡಿದ್ದಲ್ಲಿ ಶ್ರೀಕೃಷ್ಣನ ಮಹತ್ವ ಬಗ್ಗೆ ಅರಿವಾಗುತ್ತದೆ. ಶ್ರೀಕೃಷ್ಣನ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ದೇಶ ವಿದೇಶಗಳಲ್ಲಿ ಶ್ರೀ ಕೃಷ್ಣನ ಅಧ್ಯಯನ ಮಾಡಿದ್ದಾರೆ. ಶ್ರೀಕೃಷ್ಣ ಜಗತ್ ಪ್ರಸಿದ್ಧ ಮೇರು ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅಸೂಯೆ ನಾಶ ಆಗಬೇಕು ಎಂದು ಶ್ರೀಕೃಷ್ಣರು ಬದುಕಿನುದ್ದಕ್ಕೂ ಸಾರಿದ್ದಾರೆ. ಭಗವಾನ್ ಶ್ರೀಕೃಷ್ಣನನ್ನು ವ್ಯಕ್ತಿಯಾಗಿ ನೋಡಬೇಕಿದೆ. ಮಹಾಭಾರತದಲ್ಲಿ ಚತುರನಾಗಿ, ಮಹಾಜ್ಞಾನಿಯಾಗಿ ನೋಡುತ್ತೇವೆ ಎಂದು ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೋರನ ಸರಸ್ವತಿ ಮಾತನಾಡಿ, ಶ್ರೀಕೃಷ್ಣನ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ಶ್ರೀಕೃಷ್ಣರು ಭಕ್ತಿಯ ಶಕ್ತಿಯಾಗಿ ಬರುತ್ತಾರೆ ಎಂದು ತಿಳಿಸಿದರು.
ಇಸ್ಕಾನ್ ಸಂಸ್ಥೆಯ ಚೈತನ್ಯದಾಸ್ ಪ್ರಭು, ಬಸವರಾಜ ಪ್ರಭು, ಕಂಚಿ ಕಾಮಾಕ್ಷಮ್ಮ ದೇವಾಲಯ ಸಮಿತಿಯ ಅಧ್ಯಕ್ಷ ಪವನ್ ಜಿ.ಬಿ., ಗೌರವಾಧ್ಯಕ್ಷ ಜಿ.ಜಿ.ಬಾಲಕೃಷ್ಣ ಇತರರು ಇದ್ದರು.