ಕನ್ನಡಪ್ರಭ ವಾರ್ತೆ ಹನೂರು
ಆ. 24 ರಂದು ಸರ್ಕಾರವು ಈ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ತನಿಖೆಯಿಂದ ಸಿಐಡಿ ಗೆ ಹಸ್ತಾಂತರಿಸಿದ ನಂತರ, ಸಿಐಡಿ ಎಸ್ ಪಿ ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಇಬ್ಬರು ಡಿವೈಎಸ್ಪಿ ಗಳು ಸೇರಿ ಇನ್ಸ್‌ಪೆಕ್ಟರ್ ಹಾಗೂ ನಾಲ್ಕು ತಂಡಗಳು ಕಳೆದ 10 ದಿನಗಳಿಂದ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದವು.
ತನಿಖಾ ತಂಡವು ಶೂಟೌಟ್ ನಡೆದ ಸ್ಥಳ, ಮೃತಪಟ್ಟ ಮೂವರ ಮನೆಗಳಿಗೆ ಭೇಟಿ ನೀಡಿ ಸಮಗ್ರ ಮಾಹಿತಿ ಕಲೆ ಹಾಕಿದ್ದು ಜೊತೆಗೆ ದುಷ್ಕರ್ಮಿಗಳಿಂದ ಅರಣ್ಯ ಇಲಾಖೆಗೆ ಸೇರಿದ ವಸತಿ ನಿಲಯಗಳು ಹಾಗೂ ಕಳ್ಳ ಬೇಟೆ ತಡೆ ಶಿಬಿರಗಳ ಧ್ವಂಸ ಪ್ರಕರಣ ಸಂಬಂಧಿಸಿದಂತೆ ಸಂಪೂರ್ಣ ವರದಿ ಹಾಗೂ ಶೂಟೌಟ್‌ನಲ್ಲಿ ಬದುಕುಳಿದ ಏಕೈಕ ಸಾಕ್ಷಿ ಮಹಿಮಾದಾಸ್ ಅವರಿಂದಲೂ ವಿಚಾರಣೆ ನಡೆಸಿತ್ತು.ಸೆ. 10 ರ ಗುರುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಎಡಿಜಿಪಿ ಬಿಜಯ್ ಕುಮಾರ್ ಸಿಂಗ್ ಅವರು ಹಲವು ತಂಡಗಳೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.
ಸರ್ಕಾರ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಉಪವಿಭಾಗಾಧಿಕಾರಿ ತನಿಖೆ, ಪೊಲೀಸ್ ತನಿಖೆ ಮತ್ತು ಸಿಐಡಿ ತನಿಖಾ ವರದಿಗಳನ್ನು ಆಧರಿಸಿ ಅಂತಿಮ ವರದಿ ಸಿದ್ಧಪಡಿಸಲಾಗುತ್ತಿದೆ. ತನಿಖೆ ಕೊನೆಯ ಘಟ್ಟ ತಲುಪಿರುವ ಹಂತದಲ್ಲಿ ಎಡಿಜಿಪಿ ಭೇಟಿ ನೀಡಿ ಅಧಿಕಾರಿಗಳಿಗೆ ಸಂಪೂರ್ಣ ವರದಿ ಸಲ್ಲಿಸಲು ಸೂಚನೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಸಿಐಡಿ ಎಸ್ ಪಿ ಉಮಾ ಪ್ರಶಾಂತ್ ಹಾಗೂ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜು ಹಾಗೂ ತನಿಖಾ ತಂಡ ಭೇಟಿ ನೀಡಿದ್ದರು.