ಅನುಕೂಲ ಎನ್ನುವುದೆಲ್ಲವೂ ಸುಖ. ಪ್ರತಿಕೂಲ ಎನ್ನುವುದೆಲ್ಲವೂ ದುಃಖ. ಸುಖ-ದುಃಖಗಳು ಪುಣ್ಯ-ಪಾಪಗಳ ಫಲ. ಪುಣ್ಯದ ಫಲವೇ ಸುಖ. ಪಾಪದ ಫಲವೇ ದುಃಖ. ಸುಖ-ದುಃಖವನ್ನು ಬೇರೆಯವರಿಗೆ ಕೊಡಲು ಅಥವಾ ಬೇರೆಯವರಿಂದ ಪಡೆಯಲು ಬರುವುದಿಲ್ಲ ಎಂದು ಹಿಪ್ಪರಗಿಯ ಸಿದ್ಧಾರೂಢ ಶರಣರು ಹೇಳಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಅನುಕೂಲ ಎನ್ನುವುದೆಲ್ಲವೂ ಸುಖ. ಪ್ರತಿಕೂಲ ಎನ್ನುವುದೆಲ್ಲವೂ ದುಃಖ. ಸುಖ-ದುಃಖಗಳು ಪುಣ್ಯ-ಪಾಪಗಳ ಫಲ. ಪುಣ್ಯದ ಫಲವೇ ಸುಖ. ಪಾಪದ ಫಲವೇ ದುಃಖ. ಸುಖ-ದುಃಖವನ್ನು ಬೇರೆಯವರಿಗೆ ಕೊಡಲು ಅಥವಾ ಬೇರೆಯವರಿಂದ ಪಡೆಯಲು ಬರುವುದಿಲ್ಲ ಎಂದು ಹಿಪ್ಪರಗಿಯ ಸಿದ್ಧಾರೂಢ ಶರಣರು ಹೇಳಿದರು. ತಾಲೂಕಿನ ಹುಲ್ಯಾಳ ಗ್ರಾಮದ ಗುರುದೇವಾಶ್ರಮದ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಪ್ರತಿ ತಿಂಗಳು 4ನೇ ಭಾನುವಾರ ಹಮ್ಮಿಕೊಳ್ಳುವ ಗುರುದೇವ ಸತ್ಸಂಗ ಏ.26ರ ಮಾಸಿಕ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಾನ್ನಿಧ್ಯ ವಹಿಸಿ ಸುಖಕ್ಕೆ ಸಾಧನಗಳು ಯಾವುವು? ವಿಷಯ ಕುರಿತು ಅನುಭಾವ ಹಂಚಿಕೊಂಡರು. ಕೋಟಿ ಕೋಟಿ ಜಪತಪ ಮಾಡಿದರೂ ಗುರುವಿನ ಬೋಧೆ ಪಡೆಯದಿದ್ದರೆ ವಾಸ್ತವಿಕ ಸುಖ ಲಭಿಸದು. ಸದ್ರೂಪ ಸುಖ ಎಲ್ಲ ಕಾಲದಲ್ಲೂ ಇರುತ್ತದೆ.. ಪುಣ್ಯದಷ್ಟು ಸುಖ, ಪಾಪದಷ್ಟು ದುಃಖ ಇರುತ್ತದೆ. ಭಗವಂತನ ತಕ್ಕಡಿಯಲ್ಲಿ ಪಾಪ-ಪುಣ್ಯಗಳು ಹೆಚ್ಚು-ಕಡಿಮೆ ಆಗುವುದಿಲ್ಲ ಎಂದು ಹೇಳಿದರು.
ಕಾಜಿಬೀಳಗಿಯ ಮಲ್ಲಿಕಾರ್ಜುನ ಶರಣರು ಸಾನ್ನಿಧ್ಯ ವಹಿಸಿ ಮಾತನಾಡಿ, ಒಮ್ಮೆ ಸುಖ ಬಂದರೆ ತಿರುಗಿ ದುಃಖ ಬರಬಾರದು. ಅದಕ್ಕಾಗಿ ಭಗವಂತನ ಚಿಂತನೆಯಲ್ಲಿ ಇರಬೇಕೇ ಹೊರತು ಸಂಪತ್ತಿನ ಚಿಂತೆಯಲ್ಲಿ ಇರಬಾರದು. ಬಲ್ಲವರ ನುಡಿ ಮುತ್ತುಗಳು ಸುಖಕ್ಕೆ ಸಾಧನ. ಆದ್ದರಿಂದ ಮಹಾತ್ಮರ, ಸಂತರ, ಸತ್ಪುರುಷರ ಸಂಗದಲ್ಲಿ ಇರಬೇಕು ಎಂದು ಆಶೀರ್ವಚನ ನೀಡಿದರು.
ಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಹೊಸೂರಿನ ಶಂಕರಾನಂದ ಮಠದ ಪರಮಾನಂದ ಸ್ವಾಮೀಜಿ, ಸಿದ್ದಾಪುರದ ಅಡವಿ ಸಿದ್ಧೇಶ್ವರ ಮಠದ ಅಕ್ಕಮಹಾದೇವಿತಾಯಿ ಸಾನ್ನಿಧ್ಯ ವಹಿಸಿದ್ದರು. ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾದ ಲಿಂಗರಾಜ ಪಾಟೀಲ, ಮಹಾಪ್ರಸಾದ ದಾಸೋಹ ಸೇವೆಗೈದ ಆಲಬಾಳ ಗ್ರಾಮದ ಸಂಗಮೇಶ ತೇಲಿ-ಸಾವಿತ್ರಿ ತೇಲಿ ದಂಪತಿಯನ್ನು ಸನ್ಮಾನಿಸಲಾಯಿತು.
2025-26ನೇ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಅಧಿಕ ಅಂಕ ಪಡೆದ ಹುಲ್ಯಾಳ ಸುತ್ತಲಿನ ಗ್ರಾಮಗಳ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು.
ಶ್ರೀಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸಗೌಡ ಪಾಟೀಲ, ಪರಮೇಶ್ವರ ತೇಲಿ, ಅಕ್ಷಯ ಹೂಗಾರ, ಸಿದ್ದು ಉಪ್ಪಲದಿನ್ನಿ ಸಂಗೀತ ಸೇವೆ ಸಲ್ಲಿಸಿದರು. ನಿವೃತ್ತ ಶಿಕ್ಷಕ ಗುರುನಾಥ ಸುತಾರ ಸ್ವಾಗತಿಸಿದರು. ಉಪನ್ಯಾಸಕ ಸಂಗಮೇಶ ತೆಲಸಂಗ, ಶಿಕ್ಷಕ ಎಸ್.ಐ. ಚನಪನ್ನವರ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.