ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಗ್ರಾಮದ ಕಸವನ್ನು ಜನವಾಸಿಗಳ ಕಾಲೋನಿಗೆ ತಂದು ಸುರಿಯುತ್ತಿದ್ದಾರೆ. ರಸ್ತೆ, ಬೀದಿದೀಪ ಕಾಮಗಾರಿ ನಡೆಯುತ್ತಿಲ್ಲ, ಉದ್ಯೋಗ ಖಾತ್ರಿ ಕಾಮಗಾರಿ ಕಳಪೆಯಾಗಿದೆ, ಕೆರೆ ಸ್ವಚ್ಛತಾ ಕಾಮಗಾರಿ ಅಪೂರ್ಣಗೊಂಡಿದೆ, ಜನ ಸಾಮಾನ್ಯರ ಅಹವಾಲುಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಹರದೂರು ಗ್ರಾಮಸಭೆಯಲ್ಲಿ ನಡೆಯಿತು.ಹರದೂರು ಗ್ರಾಮ ಪಂಚಾಯಿತಿಯ 2023- 24ನೇ ಸಾಲಿನ ಗ್ರಾಮ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಪಿ. ಉಷಾ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭ ಗ್ರಾ.ಪಂ. ಆಡಳಿತ ಕಾರ್ಯ ವೈಖರಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು. ಕಳೆದ 1 ವರ್ಷದಿಂದ ಗ್ರಾಮ ಸಭೆ ನಡೆದಿಲ್ಲ ಜನ ಸಾಮಾನ್ಯರ ಆಶೋತ್ತರಗಳಿಗೆ ಉತ್ತರ ನೀಡುವವರೇ ಇಲ್ಲದಾಗಿದೆ. ಅರ್ಜಿಯನ್ನು ಸ್ವೀಕರಿಸುತ್ತಾರೆ ಆದರೆ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಗ್ರಾಮದ ರಸ್ತೆ ಅಗಲೀಕರಣಕ್ಕೆ ಅರ್ಜಿ ನೀಡಿ 10 ವರ್ಷವಾದರೂ ಪ್ರಯೋಜನವಾಗಿಲ್ಲ, ಬಡವರಿಗೆ ಸರ್ಕಾರದಿಂದ ದೊರಕುತ್ತಿರುವ ಆಶ್ರಯ, ಬಸವ, ಅಂಬೇಡ್ಕರ್, ಇಂದಿರಾ ಅವಾಜ್, ಪ್ರಧಾನ ಮಂತ್ರಿ ವಿಶೇಷ ಅನುದಾನದಡಿ ಸಿಗುವ ಮನೆಗಳು ಲಭ್ಯವಾಗಿಲ್ಲ ಎಂದು ಗ್ರಾಮಸ್ಥರಾದ ನಾಣಯ್ಯ(ಪಟ್ಟು) ಮಧು ಗಣೇಶ, ಲೀಲಾವತಿ, ಉಲ್ಲಾಸ್ ಅವರುಗಳು ಪಂಚಾಯಿತಿ ಆಡಳಿತ ವಿರುದ್ಧ ಹರಿಹಾಯ್ದರು. ಊರುಡುವೆ ಜಾಗದಲ್ಲಿ ಮನೆ ಕಟ್ಟಿ ಕೊಂಡವರಿಗೆ ಅರಣ್ಯ ಹಕ್ಕು ಸಮಿತಿಯಿಂದ ಮನೆ ಮಂಜೂರಾತಿಗೆ ಅನುಮೋದನೆ ನೀಡಲು ಮೀನಮೇಷ ಎಣಿಸಲಾಗುತ್ತಿದೆ. ಹಲವಾರು ವರ್ಷಗಳಿಂದ ಅರ್ಜಿ ಸಲ್ಲಿದರೂ ರಸ್ತೆ ಅಭಿವೃದ್ಧಿ ಮಾಡದೆ ಅಧ್ಯಕ್ಷೆಯವರ ಮನೆ ಮುಂಭಾಗದ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಈ ತಾರತಮ್ಯ ಯಾಕೆ? ಎಂದು ಧನಂಜಯ ನೀಲಮ್ಮ ಆಕ್ರೋಶ ವ್ಯಕ್ತ ಪಡಿಸಿದರು. ಸಾರ್ವಜನಿಕ ನಾಲೆ ಹೂಳೆತ್ತುವ ಕಾರ್ಯ ಕಳಪೆಯಾಗಿದೆ. ಇದರಲ್ಲಿ ಅವ್ಯವಹಾರ ನಡೆದಿದೆ. ಇದನ್ನು ತನಿಖೆಗೆ ಒಳಪಡಿಸಬೇಕೆಂದು ಅಲ್ಲಿನ ನಿವಾಸಿ ಚೇತನ ಅವರು ಅಧ್ಯಕ್ಷರ ವಿರುದ್ಧ ದೂರಿದರು. ಈ ವಿಚಾರದಲ್ಲಿ ಗ್ರಾಮಸ್ಥ ಲವ ಹಾಗೂ ಅಧ್ಯಕ್ಷರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಗ್ರಾಮಸಭೆ ನಡೆಯದೆ ಕ್ರಿಯಾ ಯೋಜನೆ ಹೇಗೆ ತಯಾರಿಸಿದ್ದೀರಿ ಎಂದು ಗ್ರಾಮಸ್ಥರಾದ ನಾಣಯ್ಯ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪಂಚಾಯಿತಿಯವರು 2 ವರ್ಷದಿಂದ ಅರ್ಜಿಯನ್ನು ವಿಲೇವಾರಿ ಮಾಡಿಲ್ಲ ಎಂದು ಗ್ರಾಮಸ್ಥರಾದ ಲೀಲಾವತಿ ಲವ ಹೇಳಿದರು. ಅರಣ್ಯಾಧಿಕಾರಿ ಜಗದೀಶ್ ಮಾತನಾಡಿ ಊರುಡುವೆ ಜಾಗದ ಸಮಸ್ಯಗೆ ಅರಣ್ಯ ಇಲಾಖೆಯಿಂದ ಜಾಗ ಪರಿಶೀಲಿಸಿ ಅರಣ್ಯ ಹಕ್ಕು ಸಮಿತಿಗೆ ಸಮಾಜ ಕಲ್ಯಾಣ ಹಾಗೂ ಗ್ರಾಮ ಪಂಚಾಯಿತಿಗೆ ವರದಿ ಶೀಘ್ರದಲ್ಲೇ ಸಸಲಾಗುವುದು ಎಂದರು. ಮಂಗಗಳ ಹಾವಳಿ: ಗುಂಡುಗುಟ್ಟಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಗಳ ಹಾವಳಿಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಶಾಲೆಯ ಹೆಂಚುಗಳನ್ನು ಮಂಗಗಳು ಒಡೆದು ಹಾಕುತ್ತಿವೆ.ಅರಣ್ಯ ಇಲಾಖೆಯವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲವೆಂದು ಮುಖ್ಯ ಶಿಕ್ಷಕಿ ಗೌರಮ್ಮ ಹೇಳಿದರು. ಉದ್ಯೋಗ ಖಾತ್ರಿ ಯೋಜನೆಯಡಿ 2020-21ನೇ ಸಾಲಿನಲ್ಲಿ ತಡೆಗೋಡೆ ಕಾಮಗಾರಿ ಪೂರ್ಣಗೊಳಿಸಿದ 3 ಲಕ್ಷ 50 ಸಾವಿರ ಹಣದ ಬಿಲ್ ಪಾವತಿಯಾಗಿಲ್ಲ. ಇತ್ತೀಚೆಗೆ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗಿದೆ ಎಂದು ಅಬ್ಬಾಸ್ ಅಸಾಹಯಕತೆ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಪಿ. ಉಷಾ, ನೋಡಲ್ ಅಧಿಕಾರಿಯಾದ ಸೊಮವಾರಪೇಟೆ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ಮಿಲನ್ ಭರತ್ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ, ಹಂತಹಂತವಾಗಿ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುದು ಎಂದು ಭರವಸೆ ನೀಡಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬ್ದುಲ್ ಸಲಾಮ, ಸದಸ್ಯರಾದ ಎ.ಸಿ. ಸುಬ್ಬಯ್ಯ, ಬಿ.ಡಿ. ಪದ್ಮನಾಭ, ಕುಸುಮಾ, ಮುಸ್ತಾಫ, ಕೆ.ಕೆ. ರಮೇಶ್, ಸರೋಜ, ಉಷಾ, ಭೋಜಮ್ಮ, ಪಿಡಿಒ ಪೂರ್ಣಿಮಾ, ಕಾರ್ಯದರ್ಶಿ ನವ್ಯಾ ಕೆ.ಪಿ. ಸಿಬ್ಬಂದಿ ರವಿ, ರಮ್ಯ, ಪವಿತ್ರ, ಸಂತೋಷ್, ಸಂಧ್ಯಾ, ಅರಣ್ಯ ಇಲಾಖೆ ಅಧಿಕಾರಿ ಜಗದೀಶ್, ಆರೋಗ್ಯ ಅಧಿಕಾರಿ ಶಿವಣ್ಣ, ಗ್ರಾಮ ಲೆಕ್ಕಾಧಿಕಾರಿ ದೀಪಿಕಾ ಇತರರು ಹಾಜರಿದ್ದರು.