ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಹಾರಕೂಡದ ಡಾ.ಚೆನ್ನವೀರ ಶಿವಾಚಾರ್ಯರ ನೇತೃತ್ವದಲ್ಲಿ ಮೂರುದಿನ ಜಾತ್ರೆ ಅದ್ಧೂರಿ ಮತ್ತು ಅರ್ಥಪೂರ್ಣವಾಗಿ ಆಯೋಜಿಸಲು ಭಕ್ತಮಂಡಳಿ ಮುಂದಾಗಿದೆ. ಹಾರಕೂಡ ಮಠದಲ್ಲೂ ಎಲ್ಲ ಸಿದ್ದತೆ ಕೆಲಸಗಳು ಚುರುಕುಗೊಂಡಿವೆ.
ಸುಕ್ಷೇತ್ರ ಹಾರಕೂಡದ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ಸದ್ಗುರು ಚೆನ್ನಬಸವ ಶಿವಯೋಗಿಗಳ 74ನೇ ಜಾತ್ರಾ ಮಹೋತ್ಸವ ನಿಮಿತ್ತ ಡಿ.24ರಂದು ಸಂಜೆ 6ಕ್ಕೆ ಸಹಸ್ರಾರು ಭಕ್ತರ ಜಯಘೋಷಗಳ ಮಧ್ಯೆ ವೈಭವದ ಮಹಾರಥೋತ್ಸವ ಜರುಗಲಿದೆ.ಮಠದ ಪೀಠಾಧಿಪತಿ ಡಾ.ಚನ್ನವೀರ ಶಿವಾಚಾರ್ಯರ ನೇತೃತ್ವದಲ್ಲಿ ಶಿವಾನುಭವ ಚಿಂತನಗೋಷ್ಠಿ, ಜಂಗಿ ಪೈಲ್ವಾನರ ಥೇಟರ್ ಕುಸ್ತಿ ಪಂದ್ಯಗಳು ನಡೆಯಲಿವೆ. ಸಂಜೆ 7ಕ್ಕೆ ಶಿವಾನುಭವ ಚಿಂತನ ಗೋಷ್ಠಿ ಕಾರ್ಯಕ್ರಮ ನಡೆಯಲಿದೆ. ಇಳಕಲ್ಲದ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಗುರು ಮಹಾಂತ ಸ್ವಾಮಿ ಸಾನ್ನಿಧ್ಯ ವಹಿಸಿದರೆ ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಡಾ.ಶಿವಾನಂದ ಸ್ವಾಮಿ ಅಧ್ಯಕ್ಷತೆ ವಹಿಸುವರು.
ಈ ಸಂದರ್ಭದಲ್ಲಿ ಬಸವಂತರಾವ ಶರಣಪ್ಪ ಡೆಂಗಿ, ರಾಜಶೇಖರ ಶಿವಶರಣಪ್ಪ ಮರಗೋಳ ಅವರನ್ನು ಸನ್ಮಾನಿಸಲಾಗುವುದು.ಸಚಿವರಾದ ಈಶ್ವರ ಖಂಡ್ರೆ, ಡಾ. ಶರಣಪ್ರಕಾಶ ಪಾಟೀಲ್, ರಹೀಂ ಖಾನ್, ಕೆ.ಆರ್ ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಶಾಸಕರಾದ ಶರಣು ಸಲಗರ, ಡಾ.ಸಿದ್ದಲಿಂಗಪ್ಪ ಪಾಟೀಲ್, ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯರಾದ ಎಂ.ಜಿ.ಮುಳೆ, ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್ ಹುಮನಾಬಾದ್, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ, ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ, ಪ್ರಮುಖರಾದ ಧನರಾಜ ತಾಳಂಪಳ್ಳಿ, ಡಾ.ಸೋಮನಾಥ ಪಟ್ನೆ ಇತರರು ಪಾಲ್ಗೊಳ್ಳಲಿದ್ದಾರೆ.
ಡಿ. 24ರಂದು ಸಂಜೆ ನಡೆಯಲಿರುವ ಸಮಾರಂಭದಲ್ಲಿ ಇಳಕಲ್‌ನ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಗುರು ಮಹಾಂತ ಸ್ವಾಮಿ ಹಾಗೂ ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಡಾ.ಶಿವಾನಂದ ಮಹಾಸ್ವಾಮಿ ಅವರಿಗೆ ಬಸವ ಭಾನು ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.ಡಿ.25ರಂದು ಮಧ್ಯಾಹ್ನ 2ಕ್ಕೆ ಜಂಗಿ ಪೈಲ್ವಾನರ ಥೇಟರ್ ಕುಸ್ತಿಗಳು ಜರುಗಲಿವೆ. ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರು ಹಾಗೂ ಆಳಂದ ಶಾಸಕ ಬಿ. ಆರ್. ಪಾಟೀಲ್ ಥೇಟರ್ ಕುಸ್ತಿ ಉದ್ಘಾಟಿಸುವರು.
ಡಿ. 26ರಂದು ಪಶು ಪ್ರದರ್ಶನ ಆಯೋಜಿಸಲಾಗಿದ್ದು, ಉತ್ತಮ ಪಶುಗಳಿಗೆ ಬಹುಮಾನ ಕೊಡಲಾಗುತ್ತಿದೆ.