ಕನ್ನಡಪ್ರಭ ವಾರ್ತೆ ಕುಶಾಲನಗರ
ಹಾರಂಗಿ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ, ತಡೆಗೋಡೆ ನಿರ್ಮಾಣ ಹಾಗೂ ಹೂಳೆತ್ತುವ ಬಹುಕೋಟಿ ಕಾಮಗಾರಿ ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಹಾರಂಗಿ ಪ್ರವಾಸಿ ಮಂದಿರದಲ್ಲಿ ಮಡಿಕೇರಿ ಶಾಸಕ ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಅಂದಾಜು 131 ಕೋಟಿ ರು.ಗಳ ಅನುದಾನದಲ್ಲಿ ನಡೆಯುತ್ತಿರುವ ಬೃಹತ್ ಯೋಜನೆ 2022ರಿಂದ ಆರಂಭಗೊಂಡಿದ್ದು, ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಜಲಾಶಯದ ಹಿನ್ನೀರು ವ್ಯಾಪ್ತಿಯ ಹಟ್ಟಿಹೊಳೆ ಮಾದಾಪುರ, ಗರಗಂದೂರು ಪಂಚಾಯಿತಿ ವ್ಯಾಪ್ತಿಯಲ್ಲಿ ನದಿಗೆ ಅತ್ಯಾಧುನಿಕ ತಂತ್ರಜ್ಞಾನವಾದ ಗೇಬಿಯನ್ ವಾಲ್ ನಿರ್ಮಾಣ, ಕೆಲವೆಡೆ ತಡೆಗೋಡೆ ನಿರ್ಮಾಣ, ಸಂಪರ್ಕ ಸೇತುವೆಗಳು, ಪಾದಾಚಾರಿ ಸೇತುವೆಗಳ ನಿರ್ಮಾಣದೊಂದಿಗೆ ನದಿಯಲ್ಲಿ ತುಂಬಿರುವ ಹೂಳು ತೆರವುಗೊಳಿಸುವ ಕಾಮಗಾರಿ ನಡೆಯಬೇಕಾಗಿದ್ದು, ಹಲವು ಕಾರಣಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ.
ಕಾಮಗಾರಿ 2022 ಸೆಪ್ಟೆಂಬರ್‌ನಿಂದ ಆರಂಭಗೊಂಡಿದ್ದು, ಈ ವರ್ಷದ ಸೆಪ್ಟೆಂಬರ್ ಪ್ರಾರಂಭದಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಾಗುತ್ತದೆ. ಒಪ್ಪಂದದ ಪ್ರಕಾರ ಇನ್ನು ಕೆಲವೇ ತಿಂಗಳು ಕಾಮಗಾರಿ ಪೂರ್ಣಗೊಳ್ಳಲು ಬಾಕಿ ಇದ್ದು, ಇನ್ನು ಕೂಡ ನದಿಯ ವ್ಯಾಪ್ತಿಯ ಗಡಿ ಗುರುತು ಸೇರಿದಂತೆ ಹಲವು ಕೆಲಸಗಳು ಬಾಕಿ ಇವೆ. ಕಾಮಗಾರಿ ನಡೆಸುವ ಸಂದರ್ಭ ಅಡ್ಡಿಯಾಗುವ ಸುಮಾರು 600 ಮರಗಳನ್ನು ತೆರವುಗೊಳಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಇನ್ನೂ ಅನುಮತಿ ದೊರೆತಿಲ್ಲ. ಸಂಬಂಧಿಸಿದ ಗುತ್ತಿಗೆದಾರರು ನಿಧಾನಗತಿಯಲ್ಲಿ ಕೆಲಸ ಮಾಡುತ್ತಿದ್ದು, ಈ ಬಗ್ಗೆ ಶಾಸಕರು ಗುತ್ತಿಗೆದಾರರನ್ನು ಮತ್ತು ನೀರಾವರಿ ನಿಗಮದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಯೋಜನೆಯ ಕಾಮಗಾರಿ ವಿಳಂಬಗೊಳ್ಳುತ್ತಿದೆ ಎಂದು ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ರಘುಪತಿ ಶಾಸಕರ ಗಮನಕ್ಕೆ ತಂದರು.
ಪ್ರಸಕ್ತ ಕಾಮಗಾರಿ ಪ್ರಗತಿಯ ಬಗ್ಗೆ ಹಾರಂಗಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ವಿವರ ಒದಗಿಸಿದರು.ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಕಂದಾಯ ಅಧಿಕಾರಿಗಳಿಗೆ ಅಗತ್ಯವಿರುವ ಕೆಲಸ ಕಾರ್ಯಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಶಾಸಕರು ಸೂಚಿಸಿದರು.
15 ದಿನಗಳ ಒಳಗಾಗಿ ನದಿ ಗಡಿ ಗುರುತು ಅರಣ್ಯ ಇಲಾಖೆಯಿಂದ ಮರ ತೆರವುಗೊಳಿಸುವ ಬಗ್ಗೆ ಅನುಮತಿ ಮತ್ತು ಇತರ ಅಗತ್ಯವಿರುವ ಕೆಲಸಗಳನ್ನು ಮಾಡುವಂತೆ ಸೂಚನೆ ನೀಡಿದರು.ಕಾಮಗಾರಿ ಸಂದರ್ಭ ಅಗತ್ಯವಿರುವ ಮರಗಳ ತೆರವು ಮಾತ್ರ ಮಾಡುವಂತೆ ಶಾಸಕ ಮಂತರ್ ಗೌಡ, ಅಧಿಕಾರಿಗಳಿಗೆ ಸಲಹೆ ನೀಡಿದರು.
ಸಭೆಯಲ್ಲಿ ದುಬಾರೆ ಪ್ರವಾಸಿ ಕೇಂದ್ರದಲ್ಲಿ ನದಿಗೆ ಅಡ್ಡಲಾಗಿ ಸುಮಾರು ಏಳು ಕೋಟಿ ವೆಚ್ಚದ ತೂಗು ಸೇತುವೆ ನಿರ್ಮಾಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಬಯಸಿದರು. ಸದ್ಯದಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಗೊಳ್ಳುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.ಮೀಸಲು ಅರಣ್ಯದಲ್ಲಿ ಪ್ರಾಣಿಗಳಿಗೆ ವನ್ಯಜೀವಿಗಳಿಗೆ ಅಗತ್ಯವಿರುವ ಮೂಲಭೂತ ವ್ಯವಸ್ಥೆ ನೀರು ಮತ್ತು ಅಗತ್ಯ ಆಹಾರ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ತಿಳಿಸಿದ ಶಾಸಕರು ಸದ್ಯದಲ್ಲಿಯೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮೀಸಲು ಅರಣ್ಯದ ಕೆರೆಗಳ ವೀಕ್ಷಣೆಗೆ ಕಾರ್ಯಕ್ರಮ ಹಾಕಿಕೊಳ್ಳುವುದಾಗಿ ಹೇಳಿದರು.
ಮಡಿಕೇರಿ ವಿಭಾಗ ಅರಣ್ಯ ಉಪ ಸಂರಕ್ಷಣಾಧಿಕಾರಿ ಭಾಸ್ಕರ್, ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ, ಮಡಿಕೇರಿಯ ಕಂದಾಯ ಅಧಿಕಾರಿಗಳು ನೀರಾವರಿ ನಿಗಮದ ಅಧಿಕಾರಿಗಳು, ಸರ್ವೆ ಇಲಾಖೆ ಅಧಿಕಾರಿಗಳು ಭೂವಿಜ್ಞಾನ ಗಣಿ ಇಲಾಖೆ ಅಧಿಕಾರಿಗಳು ಮತ್ತಿತರರು ಇದ್ದರು.