ತಮಿಳುನಾಡಿನ ಪೊಲೀಸರಿಂದ ನಿರಂತರ ಹಿಂಸೆ । ಕರ್ನಾಟಕ ಸರ್ಕಾರ ಮಧ್ಯಪ್ರವೇಶಿಸಿ ಕ್ರಮಕ್ಕೆ ಆಗ್ರಹ
ತಮಿಳುನಾಡಿನ ಪೋಲೀಸರು ಹೊಗೇನಕಲ್‌ನಲ್ಲಿ ಕರ್ನಾಟಕದ ಭಾಗದಲ್ಲಿ ತೆಪ್ಪ ನಡೆಸುವವರ ಮೇಲೆ ನಿರಂತರ ಕಿರುಕುಳ ನಡೆಸುತ್ತಿರುವ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮಧ್ಯಪ್ರವೇಶ ಮಾಡಬೇಕು. ಇಲ್ಲದಿದ್ದರೆ ತೆಪ್ಪ ನಡೆಸುವುದಿಲ್ಲ ಎಂದು ಹೊಗೇನಕಲ್‌ನಲ್ಲಿ ತೆಪ್ಪ ನಡೆಸುವ ಪಳನಿ ಸ್ವಾಮಿ ಹೇಳಿದರು.
ಹನೂರು ಗಡಿ ಗ್ರಾಮದ ಹೊಗೇನಕಲ್ ಜಲಪಾತ ವೀಕ್ಷಣೆಗೆ ತೆರಳಿದ್ದ ರಾಜ್ಯದ ಪ್ರವಾಸಿಗರ ಮೇಲೆ ತಮಿಳುನಾಡಿನ ಪೊಲೀಸರ ಕ್ರಮ ಖಂಡಿಸಿ 300ಕ್ಕೂ ಹೆಚ್ಚು ತೆಪ್ಪ ನಡೆಸುವವರು ಪ್ರತಿಭಟನೆ ನಡೆಸಿ ಮಾತನಾಡಿದರು.ಹೊಗೇನಕಲ್ ಕರ್ನಾಟಕದ ಭಾಗದಿಂದ ತಮಿಳುನಾಡಿನ ಭಾಗದ ಜಲಪಾತದ ವೀಕ್ಷಣೆಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿದ್ದಾಗ ತೆಪ್ಪ ನಡೆಸುವವರ ಮೇಲೆ ಈ ಹಿಂದೆ ಕೂಡ ಅಲ್ಲಿನ ಪೊಲೀಸ್ ಅಧಿಕಾರಿಗಳು ಹಲ್ಲೆ ನಡೆಸಿರುವ ಘಟನೆಗಳು ಮತ್ತೆ ಮರುಕಳಿಸಿವೆ. ಹೀಗಾಗಿ ಕರ್ನಾಟಕ ಸರ್ಕಾರ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸಭೆ ನಡೆಸಿ ಇಂತಹ ಸಮಸ್ಯೆಗಳಿಂದ ಮತ್ತೆ ಮರುಕಳಿಸದಂತೆ ಕ್ರಮವಹಿಸಬೇಕು. ಅಲ್ಲಿಯವರೆಗೂ ತೆಪ್ಪ ನಡೆಸುವುದಿಲ್ಲ ಎಂದು ಹೇಳಿದರು.
ಇದರ ಬಗ್ಗೆ ಕರ್ನಾಟಕದ ಕಾವೇರಿ ವನ್ಯಧಾಮ ಅಧಿಕಾರಿಗಳಿಗೆ ಘಟನೆ ಬಗ್ಗೆ ತಿಳಿಸಿದ್ದರೂ ಸಹ ಇನ್ನು ಸಹ ಇದರ ಬಗ್ಗೆ ಕ್ರಮ ಕೈಗೊಳ್ಳದೆ ಇರುವುದರಿಂದ ಸೋಮವಾರ ಸಹ ತಮಿಳುನಾಡಿನ ಕಡೆ ತೆರಳಿದ್ದ ತೆಪ್ಪ ನಡೆಸುವವರನ್ನು ತಮಿಳುನಾಡಿನ ಪೊಲೀಸರು ವಾಪಸ್ ಕಳಿಸಿದ್ದಾರೆ. ಹೀಗಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.