ಕನ್ನಡಪ್ರಭ ವಾರ್ತೆ ಸಿಂದಗಿ
ಜನವರಿ ೨೦೧೯ರಲ್ಲಿಯೇ ಸಿಂದಗಿ ವಿರಕ್ತಮಠದ ಆಸ್ತಿ ಬದಲಾವಣೆ ಮಾಡಿದ್ದಾರೆ. ಆದರೆ, ಶ್ರೀಗಳಿಗೆ ಗೊತ್ತಿಲ್ಲ. ಆಸ್ತಿ ಸರ್ವೆ ನಂ.೧೦೨೦ರಲ್ಲಿ ೧.೩೬ ಎಕರೆ ಉತಾರಿಯಲ್ಲಿ ದಾಖಲು ತೋರಿಸಿದ್ದಾರೆ. ಸಚಿವರು ಮೌಖಿಕವಾಗಿ ಕ್ರಮಕೈಗೊಳ್ಳಿ ಅಂತ ಹೇಳಿದಾಗ ಕ್ರಮಕೈಗೊಳ್ಳುವ ನೈತಿಕತೆ ಯಾರಿಗೂ ಇರುವುದಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.ಪಟ್ಟಣದ ವಿರಕ್ತಮಠಕ್ಕೆ ಮಂಗಳವಾರ ಭೇಟಿ ನೀಡಿ ಹಲವಾರು ರೈತರ ಹಾಗೂ ಸಾರ್ವಜನಿಕರ ಆಸ್ತಿಯ ಪಹಣಿ ಪರಿಶೀಲಿಸಿ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ರೈತರು ಅನ್ಯಾಯಕ್ಕೆ ಒಳಗಾಗಿದ್ದಾರೆ. ಆ ರೈತರು ಇಂದು ನಮಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಸಾವಿರ ವರ್ಷದ ಇತಿಹಾಸವಿರುವ ಸಿಂದಗಿ ವಿರಕ್ತಮಠ, ಮಠದ ಆಸ್ತಿಯ ಉತಾರೆಯಲ್ಲಿ ಏಕಾಏಕಿ ವಕ್ಫ್ ಬೋರ್ಡ್ ಹೆಸರು ಸೇರಿಸಿದ್ದು ದುರಾದೃಷ್ಟಕರ. ಧರ್ಮ, ಜಾತಿಗಳ ಮಧ್ಯೆ ವಿಷಬೀಜ ಬಿತ್ತುವಂತಹ ಹುನ್ನಾರವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಸಿಂದಗಿ ವಿರಕ್ತಮಠದ ಬಸವಪ್ರಭು ಮಹಾಸ್ವಾಮಿಗಳು ಮಾತನಾಡಿ, ಬಸವಣ್ಣನವರ ಕಾಲದಿಂದಲೇ ರಾಣಿ ಅಬ್ಬಕ್ಕನಿಂದ ಬಳುವಳಿಯಾಗಿ ಬಂದ ಮಠದ ಆಸ್ತಿ ನಿನ್ನೆ ಮೊನ್ನೆ ಹುಟ್ಟಿಕೊಂಡ ವಕ್ಫ್ ಬೋರ್ಡ್ ತನ್ನ ಹೆಸರಿಗೆ ಪರಭಾರೆ ಮಾಡಿಕೊಳ್ಳುತ್ತದೆ ಎಂದರೆ ಇದು ಅನ್ಯಾಯದ ಪರಮಾವಧಿ. ಅಲ್ಲದೇ ರೈತರು, ಸಾರ್ವಜನಿಕರು ತಮ್ಮ ಆಸ್ತಿ ಯಾವಾಗ ಯಾರು ಕೊಳ್ಳೆ ಹೊಡೆಯುತ್ತಾರೋ ಎನ್ನುವ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಇದಕ್ಕೆ ಸರ್ಕಾರವೇ ಮುತುವರ್ಜಿ ವಹಿಸಿ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದರು.ಈ ವೇಳೆ ಕೊರಳ್ಳಿಯ ಶಾಂತು ಬಿರಾದಾರ ಅಹವಾಲು ಸಲ್ಲಿಸಿ ಮಾತನಾಡಿ, ಒಟ್ಟು ಆಸ್ತಿ 9 ಎಕರೆ ಇದ್ದು, ಅದರಲ್ಲಿ ೨ಎಕರೆ ೧೦ಗುಂಟೆ ಖಬರಸ್ತಾನಕ್ಕೆ ಸೇರಿದೆ. ೨೦೦೩ರಲ್ಲಿ ಕೋರ್ಟ್‌ನಲ್ಲಿ ನನ್ನ ಪರವಾಗಿ ಆದೇಶವಾದರೂ ಬಿಟ್ಟುಕೊಡುತ್ತಿಲ್ಲ. ಪೊಲೀಸ್ ರಕ್ಷಣೆಯಲ್ಲಿ ಆಸ್ತಿಯನ್ನು ಪಡೆದುಕೊಳ್ಳಲು ಕೋರ್ಟ್ ಆದೇಶಿಸಿದ್ದರೂ ಪೊಲೀಸರು ಸೂಕ್ತ ರಕ್ಷಣೆ ನೀಡುತ್ತಿಲ್ಲ. ಸಚಿವರು ಪೊಲೀಸರಿಗೆ ಒಂದು ಅರ್ಜಿ ಕೊಟ್ಟು ರಕ್ಷಣೆ ನೀಡಲು ಕೇಳಿ. ನಾನು ಪೊಲೀಸರಿಗೆ ಹೇಳುತ್ತೇನೆ ಎಂದರು. ಆಲಮೇಲ ಗ್ರಾಮದ ಮಂಜುಳಾ ಎನ್ನುವ ಮಹಿಳೆ ತನ್ನ ೧೬ ಎಕರೆ ೨೨ಗುಂಟೆ ಜಮೀನು ವಕ್ಫ್ ಬೋರ್ಡ್‌ಗೆ ಪರಭಾರೆಯಾಗಿದ್ದು, ಕೇಳಲು ಹೋದರೆ ಸರ್ಕಾರಕ್ಕೆ ವರ್ಗಾವಣೆಯಾಗಿದೆ. ನೀವು ಏನು ಕೇಳಬೇಡಿ ಎಂದು ಸಾಗ ಹಾಕುತ್ತಾರೆ. ಅದಕ್ಕೆ ಉತ್ತರಿಸಿದ ಸಚಿವರು ಸ್ಥಳೀಯವಾಗಿ ಒಬ್ಬ ವಕೀಲರನ್ನು ನೇಮಿಸಿ ದಾವೆ ಹೂಡಲು ಹೇಳಿದ್ದಾರೆ. ಅಲ್ಲದೆ ಮುಂದಿನ ಕ್ರಮದ ಕುರಿತು ಮುತುವರ್ಜಿ ವಹಿಸುವುದಾಗಿ ಭರವಸೆ ನೀಡಿದರು ಎಂದು ಹೇಳಿದರು.
-----------ವಿಜಯಪುರ ಜಿಲ್ಲೆಯ ಸಿಂದಗಿಯ ವಿರಕ್ತಮಠವು ವಕ್ಫ ಬೋರ್ಡ್ ಆಸ್ತಿಯಾಗಿರುವುದು ಕೂಡ ಬೆಳಕಿಗೆ ಬಂದಿದೆ. ವಿರಕ್ತಮಠದ 1.20 ಎಕರೆ ಭೂಮಿಯೂ ವಕ್ಫ್ ಆಸ್ತಿ ಎಂದು ಬಂದಿದೆ. ವಿರಕ್ತಮಠದ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಸೇರ್ಪಡೆಯಾಗಿರುವುದು ಶ್ರೀಗಳು ಮತ್ತು ಭಕ್ತರ ಆಕ್ರೋಶಕ್ಕೂ ಕಾರಣವಾಗಿದೆ. ಈಗಾಗಲೇ ವಿರಕ್ತಮಠದ ಸರ್ವೇ ನಂಬರ್ 1020 ಪಹಣಿಯಲ್ಲಿ ವಕ್ಫ ಬೋರ್ಡ್ ಹೆಸರು ಸೇರ್ಪಡೆಯಾಗಿದೆ. 2018-19ರಲ್ಲಿಯೇ ಪಹಣಿಯ ಕಾಲಂ 11ರ ಋಣಗಳಲ್ಲಿ "ಸಿಂದಗಿ ಸುನ್ನಿ ವಕ್ಫ್ ಆಸ್ತಿ " ಎಂದು ಹೆಸರು ಸೇರ್ಪಡೆಯಾಗಿದೆ. ಸಾಲಕ್ಕಾಗಿ ಹೊಸ ಉತಾರೆ ತೆಗೆದಾಗ ವಕ್ಫ್ ಹೆಸರು ಸೇರ್ಪಡೆ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೆ, ನೋಟಿಸ್ ನೀಡದೆಯೇ ವಕ್ಫ್ ಹೆಸರು ಸೇರ್ಪಡೆಯಾಗಿದೆ.