ಬಂದ್ ಹೆಸರಿನಲ್ಲಿ ಬಡವರ ಮೇಲೆ ಅಟ್ಟಹಾಸ

KannadaprabhaNewsNetwork |  
Published : Jan 02, 2025, 12:30 AM IST
ಬಂದ್ ಹೆಸರಿನಲ್ಲಿ ಬಡವರ ಮೇಲೆ ಅಟ್ಟಹಾಸ: ಉಮೇಶ ಕಾರಜೊಳ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ರಾಜ್ಯದ ಸಿಎಂನಿಂದ ಹಿಡಿದು ಎಲ್ಲ ಸಚಿವರೂ ರಾಜೀನಾಮೆ ಕೊಡಬೇಕು. ಸಚಿವ ಸಂಪುಟದಲ್ಲಿರುವ ಪ್ರತಿಯೊಬ್ಬರ ಮೇಲೂ ಒಂದಲ್ಲ ಒಂದು ಆರೋಪಗಳು, ಪ್ರಕರಣಗಳಿವೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯದ ಸಿಎಂನಿಂದ ಹಿಡಿದು ಎಲ್ಲ ಸಚಿವರೂ ರಾಜೀನಾಮೆ ಕೊಡಬೇಕು. ಸಚಿವ ಸಂಪುಟದಲ್ಲಿರುವ ಪ್ರತಿಯೊಬ್ಬರ ಮೇಲೂ ಒಂದಲ್ಲ ಒಂದು ಆರೋಪಗಳು, ಪ್ರಕರಣಗಳಿವೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದರು.

ನಗರದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.30ರಂದು ವಿಜಯಪುರ ಬಂದ್ ಕರೆ ಕೊಟ್ಟ ಮಹಾನುಭಾವರು ಡಾ.ಬಾಬಾಸಾಹೇಬರ ಕ್ಷಮೆ ಕೇಳಬೇಕು. ಏಕೆಂದರೆ ಬಡ ಮಹಿಳೆಯ ಮೇಲೆ ಅಟ್ಟಹಾಸ ಮೆರೆದು ಹೂವಿನ ವ್ಯಾಪಾರ ಹಾಳು ಮಾಡುತ್ತಾರೆ. ತೆಂಗಿನಕಾಯಿ ವ್ಯಾಪಾರಿ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಇನ್ನೊಂದೆಡೆ ಅಂಗಡಿಗಳ ದರೋಡೆ ಮಾಡುವ ರೀತಿ ನಡೆದುಕೊಂಡಿದ್ದಾರೆ. ಮತ್ತೊಂದೆಡೆ ದೊಡ್ಡ ದೊಡ್ಡ ಮುಖಂಡರೇ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಿದರು.ಬಂದ್ ಹೆಸರಿನಲ್ಲಿ ಬೀದಿ ಬದಿ ವ್ಯಾಪಾರಸ್ಥರು ಹಾಗೂ ಬಡವರ ಮೇಲೆ ತಮ್ಮ ಪೌರುಷ ತೋರಿಸಿದ್ದಾರೆ. ಅಲ್ಲದೆ ಬಿಜೆಪಿ ನಾಯಕರಿಗೆ ಪ್ರತಿಭಟನಾಕಾರರು ಅಸಾಂವಿಧಾನಿಕ ಶಬ್ದಗಳನ್ನು ಬಳಸಿ ಮನಸಿಗೆ ಬಂದಂತೆ ಬೈದಿದ್ದಾರೆ. ಇಷ್ಟಾದರೂ ಅವರ ಮೇಲೆ ಪೊಲೀಸರು ಸೊಮೋಟೊ ಕೇಸ್ ದಾಖಲಿಸಿಕೊಂಡಿಲ್ಲ. ಜಿಲ್ಲೆಯಲ್ಲಿ, ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಕಾನೂನು ಸುವ್ಯವಸ್ಥೆ ಸರಿಯಿಲ್ಲ. ಸಿ.ಟಿ.ರವಿ, ಬೀದರ್‌ನ ಗುತ್ತಿಗೆದಾರನ ಪ್ರಕರಣ ಸೇರಿದಂತೆ ಎಲ್ಲ ಪ್ರಕರಣಗಳಲ್ಲೂ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ದೂರಿದರು.

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗೋಪಾಲ ಘಟಕಾಂಬಳೆ ಮಾತನಾಡಿ, ಕಾಂಗ್ರೆಸ್ ನಾಯಕರು ಅಮಿತ್ ಶಾ ಅವರ ಬಗ್ಗೆ ಹಾಗೂ ಅವರ ನಾಯಕತ್ವಕ್ಕೆ ಚ್ಯುತಿ ತರುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಅಮಿತ್ ಶಾ, ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರು ಡಾ.ಅಂಬೇಡ್ಕರ ಅವರಿಗೆ ಕೊಟ್ಟ ಗೌರವವನ್ನು ಬೇರೆ ಯಾರೂ ಕೊಟ್ಟಿಲ್ಲ. ಕಾಂಗ್ರೆಸ್‌ನ ನೆಹರೂ ಅವರಿಂದ ಇಲ್ಲಿಯವರೆಗೆ ಡಾ.ಅಂಬೇಡ್ಕರ ಅವರನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ ಎಂಬುದರ ಬಗ್ಗೆ ಜನತೆಗೆ ಗೊತ್ತಿದೆ. ಅದನ್ನೇ ಅಮಿತ್ ಶಾ ಮಾತನಾಡಿದ್ದಾರೆ, ಹಾಗಾಗಿ ಅದನ್ನು ಸಹಿಸದೆ ಇವರು ಹೀಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಇಡೀ ದೇಶದ ದಲಿತರಿಗೆ ಕ್ಷಮೆ ಕೇಳಬೇಕು. ಅಂಬೇಡ್ಕರ ಅವರ ನಿಧನರಾದಾಗ ಹೇಗೆಲ್ಲ‌ ನಡೆಸಿಕೊಂಡಿದ್ದಾರೆ ಎಂಬುದರ ಬಗ್ಗೆ ಬಿಜೆಪಿಯವರು ಹೇಳಿದಾಗ ಕಾಂಗ್ರೆಸ್ ನವರಿಗೆ ಮುಜುಗುರ ಆಗುತ್ತಿರುವುದರಿಂದ ಈ ರೀತಿ ವಿವಾರ ಹುಟ್ಟಿಸುತ್ತಿದ್ದಾರೆ. ಅಂಬೇಡ್ಕರ ಅವರ ಪಂಚ ಕ್ಷೇತ್ರಗಳನ್ನು ಬಿಜೆಪಿಯವರು ಅಭಿವೃದ್ಧಿ ಮಾಡಿದ್ದಾರೆ. ಯಾವ ಪಕ್ಷ ಅಂಬೇಡ್ಕರ ಅವರಿಗೆ ಏನು ಮಾಡಿದೆ ಎಂಬ ಸತ್ಯಾಸತ್ಯತೆ ಅರಿತು ಹೋರಾಟ ಮಾಡಬೇಕು ಎಂದು ದಲಿತ ಸಂಘಟನೆಗಳಿಗೆ ಹಾಗೂ ನಾಯಕರಿಗೆ ಮನವಿ ಮಾಡಿದರು.

ಬಿಜೆಪಿ ಎಸ್ಸಿಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಮೀಸಿ ಮಾತನಾಡಿ, ವಿಜಯಪುರ ಬಂದ್ ವೇಳೆ ಪ್ರತಿಭಟನಾಕಾರರು ಬಡವರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡನೋರ್ವ ಅಂಗಡಿಕಾರರ ಮೇಲೆ ದೌರ್ಜನ್ಯ ಎಸಗಿ, ಹಲ್ಲೆ ಮಾಡಿ ಓಡಿಸುತ್ತಾರೆ. ಈ ವೇಳೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಏನು ಮಾಡುತ್ತಿವೆ?. ಅಮಾಯಕರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಮಹೇಂದ್ರ ನಾಯ್ಕ, ಮಲ್ಲಿಕಾರ್ಜುನ ದೇವರಮನಿ, ಚಿದಾನಂದ ಛಲವಾದಿ, ಶ್ರೀನಿವಾಸ ಕಂದಗಲ್ಲ, ವಿಜಯ ಜೋಶಿ, ಮಕಣಾಪುರ ಉಪಸ್ಥಿತರಿದ್ದರು.

ಕೋಟ್‌

ಬಂದ್‌ ವೇಳೆ ತೆಂಗಿನಕಾಯಿ ವ್ಯಾಪಾರಿ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಅಂಗಡಿಗಳ ದರೋಡೆ ಮಾಡುವ ರೀತಿ ನಡೆದುಕೊಂಡಿದ್ದಾರೆ. ದೊಡ್ಡ ದೊಡ್ಡ ಮುಖಂಡರೇ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಬಂದ್ ಹೆಸರಿನಲ್ಲಿ ಬೀದಿ ಬದಿ ವ್ಯಾಪಾರಸ್ಥರು ಹಾಗೂ ಬಡವರ ಮೇಲೆ ತಮ್ಮ ಪೌರುಷ ತೋರಿಸಿದ್ದಾರೆ. ಬಿಜೆಪಿ ನಾಯಕರಿಗೆ ಪ್ರತಿಭಟನಾಕಾರರು ಅಸಂವಿಧಾನಿಕ ಶಬ್ದಗಳನ್ನು ಬಳಸಿ ಮನಸ್ಸಿಗೆ ಬಂದಂತೆ ಬೈದಿದ್ದಾರೆ. ಇಷ್ಟಾದರೂ ಅವರ ಮೇಲೆ ಪೊಲೀಸರು ಸೊಮೋಟೊ ಕೇಸ್ ದಾಖಲಿಸಿಕೊಂಡಿಲ್ಲ. ಜಿಲ್ಲೆಯಲ್ಲಿ, ರಾಜ್ಯದಲ್ಲಿ ಕಾನೂನು ಸುವ್ಯಸವ್ಥೆ ಸರಿಯಿಲ್ಲ.

ಉಮೇಶ ಕಾರಜೋಳ, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!