ಹುಬ್ಬಳ್ಳಿ:
ವರ್ಧಂತಿ ಮಹೋತ್ಸವದ ನಿಮಿತ್ತ ಹುಬ್ಬಳ್ಳಿಗೆ ಆಗಮಿಸಿದ ಹರಿಹರಪುರದ ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀ ನರಸಿಂಹ ಪೀಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಶ್ರೀಗಳ ಭವ್ಯ ಶೋಭಾಯಾತ್ರೆಯು ನಗರದಲ್ಲಿ ಮಂಗಳವಾರ ಸಂಭ್ರಮದಿಂದ ಜರುಗಿತು.ಇಲ್ಲಿನ ಗೋಕುಲ ರಸ್ತೆಯ ಹವ್ಯಕ ಭವನದಿಂದ ಆರಂಭವಾದ ಶೋಭಾಯಾತ್ರೆಯು ಗೋಕುಲ ಗಾರ್ಡ್‌ನ ತಲುಪಿ ಮರಳಿ ಭವನಕ್ಕೆ ಮರಳಿತು.
ಈ ವೇಳೆ ಮಹಿಳೆಯರು ಆಕರ್ಷಕ ಕೋಲಾಟ ನೃತ್ಯ ಪ್ರದರ್ಶಿಸಿದರು. ಇನ್ನು ಕೆಲವರು ಭಾಗವಧ್ವಜ ಹಿಡಿದು ಮೆರವಣಿಗೆಗೆ ಸಾಥ್ ನೀಡಿದರು. ಗೊಂಬೆ ಕುಣಿತ, ವಾದ್ಯ ಮೇಳವು ಶೋಭಾಯಾತ್ರೆಗೆ ಮೆರಗು ತಂದಿತು. ಭಕ್ತರು ದಾರಿಯುದ್ದಕ್ಕೂ ರಂಗೋಲಿ ಬಿಡಿಸಿದ್ದಲ್ಲದೇ ಶ್ರೀಗಳಿಗೆ ಪುಷ್ಪ ಸಮರ್ಪಿಸಿ ಸಂತಸಪಟ್ಟರು.ಶೋಭಾಯಾತ್ರೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಪ್ರಮುಖರಾದ ಎ.ಸಿ. ಗೋಪಾಲ, ವೀಣಾ ಹೆಗಡೆ, ಮಲ್ಲಿಕಾರ್ಜುನ ಬಾಳಿಕಾಯಿ, ಸುರೇಶ ಶೇಜವಾಡಕರ, ಕೌಸ್ತುಭ ಕುಲಕರ್ಣಿ, ಸುಧಾಕರ ಶೆಟ್ಟಿ, ವಿವೇಕ ಹೆಗಡೆ, ರತ್ನಾಕರ ಶೆಟ್ಟಿ, ರಘು ಯಲ್ಲಕ್ಕನವರ, ಮನೋಹರ ಪರ್ವತಿ, ಅಪ್ಪಯ್ಯ ನಾಲತ್ವಾಡಮಠ ಸೇರಿದಂತೆ ಹಲವರಿದ್ದರು. ಶೋಭಾಯಾತ್ರೆಯ ಮೊದಲು ಹವ್ಯಕ ಭವನದಲ್ಲಿ ಶ್ರೀಚಕ್ರ ನವಾವರಣ ಪೂಜೆ, ಮಂತ್ರಾಕ್ಷತೆ, ತೀರ್ಥ-ಪ್ರಸಾದ ವಿತರಣೆ ನಡೆಯಿತು.
ಇಂದಿನ ಕಾರ್ಯಕ್ರಮ:ಶ್ರೀಗಳ ವರ್ಧಂತಿ ಮಹೋತ್ಸವ ನಿಮಿತ್ತ ಜು. 3ರಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 7.30ಕ್ಕೆ ಹವ್ಯಕ ಭವನದಲ್ಲಿ ಶ್ರೀಗಳ ವಿಶೇಷ ಅಹ್ನಿಕ ದರ್ಶನ, 9ಕ್ಕೆ ನರಸಿಂಹ ಸಹಸ್ರನಾಮದ ಮಹಾಸಮರ್ಪಣೆ, 10.30ಕ್ಕೆ ಚಂಡಿಕಾ ಹೋಮ, ಅಯುಷ್ಯ ಹೋಮ, ರುದ್ರ ಹೋಮ, ಪವಮಾನ ಸೂಕ್ತ ಹೋಮ, ಗುರು ಗಾಯತ್ರಿ ಹೋಮದ ಪೂರ್ಣಾಹುತಿ ನಡೆಯಲಿದೆ. 11ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ, ಸಂಸದರಾದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ತೇಜಸ್ವಿ ಸೂರ್ಯ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೇರಿದಂತೆ ಹಲವರು ಪಾಲ್ಗೊಳ್ಳುವರು. ನಂತರ ಶ್ರೀಗಳಿಂದ ಆಶೀರ್ವಚನ ಕಾರ್ಯಕ್ರಮ ನೆರವೇರಲಿದೆ. ಮಧ್ಯಾಹ್ನ 12.30ಕ್ಕೆ ಶ್ರೀಗಳಿಗೆ ಭಕ್ತರಿಂದ ಭಿಕ್ಷಾವಂದನೆ ಸಮರ್ಪಣೆ, 1.30ಕ್ಕೆ ಮಹಾ ಪ್ರಸಾದ ನಡೆಯಲಿದೆ.