ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೆಲವು ತಿಂಗಳ ಹಿಂದೆ ಇಲ್ಲಿನ ನಿವಾಸಿ ಕಂಬೇಯಂಡ ರಾಜ ದೇವಯ್ಯ ಕಾಡಾನೆ ದಾಳಿಗೆ ಮೃತರಾಗಿದ್ದರು. ಅವರ ಸಹೋದರ ಅನು ಸುಬ್ಬಯ್ಯ ಅಂಗವಿಕಲತೆಗೆ ಒಳಗಾಗಿದ್ದಾರೆ. ನಿರಂತರವಾದ ದಾಳಿಯಿಂದ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಆಟೋ ಚಾಲಕ ದೇವಯ್ಯ ಮಾತನಾಡಿ, ಕಕ್ಕಬ್ಬೆಯಲ್ಲಿ ಆಟೋ ಚಾಲಕರಾಗಿ ತಾನು ಕರ್ತವ್ಯ ನಿರ್ವಹಿಸುತ್ತಿದ್ದು ರಾತ್ರಿ ಆಟೋ ನಿಲ್ಲಿಸಲಾಗಿತ್ತು. ಸೋಮವಾರ ಮಧ್ಯರಾತ್ರಿ ಕಾಡಾನೆಯೊಂದು ಆಟೋವನ್ನು ಜಖಂಗೊಳಿಸಿದ್ದು ಬಳಿಕ ತೋಟಗಳಿಗೆ ನುಗ್ಗಿ ದಾಂದಲೆ ಮಾಡಿದೆ.ಕಳೆದ ಕೆಲವು ದಿನಗಳಿಂದ ಕಾಡಾನೆಗಳು ಸಂಕಷ್ಟ ತಂದೊಡ್ಡುತ್ತಿವೆ.ಅರಣ್ಯ ಇಲಾಖೆ ಸೂಕ್ತಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.ಕಕ್ಕಬ್ಬೆ ಉಪವಲಯ ಅರಣ್ಯ ಸಂರಕ್ಷಣಾಧಿಕಾರಿ ಫಿರೋಜ್ ಖಾನ್ ಮಾತನಾಡಿ, ಕಾಡಾನೆ ದಾಂದಲೆ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ದೊರೆತಿದ್ದು ಈ ಜಾಗವನ್ನು ಪರಿಶೀಲನೆ ಮಾಡಿಸಲಾಗಿದೆ. ದೇವಯ್ಯ ಅವರಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಸ್ಥಳಕ್ಕೆ ಕಕ್ಕಬೆ ಆಟೋ ಚಾಲಕರ ಸಂಘದ ಅಧ್ಯಕ್ಷ ಕೋಮಲ್ ಸೂರ್ಯ, ಇತರ ಚಾಲಕರು, ಅರಣ್ಯ ಇಲಾಖೆ ಸಿಬ್ಬಂದಿ ಕಾಳೇಗೌಡ, ಸೋಮೇಗೌಡ, ಮಂಜುನಾಥ, ಮುತ್ತಣ್ಣ, ಕಾವೇರಪ್ಪ, ಕಾರ್ತಿಕ್ ಇನ್ನಿತರರು ಭೇಟಿ ನೀಡಿದರು .ಕೃಷಿ ಫಸಲು ಧ್ವಂಸಸುಂಟಿಕೊಪ್ಪ: ಅತ್ತೂರು ನಲ್ಲೂರು ಗ್ರಾಮದ ಕಡ್ಲೆಮನೆಯ ರಘುಕುಮಾರ ಎಂಬವರ ಮನೆಯ ಸಮೀಪದಲ್ಲಿರುವ ತೋಟಕ್ಕೆ ಆಹಾರ ಅರಸಿ ಬಂದ ಕಾಡಾನೆಗಳ ಹಿಂಡು ಕೃಷಿಫಸಲು ತಿಂದು ಧ್ವಂಸಗೊಳಿಸಿದೆ.
ಸೋಮವಾರ ಮಧ್ಯರಾತ್ರಿ 1 ಗಂಟೆಯ ಸಮಯದಲ್ಲಿ ತೋಟಕ್ಕೆ ಕಾಡಾನೆಗಳ ಹಿಂಡು ಲಗ್ಗೆ ಇಟ್ಟಿದ್ದು ತೋಟದಲ್ಲಿ ಬೆಳೆಸಲಾದ ಬಾಳೆಗಿಡಗಳನ್ನು ಸಂಪೂರ್ಣ ತಿಂದು ನಾಶಪಡಿಸಿದೆ. ಕಾಡಾನೆಗಳ ಹಿಂಡು ತೋಟಗಳಲ್ಲಿಯೇ ಬೀಡು ಬಿಟ್ಟಿದೆ. ಈ ಭಾಗದ ಬಹುತೇಕ ತೋಟಗಳಲ್ಲಿ ದಾಳಿ ನಡೆಸುವ ಮೂಲಕ ಕೃಷಿ ಫಸಲು ಹಾನಿಗೊಳಿಸುತ್ತಿದೆ. ಈ ಭಾಗದಲ್ಲಿ ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಆಗಿಂದಾಗೆ ಕಾಡಾನೆಗಳನ್ನು ಕಾಡಿಗೆ ಅಟ್ಟಲಾಗುತ್ತಿದ್ದರೂ, ಮರುದಿನ ಮತ್ತೆ ಅದೇ ಸ್ಥಳಗಳಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿ ಮತ್ತಷ್ಟು ದಾಂದಲೆ ನೆಡೆಸುತ್ತಿದೆ ಎಂದು ರಘುಕುಮಾರ್ ಅಳಲು ತೋಡಿಕೊಂಡಿದ್ದಾರೆ.ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಡಾನೆಗಳನ್ನು ಕಾಡಿಗೆ ಅಟ್ಟುವುದರೊಂದಿಗೆ ಶಾಶ್ವತ ಪರಿಹಾರಕ್ಕೆ ಚಿಂತನೆ ನಡೆಸುವಂತಾಗಬೇಕೆಂದು ಅರಣ್ಯ ಇಲಾಖೆಯನ್ನು ಕೃಷಿಕ ರಘುಕುಮಾರ ಒತ್ತಾಯಿಸಿದ್ದಾರೆ.