ಬಸವಕಲ್ಯಾಣದಲ್ಲಿ ನಡೆಯಲಿರುವ ಚನ್ನಬಸವ ಶಿವಯೋಗಿಗಳ 72ನೇ ಜಾತ್ರಾ ಮಹೋತ್ಸವದಲ್ಲಿ ರಾಜ್ಯದ ಸಚಿವರು, ಶಾಸಕರು, ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ. ಮೂರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. 5 ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳಲಿದ್ದಾರೆ̤
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಹಾರಕೂಡ ಚನ್ನಬಸವ ಶಿವಯೋಗಿಗಳ 72ನೇ ಜಾತ್ರಾ ಮಹೋತ್ಸವ ಇದೇ ಜ. 16ರಂದು ಆರಂಭವಾಗಲಿದ್ದು ಜಾತ್ರೆಯಲ್ಲಿ ರಾಜ್ಯದ ಹೊರ ರಾಜ್ಯದ ಸಚಿವರು, ಶಾಸಕರು ಹಾಗೂ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ.
ಅಂದು ಬೆಳಗ್ಗೆ 8ಕ್ಕೆ ಅಭಿಷೇಕ, ಸಂಜೆ 4ಕ್ಕೆ ಪಲ್ಲಕ್ಕಿ ಉತ್ಸವ, 6ಕ್ಕೆ ರಥೋತ್ಸವ ಹಾಗೂ 7ಕ್ಕೆ ಶಿವಾನುಭವ ಚಿಂತನೆ ಜರುಗಲಿದೆ. ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು, ಕಲಾವಿದರು ಭಾಗವಹಿಸುತ್ತಾರೆ ಇದನ್ನು ನೋಡುವುದೇ ಹಬ್ಬ.
ಧಾರ್ಮಿಕ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಳ್ಳುತ್ತಾರೆ. ಪೂಜ್ಯರ ಅಮೃತವಾಣಿ ಕೇಳಲು ಭಕ್ತಾದಿಗಳು ಆಗಮಿಸಿ ಚನ್ನಬಸವ ಶಿವಯೋಗಿಗಳ ಆಶೀರ್ವಾದ ಪಡೆಯಬೇಕೆಂದು ಸ್ವಾಗತ ಸಮಿತಿಯ ಜಗನ್ನಾಥ ಪಾಟೀಲ್ ಮಂಠಾಳ ಮನವಿ ಮಾಡಿದ್ದಾರೆ.
ಕಾರ್ಯಕ್ರಮದ ಸಾನ್ನಿಧ್ಯವನ್ನು ವಿಜಪೂರ- ಗದಗನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ನಿರ್ಭಯಾನಂದ ಸರಸ್ವತಿ ಮಹಾರಾಜರು, ಬೀದರ್ ಆಶ್ರಮದ ಅಧ್ಯಕ್ಷರಾದ ಜ್ಯೋತಿರ್ಮಯಾನಂದ ಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದು, ನೇತೃತ್ವವನ್ನು ಹಾರಕೂಡ ಹಿರೇಮಠ ಸಂಸ್ಥಾನದ ಡಾ. ಚನ್ನವೀರ ಶಿವಾಚಾರ್ಯರು ವಹಿಸಲಿದ್ದಾರೆ. ಕೇಂದ್ರ ಸಚಿವ ಭಗವಂತ ಖೂಬಾ ಕಾರ್ಯಕ್ರಮ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಸಣ್ಣ ಕೈಗಾರಿಕೆಗಳ ಸಚಿವ ಶರಣಬಸಪ್ಪ ದರ್ಶನಾಪೂರ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್ ಧರ್ಮಸಿಂಗ್, ಶಾಸಕರಾದ ಶರಣು ಸಲಗರ, ಸಿದ್ಧಲಿಂಗಪ್ಪ ಪಾಟೀಲ್, ಭೀಮರಾವ್ ಪಾಟೀಲ್, ಬಸವರಾಜ ಮತ್ತಿಮೂಡ, ಉದ್ಯಮಿ ಧನರಾಜ ತಾಳಂಪಳ್ಳಿ ಹಾಗೂ ಜಿಪಂ ಮಾಜಿ ಸದಸ್ಯ ರಾಜೇಶ ಜಗದೇವ ಗುತ್ತೇದಾರ ಭಾಗವಹಿಸಲಿದ್ದಾರೆ.
ಜ. 17ರಂದು ಮಧ್ಯಾಹ್ನ 2ಕ್ಕೆ ಪೈಲವಾನರ ಥೇಟರ್ ಜಂಗಿ ಕುಸ್ತಿಗಳು ನಡೆಯಲಿದ್ದು ಡಾ. ಚೆನ್ನವೀರ ಶಿವಾಚಾರ್ಯರು ನೇತೃತ್ವ ವಹಿಸಲಿದ್ದು ಜಯಶಾಂತಲಿಂಗ ಮಹಾಸ್ವಾಮಿಗಳು ಸಮ್ಮುಖವಹಿಸಲಿದ್ದಾರೆ. ಅಭಿನವ ಚನ್ನಬಸವ ಮಹಾಸ್ವಾಮಿಗಳು, ಚನ್ನಮಲ್ಲ ಮಹಾಸ್ವಾಮಿಗಳು ಉಪಸ್ಥಿತರಿರಲಿದ್ದಾರೆ.
ಆಳಂದ ಶಾಸಕ ಬಿ.ಆರ್ ಪಾಟೀಲ್ ಅವರು ಅಧ್ಯಕ್ಷತೆ ವಹಿಸಲಿದ್ದು ಮಾಜಿ ಸಚಿವ ರಾಜಶೇಖರ ಪಾಟೀಲ್ ಥೇಟರ್ ಕುಸ್ತಿ ಉದ್ಘಾಟಿಸಲಿದ್ದಾರೆ.
ರಾಜಕೀಯ ಮುಖಂಡರು ಭಾಗಿ: ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ್, ಮಾಜಿ ಸಚಿವ ಬಸವರಾಜ ಪಾಟೀಲ್ ಅಟ್ಟೂರ್, ರೇವು ನಾಯಕ ಬೆಳಮಗಿ, ಮಾಜಿ ಶಾಸಕ ಎಂಜಿ ಮೂಳೆ, ಸುಭಾಸ ಗುತ್ತೇದಾರ, ಮಲ್ಲಿಕಾರ್ಜುನ ಖೂಬಾ, ರಾಜಕುಮಾರ ಪಾಟೀಲಲ್ ತೆಲ್ಕೂರ, ವಿಜಯಸಿಂಗ್, ಮಲ್ಲಮ್ಮ ನಾರಾಯಣರಾವ್, ಬಸವರಾಜ ಕೋರಕೆ, ಬಾಬು ಹೊನ್ನಾನಾಯಕ ಹಾಗೂ ಸಿದ್ರಾಮಪ್ಪ ಗುದಗೆ ಪಾಲ್ಗೊಳ್ಳಲಿದ್ದಾರೆ.
ಜ.18ರಂದು ಪಶು ಪ್ರದರ್ಶನ ಹಾಗೂ ಉತ್ತಮ ಪಶುಗಳಿಗೆ ಬಹುಮಾನ ವಿತರಣೆ ಎಂದು ಜಾತ್ರಾ ವ್ಯವಸ್ಥಾಪಕರಾದ ಜಗನ್ನಾಥ ಪಾಟೀಲ್ ಮಂಠಾಳ ತಿಳಿಸಿದರು.