ಸಿರುಗುಪ್ಪ: ತಾಲೂಕಿನ ನಾಗರಹಾಳು ಗ್ರಾಮದ ಬೃಹನ್ಮಠದಲ್ಲಿ ಏಕೀಕರಣ ಹೋರಾಟಗಾರರಾದ ಶರಣ ದೊಡ್ಡಯ್ಯಶಾಸ್ತ್ರಿಗಳ, ಬಸವಮ್ಮ ಅವ್ವನವರ ಪುಣ್ಯಾರಾಧನೆ ಅಂಗವಾಗಿ ಬುಧವಾರ ಆರು ಜೋಡಿ ಉಚಿತ ಸಾಮೂಹಿಕ ವಿವಾಹಗಳು ಜರುಗಿದವು.ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಪರಮಪೂಜ್ಯ ಸಿದ್ದಲಿಂಗಸ್ವಾಮೀಜಿ ಆಶೀರ್ವಚನ ನೀಡಿ, ಸಾಮೂಹಿಕ ವಿವಾಹ ಕಾರ್ಯಕ್ರಮಗಳಿಂದ ಸೌಹಾರ್ದ, ಸಾಮರಸ್ಯ, ಪರಸ್ಪರ ಬಾಂಧವ್ಯ ಬೆಳೆಯಲಿದೆ ಎಂದರು.
ಪುಣ್ಯಾರಾಧನೆ ಅಂಗವಾಗಿ ಹಮ್ಮಿಕೊಂಡಿದ್ದ ಎಡೆಯೂರ ಸಿದ್ದಲಿಂಗ ಶಿವಯೋಗಿಗಳ ಪುರಾಣ ಪ್ರವಚನ ಮಹಾಮಂಗಲಗೊಂಡಿತು. ಗಡಿನಾಡ ಕನ್ನಡ ಸಾಹಿತಿ ನಾ.ಮ. ಮರುಳಾರಾಧ್ಯರ ಪುರಾಣ ಪ್ರವಚನಕ್ಕೆ ಎನ್.ಎಂ. ಜಗದೀಶ ಗವಾಯಿಗಳ ಪುರಾಣ ವಾಚನ ಮತ್ತು ಹಾರ್ಮೋನಿಯಂ, ಧಾರವಾಡ ಪ್ರಸನ್ನಕುಮಾರ್ ಹಿರೇಮಠ ವಯೋಲಿನ್ ಮತ್ತು ಬಸವರಾಜ ಹೂಗಾರ್ ತಬಲಾ ಸಾಥ್ ನೀಡಿದರು.
ಶ್ರೀಮಠದಲ್ಲಿ ಕರ್ತೃ ಗದ್ದುಗೆಗೆ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು. ಕಾರ್ಯಕ್ರಮಕ್ಕೆ ಸಹಕರಿಸಿದ ಭಕ್ತರನ್ನು ಗೌರವಿಸಲಾಯಿತು.ವಿವಿಧ ಮಠಗಳ ಶ್ರೀಗಳು, ಹರಗುರು ಚರಮೂರ್ತಿಗಳು, ಶ್ರೀಮಠದ ಬಸವರಾಜಯ್ಯ ತಾತನವರು, ಶರಣ ದೊಡ್ಡಯ್ಯತಾತನವರ ಶಿವಾನುಭವ ಟ್ರಸ್ಟ್ ಪದಾಧಿಕಾರಿಗಳು, ಸಿರುಗುಪ್ಪ ತಾಲ್ಲೂಕಿನ ಮುಖಂಡರು, ನಾಗರಹಾಳು ಗ್ರಾಮ ಸೇರಿದಂತೆ ಸುತ್ತಲಿನ ಹಳ್ಳಿಗಳ ಶ್ರೀಮಠದ ಭಕ್ತರು ಭಾಗವಹಿಸಿದ್ದರು. ಸಂಜೆ ಶರಣ ದೊಡ್ಡಯ್ಯಶಾಸ್ತ್ರಿಗಳ, ಬಸವಮ್ಮ ಅವ್ವನವರ ರಥೋತ್ಸವ ಭಕ್ತರ ಜಯಘೋಷದೊಂದಿಗೆ ಸಂಭ್ರಮದಿಂದ ಜರುಗಿತು.
ಸಿರುಗುಪ್ಪ ತಾಲೂಕು ನಾಗರಹಾಳು ಗ್ರಾಮದ ಬೃಹನ್ಮಠದಲ್ಲಿ ಶರಣ ದೊಡ್ಡಯ್ಯಶಾಸ್ತ್ರಿ, ಬಸವಮ್ಮ ಅವ್ವನವರ ಪುಣ್ಯಾರಾಧನೆ ಅಂಗವಾಗಿ ಸಮನ್ವಯ ಸಂತರು ಹಾಗೂ ಸಾಗರದಮ್ಮದೇವಿ ಕೃತಿಯನ್ನು ಶರಣ ಬಸವರಾಜಯ್ಯಶಾಸ್ತ್ರಿ, ಬಿ. ಹನುಮಂತರೆಡ್ಡಿ, ತ್ರಿವೇಣಿ, ಗಣ್ಯರು ಬಿಡುಗಡೆ ಮಾಡಿದರು.