ಹಾಸನ ಮಹಾನಗರ ಪಾಲಿಕೆಯಿಂದ ರೈಲ್ವೆ ನಿಲ್ದಾಣ- ಜಿಲ್ಲಾಸ್ಪತ್ರೆ ಎದುರಿನ ಅನಧಿಕೃತ ಗೂಡಂಗಡಿಗಳ ತೆರವು

KannadaprabhaNewsNetwork |  
Published : Jul 03, 2026, 01:45 AM IST
2ಎಚ್ಎಸ್ಎನ್10ಎ :  | Kannada Prabha

ಸಾರಾಂಶ

ವ್ಯಾಪಾರಿಗಳು ಮಾತನಾಡಿ, ನಗರದ ಅನೇಕ ಕಡೆಗಳಲ್ಲಿ ಇದೇ ರೀತಿ ಬೀದಿಬದಿ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಆಯ್ದ ಕೆಲವರ ಅಂಗಡಿಗಳನ್ನು ಮಾತ್ರ ತೆರವುಗೊಳಿಸುವುದು ನ್ಯಾಯಸಮ್ಮತವಲ್ಲ. ಪಾಲಿಕೆಗೆ ಪ್ರತಿದಿನ ಶುಲ್ಕ ಪಾವತಿಸುತ್ತಿದ್ದರೂ ಯಾವುದೇ ಲಿಖಿತ ನೋಟಿಸ್ ನೀಡದೆ ಏಕಾಏಕಿ ತೆರವು ಕಾರ್ಯಾಚರಣೆ ನಡೆಸಿರುವುದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ರೈಲ್ವೆ ನಿಲ್ದಾಣ ಹಾಗೂ ಜಿಲ್ಲಾ ಸರ್ಕಾರಿ ಆಸ್ಪತ್ರೆ ಎದುರಿನ ಸಾರ್ವಜನಿಕ ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಗೂಡಂಗಡಿ, ತಳ್ಳುಗಾಡಿ ಹಾಗೂ ಬೀದಿಬದಿ ವ್ಯಾಪಾರ ಮಳಿಗೆಗಳನ್ನು ಹಾಸನ ಮಹಾನಗರ ಪಾಲಿಕೆ ಗುರುವಾರ ಬೆಳಗ್ಗೆ ಜೆಸಿಬಿ ಯಂತ್ರದ ಮೂಲಕ ತೆರವು ಕಾರ್ಯಾಚರಣೆ ನಡೆಸಿತು. ಪಾಲಿಕೆ ಆಯುಕ್ತ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ವೇಳೆ ಕೆಲ ವ್ಯಾಪಾರಿಗಳು ಹಾಗೂ ಆಟೋ ಚಾಲಕರು ತೀವ್ರ ವಿರೋಧ ವ್ಯಕ್ತಪಡಿಸಿದದರು.

ಬೆಳಗ್ಗೆಯೇ ಆರಂಭವಾದ ಕಾರ್ಯಾಚರಣೆಯಲ್ಲಿ ರೈಲ್ವೆ ರಸ್ತೆ ಮತ್ತು ಜಿಲ್ಲಾ ಆಸ್ಪತ್ರೆ ಎದುರಿನ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿಕೊಂಡಿದ್ದ ತಾತ್ಕಾಲಿಕ ಗೂಡಂಗಡಿಗಳನ್ನು ತೆರವುಗೊಳಿಸಲಾಯಿತು. ಜೆಸಿಬಿ ಯಂತ್ರದ ಮೂಲಕ ಅಂಗಡಿಗಳನ್ನು ತೆರವುಗೊಳಿಸುತ್ತಿದ್ದಂತೆ ಕೆಲ ವ್ಯಾಪಾರಿಗಳು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ, ಜೀವನೋಪಾಯ ಕಸಿದುಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವ್ಯಾಪಾರಿಗಳು ಮಾತನಾಡಿ, ನಗರದ ಅನೇಕ ಕಡೆಗಳಲ್ಲಿ ಇದೇ ರೀತಿ ಬೀದಿಬದಿ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಆಯ್ದ ಕೆಲವರ ಅಂಗಡಿಗಳನ್ನು ಮಾತ್ರ ತೆರವುಗೊಳಿಸುವುದು ನ್ಯಾಯಸಮ್ಮತವಲ್ಲ. ಪಾಲಿಕೆಗೆ ಪ್ರತಿದಿನ ಶುಲ್ಕ ಪಾವತಿಸುತ್ತಿದ್ದರೂ ಯಾವುದೇ ಲಿಖಿತ ನೋಟಿಸ್ ನೀಡದೆ ಏಕಾಏಕಿ ತೆರವು ಕಾರ್ಯಾಚರಣೆ ನಡೆಸಿರುವುದು ಸರಿಯಾದ ಕ್ರಮವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಡ ಕುಟುಂಬಗಳ ಜೀವನೋಪಾಯಕ್ಕೆ ಈ ಅಂಗಡಿಗಳೇ ಆಧಾರವಾಗಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸದೆ ತೆರವುಗೊಳಿಸಿರುವುದು ಸಂಕಷ್ಟಕ್ಕೆ ದೂಡಿದೆ ಎಂದು ಆರೋಪಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಮಹಾನಗರ ಪಾಲಿಕೆ ಆಯುಕ್ತ ಕೃಷ್ಣಮೂರ್ತಿ, ರೈಲ್ವೆ ರಸ್ತೆ ಹಾಗೂ ಜಿಲ್ಲಾ ಆಸ್ಪತ್ರೆ ಎದುರಿನ ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸುವ ಉದ್ದೇಶದಿಂದ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಗೂಡಂಗಡಿ ನಿರ್ಮಿಸಿ ವ್ಯಾಪಾರ ನಡೆಸುವುದು ನಿಯಮಬಾಹಿರ. ಬೆಳಗ್ಗೆ ೬ ಗಂಟೆಯಲ್ಲೇ ಸ್ಥಳ ಖಾಲಿ ಮಾಡುವಂತೆ ಎಚ್ಚರಿಕೆ ನೀಡಲಾಗಿತ್ತು. ಅದರಂತೆ ಬೆಳಗ್ಗೆ ೧೦ ಗಂಟೆಯಿಂದ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಜಿಲ್ಲಾ ಆಸ್ಪತ್ರೆ ಎದುರು ಆಹಾರ ಪದಾರ್ಥಗಳ ಮಾರಾಟ ನಡೆಯುತ್ತಿದ್ದು, ಸ್ವಚ್ಛತಾ ನಿಯಮಗಳನ್ನು ಪಾಲಿಸದಿರುವ ಬಗ್ಗೆ ನಿರಂತರ ದೂರುಗಳು ಬಂದಿದ್ದವು. ಪಾದಚಾರಿ ಮಾರ್ಗಗಳಲ್ಲಿ ಕಸ, ಬಳಸಿದ ಕಾಫಿ ಲೋಟಗಳು, ಎಣ್ಣೆ ಬಾಟಲಿಗಳು ಹಾಗೂ ಇತರ ತ್ಯಾಜ್ಯಗಳು ಬಿದ್ದಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತ್ತು. ಆಸ್ಪತ್ರೆ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.

ನಗರದಾದ್ಯಂತ ಹಂತಹಂತವಾಗಿ ಇದೇ ರೀತಿಯ ಅನಧಿಕೃತ ಅತಿಕ್ರಮಣಗಳನ್ನು ತೆರವುಗೊಳಿಸಲಾಗುವುದು. ಬಿ.ಎಂ. ರಸ್ತೆಯಲ್ಲೂ ಇತ್ತೀಚೆಗೆ ಹಣ್ಣಿನ ಅಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಎಲ್ಲೆಲ್ಲಿ ಸಾರ್ವಜನಿಕರಿಂದ ದೂರುಗಳು ಬರುತ್ತವೆಯೋ ಅಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಇದಕ್ಕೂ ಮುನ್ನ ಹಲವು ಬಾರಿ ಬಾಯಿಮಾತಿನ ಎಚ್ಚರಿಕೆ ಹಾಗೂ ಮನವರಿಕೆ ಮಾಡಿಕೊಡಲಾಗಿದ್ದರೂ ಅತಿಕ್ರಮಣ ತೆರವುಗೊಳಿಸದ ಹಿನ್ನೆಲೆಯಲ್ಲಿ ಈಗ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಆಯುಕ್ತರು ತಿಳಿಸಿದರು.

ಸಾರ್ವಜನಿಕರ ಸುರಕ್ಷತೆ, ಪಾದಚಾರಿಗಳ ಅನುಕೂಲ ಹಾಗೂ ನಗರ ಸ್ವಚ್ಛತೆಯನ್ನು ಕಾಪಾಡುವುದು ಪಾಲಿಕೆಯ ಪ್ರಮುಖ ಹೊಣೆಗಾರಿಕೆಯಾಗಿದೆ. ಆದ್ದರಿಂದ ತಳ್ಳುಗಾಡಿ ಹಾಗೂ ಗೂಡಂಗಡಿಗಳನ್ನು ಎಲ್ಲೆಂದರಲ್ಲಿ ಸ್ಥಾಪಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಅವರು ಹೇಳಿದರು.

ತೆರವು ಕಾರ್ಯಾಚರಣೆಯಲ್ಲಿ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು, ಕಂದಾಯ ವಿಭಾಗದ ಸಿಬ್ಬಂದಿ, ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಕಾರ್ಯಾಚರಣೆ ವೇಳೆ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾದರೂ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಬೇಡ್ಕರ್ ಸಂವಿಧಾನ ವಿಶ್ವಕ್ಕೆ ಶ್ರೇಷ್ಠ : ಸೋಮಶೇಖರ್‌
ಬಂಡೀಪುರ ಸಫಾರಿ ಕೇಂದ್ರ, ಶಾಲೆ ದೇಗುಲಕ್ಕೆ ಡೀಸಿ ಭೇಟಿ: ಪರಿಶೀಲನೆ