ನಾರಾಯಣ ಹೆಗಡೆ
ಹಾನಗಲ್ಲ ರಸ್ತೆಯ ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿ ಕೋಟ್ಯಂತರ ರು. ಖರ್ಚು ಮಾಡಿ ವರ್ಷದ ಹಿಂದೆಯೇ 28 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ತರಕಾರಿ ವ್ಯಾಪಾರಸ್ಥರಿಗೆ ನೀಡಲೆಂದು ಅವುಗಳನ್ನು ಮೀಸಲಿಡಲಾಗಿದೆ. ಆದರೆ, ಇದುವರೆಗೆ ಮಳಿಗೆಗಳನ್ನು ವ್ಯಾಪಾರಸ್ಥರಿಗೆ ಹಂಚಿಕೆ ಮಾಡದ್ದರಿಂದ ಪಾಳು ಬೀಳುತ್ತಿದೆ. ಇತ್ತ ತರಕಾರಿ ವ್ಯಾಪಾರಸ್ಥರು ಕಾಳುಕಡಿ ಮಾರುಕಟ್ಟೆ ಆವರಣದ ರಸ್ತೆಯಲ್ಲೇ ಅನಿವಾರ್ಯವಾಗಿ ತರಕಾರಿ ಹರಾಜು ನಡೆಸುತ್ತಿದ್ದಾರೆ. ಅತ್ತ ಎಪಿಎಂಸಿಗೆ ಬರಲಿದ್ದ ಆದಾಯವೂ ಇಲ್ಲದಂತಾಗಿದೆ.
ಪುಂಡರ ಅಡ್ಡೆಯಾಗುತ್ತಿದೆ ಮಳಿಗೆ: ತರಕಾರಿ ವ್ಯಾಪಾರ ಮಾಡುವ ದಲಾಲರಿಗೆ ಅನುಕೂಲವಾಗಲೆಂದು ಕಟ್ಟಿಸಿರುವ ಮಳಿಗೆಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಳು ಬೀಳುತ್ತಿದೆ. ಕೆಲವು ಮಳಿಗೆಗಳ ಷಟರ್ಸ್‌ಗಳನ್ನು ಎತ್ತಲಾಗಿದ್ದು, ಪುಂಡ-ಪೋಕರ ಅಡ್ಡೆಯಾಗುತ್ತಿರುವ ಬಗ್ಗೆ ಸುತ್ತಮುತ್ತಲಿನ ವ್ಯಾಪಾರಸ್ಥರು ಹೇಳುತ್ತಿದ್ದಾರೆ. ರಾತ್ರಿ ವೇಳೆ ಕುಡುಕರ ಹಾವಳಿ ಹೆಚ್ಚುತ್ತಿದೆ. ದನದ ಸಂತೆ ದಿನ ಮಳಿಗೆಗಳು ಕುರಿ ದೊಡ್ಡಿಯಾಗುತ್ತಿದೆ. ಇಷ್ಟಾದರೂ ಎಚ್ಚೆತ್ತುಕೊಳ್ಳದ ಎಪಿಎಂಸಿ ಆಡಳಿತ ವಿವಿಧ ಕಾರಣ ಹೇಳುತ್ತಿರುವುದರಿಂದ ಸರ್ಕಾರದ ಕೋಟ್ಯಂತರ ರು. ಅನುದಾನ ವ್ಯರ್ಥವಾಗಿದೆ.ದಲಾಲರಿಗೆ ಸಮಸ್ಯೆ: ತರಕಾರಿ ದಲಾಲರು ಕಾಳುಕಡಿ ಮಾರುಕಟ್ಟೆ ಆವರಣದ ರಸ್ತೆ ಮಧ್ಯೆಯೇ ದಿನನಿತ್ಯ ಕಾಯಿಪಲ್ಲೆ ಹರಾಜು ಮಾಡುವ ಪರಿಸ್ಥಿತಿಯಿದೆ. ಈ ಮಳಿಗೆಗಳನ್ನು ನೀಡಿದರೆ ಯಾವ ತೊಂದರೆಯೂ ಇಲ್ಲದೇ ತರಕಾರಿ ಹರಾಜು ಪ್ರಕ್ರಿಯೆಗೆ ಅನುಕೂಲವಾಗಲಿದೆ. ಅಲ್ಲದೇ ಕಾಳುಕಡಿ ಮಾರುಕಟ್ಟೆ ಪ್ರಾಂಗಣದ ರಸ್ತೆಯೂ ತೆರವಾಗುತ್ತದೆ. ಆದರೆ, ಎಪಿಎಂಸಿ ಆಡಳಿತದ ನಿರ್ಲಕ್ಷ್ಯದಿಂದ ದಲಾಲರಿಗೆ ಸಮಸ್ಯೆಯಾಗಿದೆ.
ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ಮಿಸಿರುವ ಮಳಿಗೆಗಳನ್ನು ಹಂಚಿಕೆ ಮಾಡುವ ಸಂಬಂಧ ಮತ್ತೊಮ್ಮೆ ಟೆಂಡರ್ ಕರೆಯಲಾಗಿದೆ. ಪರವಾನಗಿ ಪಡೆದ ತರಕಾರಿ ವ್ಯಾಪಾರಸ್ಥರು ಟೆಂಡರ್ ಹಾಕಬಹುದಾಗಿದ್ದು, ಜು. 15ರ ವರೆಗೆ ಅವಕಾಶವಿದೆ. ಆದಷ್ಟು ಬೇಗ ಪ್ರಕ್ರಿಯೆ ಪೂರ್ಣಗೊಳಿಸಿ ಹಂಚಿಕೆ ಮಾಡಲಾಗುವುದು ಎಂದು ಹಾವೇರಿ ಎಪಿಎಂಸಿ ಕಾರ್ಯದರ್ಶಿ ಜಿ.ಬಿ. ಕಬ್ಬೇರಹಳ್ಳಿ ಹೇಳಿದರು.