ಹಾವೇರಿ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ-ವೆಂಕಟೇಶ ಆಗ್ರಹ

KannadaprabhaNewsNetwork |  
Published : Jul 18, 2026, 12:45 AM IST
ವೆಂಕಟೇಶ ನಾರಾಯಣಿ | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಎಂದು ಘೋಷಿಸಬೇಕು. ಸರ್ಕಾರ ತಕ್ಷಣವೇ ರೈತರ ನೆರವಿಗೆ ಬರಬೇಕು ಎಂದು ಬಿಜೆಪಿ ಮುಖಂಡ ವೆಂಕಟೇಶ ನಾರಾಯಣಿ ಆಗ್ರಹಿಸಿದರು.

ಹಾವೇರಿ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಎಂದು ಘೋಷಿಸಬೇಕು. ಸರ್ಕಾರ ತಕ್ಷಣವೇ ರೈತರ ನೆರವಿಗೆ ಬರಬೇಕು ಎಂದು ಬಿಜೆಪಿ ಮುಖಂಡ ವೆಂಕಟೇಶ ನಾರಾಯಣಿ ಆಗ್ರಹಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ಜಿಲ್ಲೆಯ ಆರ್ಥಿಕ ವ್ಯವಸ್ಥೆಯು ರೈತರನ್ನೇ ಅವಲಂಬಿಸಿದ್ದು, ಸಕಾಲದಲ್ಲಿ ಮಳೆಯಾಗದ ಕಾರಣ ಬೆಳೆಗಳು ಹಾನಿಗೊಳಗಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.

2025-26ನೇ ಸಾಲಿನ ಬಾಕಿ ಉಳಿದಿರುವ ಬೆಳೆವಿಮೆ ಪರಿಹಾರವನ್ನು ಕೂಡಲೇ ರೈತರ ಖಾತೆಗಳಿಗೆ ಬಿಡುಗಡೆ ಮಾಡಬೇಕು. ಇತ್ತೀಚೆಗೆ ನಡೆಸಿದ ಮೋಡ ಬಿತ್ತನೆ ವೈಜ್ಞಾನಿಕ ರೀತಿಯಲ್ಲಿ ನಡೆದಿಲ್ಲ. ಮಳೆಯ ವಾತಾವರಣವಿದ್ದ ದಿನವೇ ಮೋಡ ಬಿತ್ತನೆ ನಡೆಸಿರುವುದರಿಂದ ಸಹಜವಾಗಿ ಬರಬೇಕಿದ್ದ ಮಳೆಯೂ ಬಾರದೆ ರೈತರಿಗೆ ಅನ್ಯಾಯವಾಗಿದೆ. ಅಲ್ಲದೇ ರೈತರು ಮಳೆಯಾಗುತ್ತದೆ ಎಂದು ಭಾವಿಸಿ ಬಿತ್ತನೆ ಮಾಡಿ ಗೊಬ್ಬರ ಖರೀದಿಸಿದ್ದಾರೆ. ಪ್ರಸ್ತುತ ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರ ತಕ್ಷಣವೇ ಬೆಳೆ ಪರಿಹಾರ ಘೋಷಿಸಬೇಕು. ಜಿಲ್ಲೆಯಲ್ಲಿ ನದಿಗಳಿಗೆ ನೀರು ಹರಿಯುವ ಸಂದರ್ಭದಲ್ಲೇ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಆದ್ಯತೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಸಹಕಾರ ಸಂಘಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಕೃಷಿ ಸಾಲದ ಬಲವಂತದ ವಸೂಲಾತಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ಬೆಳೆವಿಮೆ ಸ್ವಯಂ ಘೋಷಣಾ ಪತ್ರದ ನಿಯಮಗಳಲ್ಲಿ ಸಡಿಲಿಕೆ ತರಲು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.

ಹಾವೇರಿ ಜಿಲ್ಲೆಯಲ್ಲಿ ಸುಮಾರು ಶೇ. 44ರಷ್ಟು ಮಳೆ ಕೊರತೆ ದಾಖಲಾಗಿದ್ದು, ಹಾವೇರಿ ತಾಲೂಕಿನಲ್ಲಿಯೂ ಇದೇ ಪ್ರಮಾಣದ ಕೊರತೆ ಇದೆ. ಆದ್ದರಿಂದ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎದು ಘೋಷಿಸಬೇಕು. ಅಲ್ಲದೆ, ಜಿಲ್ಲೆಯ ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ವರದಾ-ಬೇಡ್ತಿ ನದಿ ಜೋಡಣೆ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಹಾವೇರಿ ನಗರದಲ್ಲೂ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. 20 ವರ್ಷಗಳಿಂದ ಕುಡಿಯುವ ನೀರು, ಒಳಚರಂಡಿ ಯೋಜನೆ ನನೆಗುದಿಗೆ ಬಿದ್ದಿದೆ. ನಗರದ ಸಮಸ್ಯೆಗಳ ಬಗ್ಗೆಯೂ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಪ್ರಮುಖರಾದ ಆನಂದ ಕಲಾಲ, ಶಿವಯೋಗಿ ಹುಲಿಕಂತಿಮಠ, ಆಂಜನೇಯ ಈಳಗೇರ, ಲಲಿತಾ ಗುಂಡೇನಹಳ್ಳಿ, ಹನುಮಂತಪ್ಪ ದಾಸರ, ಹರೀಶ ಇಂಗಳಗೊಂದಿ, ಮಂಜುನಾಥ ಮಲಗೋಡ, ಅಭಿಷೇಕ ಗುಡಗೂರ, ಬಸವರಾಜ ಗುಂಡೇನಹಳ್ಳಿ, ಶ್ರೀದೇವಿ ರೆಡ್ಡಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರಸ್ವತಿ ಮೂರ್ತಿ ವಿರೂಪ: ನಾಲ್ವರು ಆರೋಪಿಗಳ ಬಂಧನ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸತ್ತಿದೆ: ಬಸವರಾಜ ಬೊಮ್ಮಾಯಿ