ಸ್ವಾಮಿತ್ವಕ್ಕೆ ಘನತೆ ತಂದು ಕೊಟ್ಟ ಮಹಾತ್ಮರ ನಾಡು ಹಾವೇರಿ

KannadaprabhaNewsNetwork | Published : Jan 22, 2024 2:20 AM

ಸಾರಾಂಶ

ಶಿವಯೋಗದ ಮೂಲಕ ಗಳಿಸಿದ ಅಂತರಂಗದ ಶಕ್ತಿಯನ್ನು ಬಹಿರಂಗವಾಗಿ ಸಮಾಜ ಸುಧಾರಣೆ ಮಾಡುವುದು ಸ್ವಾಮಿತ್ವ ಲಕ್ಷಣವಾಗಿದ್ದು, ಅಂತಹ ಸ್ವಾಮಿತ್ವಕ್ಕೆ ಘನತೆ ತಂದು ಕೊಟ್ಟ ಮಹಾತ್ಮರ ನಾಡು ಹಾವೇರಿಯಾಗಿದೆ.

ಕನ್ನಡಪ್ರಭ ವಾರ್ತೆ ಹಾವೇರಿ

ಭಕ್ತರ ಭಕ್ತಿ ಮತ್ತು ಸ್ವಾಮಿಗಳ ವ್ಯಕ್ತಿತ್ವ ಒಂದು ಮಠದ ಗುಣಲಕ್ಷಣವಾಗಿದ್ದು, ಅವೆರೆಡು ಹೊಂದಾಣಿಕೆ ಇದ್ದಷ್ಟು ಮಠ ಮಾನ್ಯಗಳು ಸಮಾಜಕ್ಕೆ ದಾರಿ ದೀಪವಾಗುತ್ತವೆ. ಶಿವಯೋಗದ ಮೂಲಕ ಗಳಿಸಿದ ಅಂತರಂಗದ ಶಕ್ತಿಯನ್ನು ಬಹಿರಂಗವಾಗಿ ಸಮಾಜ ಸುಧಾರಣೆ ಮಾಡುವುದು ಸ್ವಾಮಿತ್ವ ಲಕ್ಷಣವಾಗಿದ್ದು, ಅಂತಹ ಸ್ವಾಮಿತ್ವಕ್ಕೆ ಘನತೆ ತಂದು ಕೊಟ್ಟ ಮಹಾತ್ಮರ ನಾಡು ಹಾವೇರಿಯಾಗಿದೆ ಎಂದು ಹುಬ್ಬಳ್ಳಿಯ ಮೂರುಸಾವಿರಮಠದ ಡಾ. ಗುರುಸಿದ್ಧರಾಜೇಂದ್ರ ಸ್ವಾಮೀಜಿ ಹೇಳಿದರು.

ನಗರದ ಶ್ರೀ ಶಿವಲಿಂಗೇಶ್ವರ ಮಹಾವಿದ್ಯಾಲಯದ ಆವರಣದಲ್ಲಿ ಹುಕ್ಕೇರಿಮಠದ ಲಿಂ. ಶಿವಲಿಂಗ ಸ್ವಾಮಿಗಳ ೭೮ನೇ ಮತ್ತು ಲಿಂ. ಶಿವಲಿಂಗ ಸ್ವಾಮಿಗಳ ೧೫ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ನಮ್ಮೂರ ಜಾತ್ರೆಯ ೫ನೇ ದಿನದ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಮಣಕವಾಡದ ಅನ್ನದಾನೇಶ್ವರಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಪ್ರಕೃತಿ ಭಗವಂತ ಕೃಪೆ. ಅದನ್ನು ಸಮಯೋಜಿತವಾಗಿ ಬಳಸಿ ಮುಂದಿನ ಜನಾಂಗಕ್ಕೂ ಬಿಟ್ಟುಕೊಡಬೇಕು. ಸತ್ಕಾರ ಮತ್ತು ಸಕರ್ಮಗಳನ್ನು ಮಾಡುವುದೇ ಬದುಕಿನ ಮೂಲ ಮಂತ್ರವಾಗಬೇಕು. ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿಗಳು ಇದರಿಂದ ಸಾಧ್ಯವಾಗುತ್ತವೆ ಎಂದು ಹೇಳಿದರು.

ಜಗತ್ತು ಆಧುನೀಕರಣವಾಗುತ್ತಾ ಇದೆ. ೫ಜಿ ಯುಗದಲ್ಲಿ ಗಂಜಿ ನೀಡುವ ರೈತನನ್ನು, ಗಡಿ ಕಾಯುವ ಯೋಧನನ್ನು ನಾವು ಸದಾ ಸ್ಮರಿಸಬೇಕು. ಇಂದು ನಾವು ಎಷ್ಟೇ ಮುಂದುವರೆದರೂ ರೈತ ಮತ್ತು ಯೋಧ ಇಲ್ಲದೇ ಇದ್ದರೆ ಬದುಕು ದುಸ್ತರವಾಗುತ್ತದೆ. ನಾವು ಪರಮಾತ್ಮನಲ್ಲಿ ಬೇಡುವಾಗ ಇವರಿಬ್ಬರನ್ನು ಸ್ಮರಿಸಬೇಕು, ಹುಟ್ಟಿದಾಗ ತಾಯಿ ಸಂತೋಷ ಪಟ್ಟಂತೆ, ಬೆಳೆಯುವಾಗ ತಂದೆ, ಬೆಳೆದು ನಿಂತಾಗ ಸಮಾಜ ಸಂತೋಷ ಪಡಬೇಕು ಎಂದು ಹೇಳಿದರು.

ರಾವೂರಿನ ಸಿದ್ಧಲಿಂಗೇಶ್ವರ ಸಂಸ್ಥಾನಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಇಂದು ಮಠಗಳಲ್ಲಿ ಸಮಾಜೋಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದರೆ ಅದಕ್ಕೆ ಹಾನಗಲ್ಲ ಕುಮಾರ ಮಹಾಸ್ವಾಮಿಗಳು ಕಾರಣ. ಸ್ವಾಮಿಗಳನ್ನು ತಯಾರು ಮಾಡುವ ಶಿವಯೋಗಮಂದಿರ ಸ್ಥಾಪನೆ ಮಾಡದೇ ಇದ್ದಿದ್ದರೆ, ಮಠಗಳು ಹಾಳು ಕೊಂಪೆಗಳಾಗುತ್ತಿದ್ದವು. ಸ್ವಾಮಿತ್ವವು ತಾನು ಕಹಿ ಉಂಡು ಸಮಾಜಕ್ಕೆ ಸಿಹಿ ನೀಡುವುದೇ ಆಗಿದೆ. ಇದಕ್ಕೆ ಕುಮಾರ ಸ್ವಾಮಿಗಳೇ ಪ್ರೇರಣೆ ಎಂದರು.

ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಸಂತ ಮಹಾತ್ಮರು ಲಿಂಗಾಂಗ ಸಾಮರಸ್ಯದಿಂದ ಆತ್ಮಕಲ್ಯಾಣ ಸಾಧಿಸಿರುತ್ತಾರೆ. ಅವರ ಪಾದ ಸ್ಪರ್ಶದಿಂದ ಮನುಷ್ಯನ ದೇಹ ಮತ್ತು ಮನಸ್ಸು ಶುದ್ಧವಾಗುತ್ತದೆ. ರಕ್ತಸಂಬಂಧವನ್ನು ದೂರವಿಟ್ಟು, ಸಮಾಜ ಸಂಬಂಧವನ್ನು ಬೆಳೆಸಿ, ನಂಬಿ ಬಂದ ಭಕ್ತರ ಕಲ್ಯಾಣ ಮಾಡುವುದೇ ಬದುಕಿನ ಗುರಿ ಮತ್ತು ಸಾಧನೆಯಾಗಿದೆ ಎಂದರು.

ಲಿಂಗ ಪೂಜೆ, ದೈವ ನಿಷ್ಠೆಯ ಜೊತೆಗೆ ಅನ್ನ, ಅರಿವು, ಆಶ್ರಯ ನೀಡಿ ಸಮಾಜ ಸುಧಾರಣೆಯೇ ಬದುಕಿನ ಮೂಲ ಮಂತ್ರವಾಗಬೇಕು. ಶ್ರೀ ಹುಕ್ಕೇರಿಮಠ ಇದೇ ದಾರಿಯಲ್ಲಿಯೇ ಇದ್ದು ಅದನ್ನು ಮುಂದುವರೆಸಿಕೊಂಡು, ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಮಾದನಹಿಪ್ಪರಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ ಮಾತನಾಡಿದರು. ಆಸಂಗಿಯ ವೀರಬಸವ ದೇವರು, ಕೂಡಲದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಶಾಸಕ ಬಸವರಾಜ ಶಿವಣ್ಣನವರ, ಸಂಜೀವಕುಮಾರ ನೀರಲಗಿ, ಆನಂದಸ್ವಾಮಿ ಗಡ್ಡದೇವರಮಠ, ಕೋಟ್ರೇಶಪ್ಪ ಬಸೇಗಣ್ಣಿ, ಎಸ್.ಎಸ್. ಕೂಡ್ಪಪ್ಪನವರ, ಮಲ್ಲಿಕಾರ್ಜುನ ಹಾವೇರಿ, ಸುರೇಶ ಮರಡಣ್ನನವರ, ಬಸವರಾಜ ಮಳಗಿ, ಅನ್ನಪೂರ್ಣ ಹಲಗಣ್ನನವರ, ರುದ್ರೇಶ ಚಿನ್ನಣ್ಣನವರ, ಮಹೇಶ ಚಿನ್ನಿಕಟ್ಟಿ, ಶಿವಯೋಗಿ ಹೂಲಿಕಂತಿಮಠ, ಲಲಿತಾ ಕುಂದೂರ, ಜಗದೀಶ ಕನವಳ್ಳಿ, ನವೀನ ಕುಂದೂರ, ಶಂಭುಲಿಂಗಪ್ಪ ಅಟವಾಳಗಿ, ವಿಜಯಕುಮಾರ ಕೂಡ್ಲಪ್ಪನವರ, ರೇಣುಕಾ ಮಡಿವಾಳರ, ಬಿ.ಬಸವರಾಜ ಇತರರು ಉಪಸ್ಥಿತರಿದ್ದರು.

ವನಿತಾ ಮಾಗನೂರ ಸ್ವಾಗತಿಸಿದರು. ಶಿವಪ್ರಸಾದ ದೇವರು ಮತ್ತು ನಾಗರಾಜ ನಡುವಿನಮಠ ನಿರೂಪಿಸಿದರು. ಆನಂದ ಅಟವಾಳಗಿ ವಂದಿಸಿದರು.

Share this article