ಕನ್ನಡಪ್ರಭ ವಾರ್ತೆ ಹಾಸನ/ಬೆಂಗಳೂರು
ಹಿಂದೆ ಮಂಡ್ಯ ಲೋಕಸಭೆ ಮತ್ತು ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸೋತಾಗ ನಿಖಿಲ್ ಕುಮಾರಸ್ವಾಮಿ ಅಭಿಮನ್ಯು ಆಗಿರಲಿಲ್ಲವೇ? ಈಗ ಉಪಚುನಾವಣೆಯಲ್ಲಿ ಇದ್ದಕ್ಕಿದ್ದಂತೆ ಅರ್ಜುನ ಆಗ್ತಾರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗಲೇ ಮಂಡ್ಯದಲ್ಲಿ, ನಂತರ ರಾಮನಗರದಲ್ಲಿ ನಿಖಿಲ್ ಸೋತಿದ್ದರು. ಆಗ ಅಭಿಮನ್ಯು ಆಗಿರಲಿಲ್ಲವೇ? ಈಗ ಇದ್ದಕ್ಕಿದ್ದಂತೆ ಅರ್ಜುನ ಆಗ್ತಾರಾ ಎಂದರು.ಸಚಿವ, ಶಾಸಕರೊಂದಿಗಿನ ಸಭೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉಪಚುನಾವಣೆ ಸಿದ್ಧತೆಗಳ ಬಗ್ಗೆ ಕಾರ್ಯಪ್ರವೃತ್ತರಾಗುವಂತೆ ಮನವಿ ಮಾಡಲು ಬೆಳಗ್ಗೆ ಸಚಿವರು, ಸಂಸದರು, ಶಾಸಕರೊಂದಿಗೆ ಸಭೆ ನಡೆಸಲಾಯಿತು. ಎಲ್ಲ ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವಿಗೆ ಶ್ರಮಿಸುವಂತೆ ತಿಳಿಸಲಾಯಿತು ಎಂದು ತಿಳಿಸಿದರು.3ನೇ ಬಾರಿಗೆ ನಿಖಿಲ್ ಕುಮಾರಸ್ವಾಮಿ ಚಕ್ರವ್ಯೂಹ ಭೇದಿಸ್ತಾರೆ: ಅಶೋಕ್ಚನ್ನಪಟ್ಟಣದ ಮೈತ್ರಿ ಅಭ್ಯರ್ಥಿ ನಿಖಿಲ್, ಈ ಹಿಂದೆ ಎರಡು ಬಾರಿ ಸೋತಿದ್ದಾರೆ. ಆದರೆ, ಮೂರನೇ ಬಾರಿ ಚಕ್ರವ್ಯೂಹವನ್ನು ಭೇದಿಸುತ್ತಾರೆ. ಅರ್ಜುನನ ರೀತಿ ಚಕ್ರವ್ಯೂಹ ಭೇದಿಸುವ ವಿಶ್ವಾಸವಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು. ಭಾನುವಾರ ಹಾಸನಾಂಬೆ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ನಿಖಿಲ್‌ಗೆ ಅಭಿಮನ್ಯು ಪಾತ್ರ ಬಿಟ್ಟು ಅರ್ಜುನನ ಪಾತ್ರ ಕೊಟ್ಟಿದ್ದೇವೆ. ಅರ್ಜುನನ ರೀತಿ ಚಕ್ರವ್ಯೂಹ ಭೇದಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದರು. ಬಿಜೆಪಿಯ ಎಲ್ಲಾ ನಾಯಕರು ಪ್ರಚಾರಕ್ಕೆ ಹೋಗುತ್ತಾರೆ. ಯಡಿಯೂರಪ್ಪ ಅವರು ಮೂರು ದಿನ ಟೈಂ ಕೊಟ್ಟಿದ್ದಾರೆ. ನಾನು, ಅಶ್ವಥ್ ನಾರಾಯಣ್, ಸದಾನಂದಗೌಡರು, ಲಿಂಗಾಯಿತ, ದಲಿತ, ಹಿಂದುಳಿದ ನಾಯಕರು ಎಲ್ಲರೂ ಹೋಗುತ್ತಿದ್ದೇವೆ ಎಂದರು.