ಆಧ್ಯಾತ್ಮಿಕ ಸಶಕ್ತಿಕರಣದಿಂದ ಸ್ವಚ್ಛ, ಸ್ವಾಸ್ಥ್ಯ ಸಮಾಜ ಉದ್ಘಾಟನೆ ,
ಸಾಧನೆಯ ಹಾದಿ ಸುಗಮವಲ್ಲ, ಛಲವಿದ್ದವರು ಮಾತ್ರ ಹಾದಿಯಲ್ಲಿ ಸಾಗಲು ಸಾಧ್ಯ. ಆ ರೀತಿ ವಿದ್ಯಾರ್ಥಿ ಗಳು ಅಪೇಕ್ಷೆ ಪಟ್ಟಂತ ಯಶಸ್ಸನ್ನು ಪಡೆಯಲು ಸಾಧನೆ ಹಾದಿಯಲ್ಲಿ ಸಾಗಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ನಗರದ ಬ್ರಹ್ಮಕುಮಾರೀಸ್ ಸಂಸ್ಥೆಯಲ್ಲಿ ನಡೆದ ಆಧ್ಯಾತ್ಮಿಕ ಸಶಕ್ತಿಕರಣದಿಂದ ಸ್ವಚ್ಛ, ಸ್ವಾಸ್ಥ್ಯ ಸಮಾಜ ಉದ್ಘಾಟನೆ ಹಾಗೂ ಎಸ್ಎಸ್ಎಲ್ ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.ಪ್ರತಿಭೆ ಎಲ್ಲರಲ್ಲಿದೆ, ಆಧುನಿಕತೆ ಬೆಳೆದಂತೆ ಸ್ಫರ್ಧೆಗಳು ಹೆಚ್ಚಿದೆ. ಹೀಗಾಗಿ ಇವರೆಡರ ನಡುವೆ ಸಾಮಾಜಿಕ ಜವಾಬ್ದಾರಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋದರೆ ಮಾತ್ರ ಯಶಸ್ಸು ನಿಶ್ಚಿತ ಎಂದ ಅವರು, ಮಕ್ಕಳು ವಿದ್ಯಾಕ್ಷೇತ್ರದಲ್ಲಿ ಸಾಧನೆಗೈಯಲು ಹೆಚ್ಚು ಶ್ರಮವಹಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ.ಗೋಪಾಲಕೃಷ್ಣ ಮಾತನಾಡಿ, ಸಮಾಜ ದಲ್ಲಿ ಒಂದು ಹಂತದಲ್ಲಿ ವಿದ್ಯಾರ್ಥಿಗಳು ಬೆಳೆಯಲು ಶಿಕ್ಷಣ ಬಹುಮುಖ್ಯ. ಬದುಕಿನಲ್ಲಿ ಹಲವಾರು ಅಡೆತಡೆಗಳು ಎದುರಾಗಲಿದೆ. ಎಲ್ಲವನ್ನೂ ಮೀರಿ ನಿಂತು ಶ್ರಮವಹಿಸಿ ವಿದ್ಯಾಭ್ಯಾಸದಲ್ಲಿ ಉನ್ನತ ಸ್ಥಾನ ಗಳಿಸಿದರೆ ಯಶಸ್ವಿ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ಮನಸ್ಸು, ಬುದ್ದಿ ಹಾಗೂ ಮೆದುಳನ್ನು ಆಧ್ಯಾತ್ಮಿಕ ಸಶಕ್ತಿಕರಣದಿಂದ ಸ್ವಚ್ಛವಾಗಿಡಬಹುದು. ಬಾಲ್ಯ ದಿಂದಲೇ ಮಕ್ಕಳು ಆಧ್ಮಾತ್ಮಿಕ ಅಭಿರುಚಿ ಬೆಳೆಸಿಕೊಂಡಲ್ಲಿ ಮುಂದಿನ ಉನ್ನತ ವ್ಯಾಸಂಗಕ್ಕೆ ಬಹಳಷ್ಟು ಸಹಕಾರಿ. ಮನಸ್ಸು ಹತೋಟಿ ಹಾಗೂ ಗೊಂದಲಗಳನ್ನು ನಿವಾರಿಸಲು ಆಧ್ಯಾತ್ಮಿಕ ಚಿಂತನೆ ಅನುಕೂಲವಾಗಲಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ಹಲವಾರು ಯುವಕರು ವಿದ್ಯಾವಂತರಾಗಿ ಕೆಲಸವಿಲ್ಲದೇ ಮನೆಯಲ್ಲೇ ಕೂರುವಂತಾ ಗಿದೆ. ಹಾಗಾಗಿ ಶಿಕ್ಷಣದ ಜೊತೆಗೆ ಬದುಕಿನ ಮೌಲ್ಯ ಅಳವಡಿಸಿಕೊಂಡು ಮುನ್ನಡೆದರೆ ಯಶಸ್ಸು ತಾನಾಗಿಯೇ ಲಭಿಸಲಿದೆ. ವೃತ್ತಿಯಲ್ಲಿ ಕಷ್ಟ ಸುಖ ಸಮಾನವಾಗಿ ತೆಗೆದುಕೊಂಡಲ್ಲಿ ಆದರ್ಶಪ್ರಾಯವಾಗಿ ಬೆಳವಣಿಗೆ ಹೊಂದಲು ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಜನರಲ್ ಬಿ.ಎಚ್.ರಾಜು, ಜಿಲ್ಲಾ ಕಾರಾಗೃಹ ಅಧೀಕ್ಷಕ ಎಸ್.ಎಸ್. ಮೇಟಿ, ಎಸ್ ಬಿಐ ಹಿರಿಯ ವ್ಯವಸ್ಥಾಪಕ ಕೃಷ್ಣ ಕಿಶೋರ್, ಜ್ಞಾನರಶ್ಮಿ ಶಾಲೆ ಸಂಸ್ಥಾಪಕ ನಂದಕುಮಾರ್ ಉಪಸ್ಥಿತರಿದ್ದರು.