ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆ ಅರಿವು ಮೂಡಿಸಿ

KannadaprabhaNewsNetwork |  
Published : Apr 02, 2026, 02:15 AM IST
೦೧ಕೆಪಿಎಲ್‌೦೯ ಗಂಗಾವತಿಯ ಅಂಬೇಡ್ಕರ್ ನಗರದ ಸಮುದಾಯ ಭವನದಲ್ಲಿ ಗಂಗಾವತಿ ನಗರ ಪ್ರದೇಶದ ಆಶಾ ಕಾರ್ಯಕರ್ತೆಯರಿಗೆ ಬೇಸಿಗೆ ಸಮಯದಲ್ಲಿ ಸಾರ್ವಜನಿಕರ ಆರೋಗ್ಯದ ಬಗ್ಗೆ ವಹಿಸಬೇಕಾದ ಮುಂಜಾಗ್ರತೆ ಕುರಿತು ಪುನರ್ ಮನನ ತರಬೇತಿ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. | Kannada Prabha

ಸಾರಾಂಶ

ಪ್ರತಿ ವರ್ಷ ಮಾರ್ಚ್ ತಿಂಗಳಿಂದ ಬೇಸಿಗೆ ಕಾಲ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಸಾರ್ವಜನಿಕರು ಆರೋಗ್ಯದ ಕುರಿತು ಹೆಚ್ಚಿನ ಗಮನ ಹರಿಸುವುದು ಅತ್ಯವಶ್ಯಕ

ಕೊಪ್ಪಳ: ಬೇಸಿಗೆ ಸಮಯದಲ್ಲಿ ಆರೋಗ್ಯ ರಕ್ಷಣೆಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಕೊಪ್ಪಳ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪೂಜಾರ ಹೇಳಿದರು.

ಗಂಗಾವತಿಯ ಸಮುದಾಯ ಭವನದಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗಂಗಾವತಿಯ ಅಂಬೇಡ್ಕರ್ ನಗರದಲ್ಲಿರುವ ನಗರ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಗಂಗಾವತಿ ನಗರ ಪ್ರದೇಶದ ಆಶಾ ಕಾರ್ಯಕರ್ತೆಯರಿಗೆ ಇತ್ತೀಚಿಗೆ ಹಮ್ಮಿಕೊಂಡಿದ್ದ ಬೇಸಿಗೆ ಸಮಯದಲ್ಲಿ ಸಾರ್ವಜನಿಕರ ಆರೋಗ್ಯದ ಬಗ್ಗೆ ವಹಿಸಬೇಕಾದ ಮುಂಜಾಗ್ರತೆ ಕುರಿತು ಪುನರ್ ಮನನ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿ ವರ್ಷ ಮಾರ್ಚ್ ತಿಂಗಳಿಂದ ಬೇಸಿಗೆ ಕಾಲ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಸಾರ್ವಜನಿಕರು ಆರೋಗ್ಯದ ಕುರಿತು ಹೆಚ್ಚಿನ ಗಮನ ಹರಿಸುವುದು ಅತ್ಯವಶ್ಯಕವಾಗಿದೆ. ಆಶಾ ಕಾರ್ಯಕರ್ತೆಯರು ಮನೆ-ಮನೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಸಿಲಿನಿಂದ ವೃದ್ಧರು, ಮಕ್ಕಳು, ಗರ್ಭಿಣಿಯರು ಹಾಗೂ ಸಹವ್ಯಾದಿ ಆರೋಗ್ಯದ ರಕ್ಷಣೆ ಪಡೆದುಕೊಳ್ಳಲು ಸಲಹೆ ನೀಡಬೇಕು. ಬೇಸಿಗೆ ಅವಧಿಯಲ್ಲಿ ಎಲ್ಲರೂ ಹೆಚ್ಚು ನೀರನ್ನು ಕುಡಿಯಬೇಕು. ಮಜ್ಜಿಗೆ ಅಥವಾ ಎಳನೀರು, ಹಣ್ಣಿನ ರಸ ಹೆಚ್ಚಾಗಿ ಸೇವಿಸಬಹುದು. ನೀರಿನ ಅಂಶ ಹೆಚ್ಚಾಗಿರುವ ತರಕಾರಿ ಅಥವಾ ಹಣ್ಣು ಸೇವಿಸುವುದು ಉತ್ತಮವಾಗಿದೆ.ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ವಿಶೇಷ ಅರಿವು ಮೂಡಿಸಬೇಕು ಎಂದರು.

ಬೇಸಿಗೆ ಸಂದರ್ಭದಲ್ಲಿ ಸಾರ್ವಜನಿಕರು ಸಡಿಲವಾದ ತೆಳು ಬಣ್ಣದ ಹತ್ತಿಯ ಬಟ್ಟೆ ಧರಿಸುವುದು ಸೂಕ್ತವಾಗಿದೆ.ಇದಲ್ಲದೇ ಗಾಳಿಯಾಡುವ ಪಾದರಕ್ಷೆ ಧರಿಸಿರಿ, ಹೊರಗಡೆ ತೆರಳುವ ವೇಳೆ ತಂಪು ಕನ್ನಡಕ, ಛತ್ರಿ, ಟವೆಲ್ ಅಥವಾ ಬಿಸಿಲಿನಿಂದ ಕಾಪಾಡಿಕೊಳ್ಳುವ ಸಾಮಾನ್ಯ ಕ್ರಮ ಪಾಲಿಸುವುದು ಅತ್ಯವಶ್ಯಕವಾಗಿದೆ. ರೇಡಿಯೊ-ದೂರದರ್ಶನ ಹಾಗೂ ದಿನಪತ್ರಿಕೆಗಳಲ್ಲಿ ಬಿಸಿಯಾದ ಗಾಳಿ ಅಥವಾ ಶಾಖ ತರಂಗ (ಹೀಟ್ ವೇವ್)ದ ಬಗ್ಗೆ ನೀಡುವ ಮಾಹಿತಿ ಅನುಸಾರ ದೈನಂದಿನ ಚಟುವಟಿಕೆ ಯೋಜಿಸಿಕೊಳ್ಳುವಂತೆ ಜನರಿಗೆ ತಿಳಿ ಹೇಳಿ.ಜಮೀನ ಕೆಲಸ, ರಸ್ತೆ ಕಾಮಗಾರಿ ಮತ್ತು ಮುಂತಾದ ಕೆಲಸಗಳು ಸೇರಿ ಬಿಸಿಲಿನಲ್ಲಿ ಹೊರಗಡೆ ಕಾರ್ಯ ನಿರ್ವಹಿಸುವವರು ಆದಷ್ಟು ಬೆಳಗ್ಗೆ 11 ಗಂಟೆಯೊಳಗೆ ಮತ್ತು ಸಂಜೆ 4 ಗಂಟೆ ನಂತರ ಕೆಲಸ ಕೈಗೊಳ್ಳುವುದು ಉತ್ತಮ. ಬೆಳಗ್ಗೆ 11 ರಿಂದ ಸಂಜೆ 4 ಗಂಟೆಯೊಳಗಿನ ಅವಧಿಯಲ್ಲಿ ಶ್ರಮದಾಯಕ ಕೆಲಸಗಳಿಂದ ವಿಶ್ರಾಂತಿ ಪಡೆಯುವುದು ಸೂಕ್ತ. ಹಾಗಾಗಿ ಈ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಬಿಸಿಲಿನಲ್ಲಿ ನಡೆಯುವಾಗ ಕಡ್ಡಾಯವಾಗಿ ಚಪ್ಪಲಿ ಧರಿಸಬೇಕು. ಟೀ, ಕಾಫಿ, ಹೆಚ್ಚು ಸಕ್ಕರೆ ಅಂಶ ಹೊಂದಿರುವ ಕಾರ್ಬೋನೇಟೆಡ್ ಪಾನೀಯ ಹಾಗೂ ಮದ್ಯಪಾನದಿಂದ ದೂರವಿರುವುದು ಸೂಕ್ತ. ಯಾವುದೇ ವ್ಯಕ್ತಿ ತೊದಲು ಮಾತು ಅಥವಾ ಅರ್ಥ ರಹಿತವಾಗಿ ಬಡಬಡಿಸಿದಲ್ಲಿ ಅವರನ್ನು ಕೂಡಲೇ ನೆರಳಿನ ಸ್ಥಳಕ್ಕೆ ಸ್ಥಳಾಂತರಿಸಬೇಕು. ಬಿಸಿಗಾಳಿ ಮತ್ತು ಅತಿಯಾದ ತಾಪಮಾನದಿಂದ ಆರೋಗ್ಯ ಸಮಸ್ಯೆ ಉಂಟಾದಲ್ಲಿ ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಅಥವಾ 108ಕ್ಕೆ ಕರೆ ಮಾಡುವ ಬಗ್ಗೆ ತಮ್ಮ ವ್ಯಾಪ್ತಿಯ ಸಾರ್ವಜನಿಕರಿಗೆ ವಿಶೇಷ ಜಾಗೃತಿ ಮೂಡಿಸಬೇಕು ಎಂದರು.

ಆರೋಗ್ಯ ನಿರೀಕ್ಷಣಾಧಿಕಾರಿ ರಮೇಶ್ ಎಚ್‌ಪಿವಿ ಲಸಿಕೆ, ಸಾಂಕ್ರಾಮಿಕ-ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಮತ್ತು ಜಯಪ್ರಕಾಶ್ ಕುಷ್ಠರೋಗ ನಿರ್ಮೂಲನೆ ಕುರಿತು ಹಾಗೂ ಮಲ್ಲಿಕಾರ್ಜುನ್ ಎಸ್.ಟಿ.ಎಸ್ ಕ್ಷಯರೋಗ ನಿರ್ಮೂಲನೆ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಹನುಮಂತವ್ವ, ಸುಮಿತ್ರಾ, ಎಸ್.ಟಿ.ಎಸ್ ಹುಸೇನಬಾಷಾ, ಲಿಂಕ್‌ವರ್ಕರ್ ಶಿವಪ್ರಸಾದ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರಿಗೆ ಸಾಮೂಹಿಕ ವಿವಾಹ ಅನುಕೂಲ: ಮುದುಕೇಶ್ವರ ಶಿವಾಚಾರ್ಯರು ಸ್ವಾಮಿಗಳು
ಲಿಂ. ಸಿದ್ಧಗಂಗಾ ಡಾ. ಶಿವಕುಮಾರ ಶ್ರೀ ಸದಾ ಸ್ಮರಣೀಯರು: ಜಗದೀಶ ಸಂಕನೂರ