ಕೊಪ್ಪಳ: ದೇಶಾದ್ಯಂತ ಆರಂಭವಾಗಿರುವ ಸ್ವಯಂ ಗಣತಿಯಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಭೀಮವ್ವ ಶಿಳ್ಳಿಕ್ಯಾತರ ಮಾಡಿಕೊಂಡಿದ್ದಲ್ಲದೆ ನಾನು ಮಾಡಿದ್ದೇನೆ, ನೀವು ಸ್ವಯಂ ಗಣತಿ ಮಾಡಿಕೊಳ್ಳಿ ಎಂದು ಕರೆ ನೀಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಮ್ಮ ಬೆಂಗಳೂರ ನಿವಾಸದಲ್ಲಿಯೇ ಸ್ವಯಂ ಗಣತಿ ದಾಖಲಿಸಿದ್ದರೇ ಇತ್ತ ಕೊಪ್ಪಳದಲ್ಲಿ ಸಂಸದ ರಾಜಶೇಖರ ಹಿಟ್ನಾಳ ತಮ್ಮ ಸಂಸದರ ಕಚೇರಿಯಲ್ಲಿ ಸಾರ್ವಜನಿಕವಾಗಿ ಸ್ವಯಂ ಗಣತಿ ಮಾಡಿಕೊಂಡಿದ್ದಾರೆ. ಇಬ್ಬರು ಸಹ ಸಾರ್ವಜನಿಕರಿಗೆ ದೇಶದ ಗಣತಿಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.
ಸ್ವಯಂ ಗಣತಿ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು, ತಮ್ಮ ಕುಟುಂಬ ಮತ್ತು ವೈಯಕ್ತಿಕ ಮಾಹಿತಿ ಕೇಳಿರುವಂತೆ ಭರ್ತಿ ಮಾಡಬೇಕು. ಗಣತಿಯ ಎಲ್ಲ ಮಾಹಿತಿ ಗೌಪ್ಯವಾಗಿರುತ್ತದೆ ಎಂದು ಹೇಳಿದ್ದಾರೆ.ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಖ್ಯನ್ಯಾಯಾಧೀಶ ಚಂದ್ರಶೇಖರ ಅವರು ಸಹ ಸ್ವಯಂ ಗಣತಿಯಲ್ಲಿ ಭಾಗವಹಿಸಿ ಗಣತಿ ಮಾಡಿಕೊಂಡಿದ್ದು, ಎಲ್ಲರೂ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಏ.1 ರಿಂದ ಏ.15 ವರೆಗೂ ನಡೆಯುವ ಸ್ವಯಂ ಗಣತಿಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಕರೆ ನೀಡಿದ್ದಾರೆ.
ಇದೊಂದು ಅತ್ಯಮೂಲ್ಯ ಕಾರ್ಯವಾಗಿದ್ದು, ಪ್ರತಿಯೊಬ್ಬರು ಭಾಗಿಯಾಗುವಂತೆ ಕೋರಿದರು. ಅತ್ಯಂತ ಸರಳವಾಗಿ ತಮ್ಮ ಮಾಹಿತಿ ದಾಖಲಿಸಲು ಸರ್ಕಾರ ಅವಕಾಶ ನೀಡಿದ್ದು, ಅದರಂತೆ ವೆಬ್ ಸೈಟ್ ತೆರೆದು, ದಾಖಲಿಸುವ ಮೂಲಕ ಗಣತಿ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದ್ದಾರೆ.
ಸ್ವಯಂ ಗಣತಿ ಕಾರ್ಯದಲ್ಲಿ ನಾನು ಭಾಗವಹಿಸಿದ್ದೇನೆ, ನಾನೇ ನನ್ನೆಲ್ಲಾ ಮಾಹಿತಿ ಭರ್ತಿ ಮಾಡಿ ದಾಖಲಿಸಿದ್ದು, ಪ್ರತಿಯೊಬ್ಬರು ದಾಖಲಿಸುವ ಮೂಲಕ ಕೈಜೋಡಿಸಬೇಕು ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದ್ದಾರೆ.