ಆರೋಗ್ಯ ಇಲಾಖೆ ಯೋಜನೆಗಳ ಅರಿವು ಕಾರ್ಯಕ್ರಮ

KannadaprabhaNewsNetwork |  
Published : Aug 25, 2025, 01:00 AM IST
ಚಿತ್ರ : 19ಎಂಡಿಕೆ2 : ಚುಚ್ಚುಮದ್ದು ಅರಿವು ಕಾರ್ಯಕ್ರಮ ನಡೆಯಿತು.  | Kannada Prabha

ಸಾರಾಂಶ

ಕಡಗದಾಳು ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆಗೆ ಸಂಬಂಧಿಸಿದ ಯೋಜನೆಗಳ ಅರಿವು ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಡಗದಾಳು ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆಗೆ ಸಂಬಂಧಿಸಿದ ಯೋಜನೆಗಳ ಅರಿವು ಕಾರ್ಯಕ್ರಮವು ನೆರವೇರಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್ ಅವರು ಇಲಾಖೆಯ ಯೋಜನೆಗಳ ಬಗ್ಗೆ ಬಾಲ್ಯ ವಿವಾಹದ ಕುರಿತು, ಸ್ತನ್ಯಪಾನ ಸಪ್ತಾಹ, ಪೋಷಣ್‌ ಟ್ರ‍್ಯಾಕರ್, ಪೋಷಣ್‌ ಅಭಿಯಾನದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯವರೊಂದಿಗೆ ಸೇರಿ ಮಹಿಳೆಯರ ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಪಟ್ಟ ಸಲಹೆ ಮಾರ್ಗದರ್ಶನ ನೀಡುವುದರೊಂದಿಗೆ ನೀಡಿದ ಸಲಹೆಗಳನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲಿಸಬೇಕು ಎಂದು ತಿಳಿಸಿದರು. ಭಾಗ್ಯಲಕ್ಷ್ಮಿ ಮತ್ತು ಮಾತೃವಂದನ ಫಲಾನುಭವಿಗಳನ್ನು ಭೇಟಿ ಮಾಡಿ ಹಣ ಪಾವತಿ ಯಾಗಿರುವ ಬಗ್ಗೆ ಮಾಹಿತಿ ಪಡೆದರು.ಸಮುದಾಯ ಆರೋಗ್ಯ ಅಧಿಕಾರಿ ಕಲ್ಮೇಶ್ ಅವರು ಎದೆ ಹಾಲಿನ ಮಹತ್ವ "ಹೊಸ ಹೆಜ್ಜೆ "ಕಾರ್ಯಕ್ರಮದಡಿ ವಿವಾಹಿತರು ತಾವು ಯಾವಾಗ ಪೋಷಕರಾಗಬೇಕು ಎಂಬುದನ್ನು ಅರಿತು ಮಾನಸಿಕವಾಗಿ ಸದೃಢರಾದಾಗ ಮಗುವನ್ನು ಪಡೆಯಲು ಮುಂದಾಗಬೇಕು ಎಂದು ತಿಳಿಸುತ್ತಾ ಅಂತರದ ಹೆರಿಗೆಯ ಬಗ್ಗೆ ಕುಟುಂಬ ಕಲ್ಯಾಣ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಆರೋಗ್ಯ ಸಹಾಯಕರಾದ ಕುಸುಮಾ ಅವರು ಚುಚ್ಚುಮದ್ದಿನ ಬಗ್ಗೆ ಮಾಹಿತಿ ನೀಡಿದರು.ಮೇಲ್ವಿಚಾರಕರು ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು, ಪ್ರತಿ ತಿಂಗಳು ಮಕ್ಕಳಿಗೆ ತಪ್ಪದೇ ತೂಕ ಎತ್ತರವನ್ನು ಹಾಕಿಸಿ ಮಾಹಿತಿಯನ್ನು ಪೋಷಕರು ನಿರ್ವಹಿಸಿಕೊಳ್ಳುವುದರಿಂದ ಮಕ್ಕಳ ಬೆಳವಣಿಗೆ ಸರಿಯಾಗಿ ಆಗುತ್ತಿರುವ ಬಗ್ಗೆ ತಿಳಿದುಕೊಳ್ಳಬಹುದಾಗಿದ್ದು, ಪೋಷಕರು ಪ್ರತಿ ತಿಂಗಳು ಐದನೇ ತಾರೀಖಿನೊಳಗೆ ಅಂಗನವಾಡಿಯಲ್ಲಿ ತೂಕ ಹಾಕಿಸಬೇಕೆಂದು ಕರೆ ನೀಡಿದರು. ಎಫ್‌ಆರ್‌ಎಸ್ ಬಳಕೆ ಬಗ್ಗೆ ಮಾಹಿತಿ ನೀಡಿದರು. ಸ್ಥಳೀಯವಾಗಿ ಸಿಗುವ ಸೊಪ್ಪು ತರಕಾರಿ ಹಣ್ಣುಗಳನ್ನು ಬಳಸಲು ಮಾಹಿತಿ ನೀಡಿದರು. ನುಗ್ಗೆ ಸೊಪ್ಪಿನ (ಮೊರೆಂಗಾ) ಮಹತ್ವದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ, ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಜಿಲ್ಲಾ ಮಿಷನ್ ಸಂಯೋಜಕರಾದ ಮಮತ ಅವರು ಮಾತನಾಡಿ, ಮಹಿಳೆಯರಿಗಾಗಿ ಜಿಲ್ಲಾ ಮಹಿಳಾ ಸಬಲೀಕಣ ಘಟಕವಿದ್ದು ಮಹಿಳೆಯರಿಗಾಗಿ ಕಾರ್ಯ ನಿರ್ವಹಿಸುತ್ತಿದ್ದು 181 ಮಹಿಳಾ ಸಹಾಯವಾಣಿ, 1098 ಮಕ್ಕಳ ಸಹಾಯವಾಣಿ, ಉದ್ಯೋಗಸ್ಥ ಮಹಿಳೆಯರಿಗೆ ಸುರಕ್ಷತೆ ಮತ್ತು ಭದ್ರತೆಗಾಗಿ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯದ ಸೌಲಭ್ಯವನ್ನು, ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಸಂದರ್ಭದಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಇದ್ದು ಸಮಸ್ಯೆಗಳಿದ್ದಲ್ಲಿ ಬಗೆಹರಿಸಿಕೊಳ್ಳುವಂತೆ ತಿಳಿಸಿದರು. ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಜೆಂಡರ್ ಸ್ಪೆಷಲೀಸ್ಟ್ ಕೇಶಿನಿ ಎಸ್.ಆರ್. ಹಾಗು ಪೋಷಣ್ ಅಭಿಯಾನದ ಜಿಲ್ಲಾ ಸಂಯೋಜರಾದ ನಿತಿನ್ ಅವರು ಆಶಾ ಕಾರ್ಯಕರ್ತೆ ಲೀಲಾವತಿ, ಅಂಗನವಾಡಿ ಕಾರ್ಯಕರ್ತೆ ಶೋಭಾ, ಸಹಾಯಕಿ ಹೇಮಲತಾ ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತವನ್ನು ಕಡಗದಾಳು ಅಂಗನವಾಡಿ ಕಾರ್ಯಕರ್ತೆ ಅನಿಲ ಕೆ.ಆರ್. ನಡೆಸಿದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ